ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ: ಬಾಗಿಲು ತೆರೆಯದ ಜನೌಷಧ ಕೇಂದ್ರ

ಬಡ ರೋಗಿಗಳಿಗೆ ತಪ್ಪದ ಕಿರಿಕಿರಿ
Published 18 ಮೇ 2024, 13:09 IST
Last Updated 18 ಮೇ 2024, 13:09 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಮೂರ್ನಾಲ್ಕು ತಿಂಗಳಿಂದ ಬಂದ್ ಆಗಿರುವ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿನ ಜನೌಷಧ ಕೇಂದ್ರದ ಬಾಗಿಲು ಮತ್ತೆ ಯಾವಾಗ ತೆರೆಯುತ್ತದೆ ಎಂದು ಬಡ ರೋಗಿಗಳು ಕಾಯುತ್ತಿದ್ದಾರೆ.

ಕೇಂದ್ರದಲ್ಲಿ ಅಗತ್ಯದ ಔಷಧಗಳು ಕಡಿಮೆ ಬೆಲೆಯಲ್ಲಿ ಬಡ ರೋಗಿಗಳಿಗೆ ಸಿಗುತ್ತಿದ್ದವು. ಆದರೆ ವಿವಿಧ ಕಾರಣಗಳಿಂದಾಗಿ ಬಂದ್ ಆಗಿರುವ ಕೇಂದ್ರ ಮತ್ತೆ ಆರಂಭಗೊಳ್ಳದೆ ಇರುವುದರಿಂದ ರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ.

ಬಿಪಿ, ಸುಗರ್, ಅಲರ್ಜಿ, ಚರ್ಮ ರೋಗ ಹೀಗೆ ಇನ್ನೂ ಹಲವು ರೋಗಗಳ ನಿಯಂತ್ರಣಕ್ಕಾಗಿ ರೋಗಿಗಳು ಔಷಧ ಸೇವಿಸಲೇಬೇಕಾದ ಅನಿವಾರ್ಯತೆ ಇದೆ. ಜನೌಷಧ ಕೇಂದ್ರದಲ್ಲಿ ಔಷಧಗಳು ಬಡ ರೋಗಿಗಳಿಗೆ ಕೈಗೆಟುಕುವ ಬೆಲೆಯಲ್ಲಿ ಮಾರಾಟ ಆಗುತ್ತಿದ್ದವು. ಆದರೆ ಕೇಂದ್ರ ಬಂದ್ ಆದಾಗಿನಿಂದ ದುಬಾರಿ ಬೆಲೆ ತೆತ್ತು ರೋಗಿಗಳು ಔಷಧ ಖರೀದಿಸಬೇಕಾಗಿದೆ.

ಇದು ಬಡವರಿಗೆ ಹೊರೆಯಾಗುತ್ತಿದೆ. ಜನೌಷಧ ಕೇಂದ್ರವನ್ನು ಮತ್ತೆ ಆರಂಭಿಸಬೇಕು ಎಂದು ರೋಗಿಗಳು ಮನವಿ ಮಾಡುತ್ತಲೇ ಇದ್ದಾರೆ. ಆದರೆ ಅವರ ಕೂಗು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮುಟ್ಟುತ್ತಿಲ್ಲ.

‘ಜನೌಷಧ ಕೇಂದ್ರವನ್ನು ಬೇಗನೇ ಶುರು ಮಾಡಬೇಕು. ಇಲ್ಲದಿದ್ದರೆ ಬಡ ರೋಗಿಗಳು ಔಷಧ ಸಿಗದೆ ಸಾಯಬೆಕಾಗುತ್ತದೆ. ಆದಷ್ಟು ಶೀಘ್ರ ಕೇಂದ್ರದ ಬಾಗಿಲನ್ನು ತೆಗೆಸಬೇಕು’ ಎಂದು ಲಕ್ಷ್ಮೇಶ್ವರದ ನಿವಾಸಿ ಪ್ರಕಾಶ ಗುತ್ತಲ ಆಗ್ರಹಿಸಿದರು.

‘ಜನೌಷಧ ಕೇಂದ್ರವನ್ನು ಮತ್ತೆ ಆರಂಭಿಸಲು ಇದ್ದ ತಾಂತ್ರಿಕ ಸಮಸ್ಯೆ ಬಗೆ ಹರಿಸಲು ಕ್ರಮಕೈಗೊಳ್ಳಲಾಗಿದ್ದು ಆದಷ್ಟು ಬೇಗನೆ ಮತ್ತೆ ಕೇಂದ್ರವನ್ನು ಆರಂಭಿಸಲಾಗುವುದು’ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಕಾಂತ ಕಾಟೆವಾಲೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT