ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಮನುಷ್ಯತ್ವದ ಬೀಜ ಬಿತ್ತುವ ಅನುಭವ ಕಥನ

‘ನಾ ದೈವದೊಳಗೋ ನನ್ನೊಳು ದೈವವೋ’ ಕೃತಿ ಲೋಕಾರ್ಪಣೆಗೊಳಿಸಿ ಚಂದ್ರಶೇಖರ ವಸ್ತ್ರದ ಅಭಿಮತ
Published 22 ಫೆಬ್ರುವರಿ 2024, 15:58 IST
Last Updated 22 ಫೆಬ್ರುವರಿ 2024, 15:58 IST
ಅಕ್ಷರ ಗಾತ್ರ

ಗದಗ: ‘ನಮ್ಮ ನಾಡು ವಿಭಜಕ ಸ್ಥಿತಿಯಲ್ಲಿದೆ. ಜಾತಿಗಳ ಕಾರಣದಿಂದ ಸೌಹಾರ್ದ ಕದಡಿ ಹೋಗುತ್ತಿದೆ. ಈ ಹೊತ್ತಿನಲ್ಲಿ ಪ್ರಕಟಗೊಂಡಿರುವ ವನಮಾಲಾ ಅವರ ‘ನಾ ದೈವದೊಳಗೋ ನನ್ನೊಳು ದೈವವೋ’ ಅನುಭವ ಕಥನ ಮನುಷ್ಯತ್ವದ ಬೀಜಗಳನ್ನು ಬಿತ್ತುತ್ತದೆ’ ಎಂದು ಹಿರಿಯ ಸಾಹಿತಿ ಚಂದ್ರಶೇಖರ ವಸ್ತ್ರದ ಹೇಳಿದರು.

ನಗರದ ಕೆ.ಎಲ್.ಇ.ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಸಭಾ ಭವನದಲ್ಲಿ ನಡೆದ ‘ಸಂಗಾತ ಪುಸ್ತಕ’ ಪ್ರಕಟಿಸಿರುವ ವನಮಾಲಾ ಕಟ್ಟೇಗೌಡರ್ ಅವರ ‘ನಾ ದೈವದೊಳಗೋ ನನ್ನೊಳು ದೈವವೋ’ ಅನುಭವ ಕಥನ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೆಲವರು ತಮ್ಮ ಸಾಧನೆಗಳನ್ನು ತಿಳಿಸಲು ಆತ್ಮಕತೆ ಬರೆದರೆ, ಮತ್ತೆ ಕೆಲವರು ಸೇಡು ತೀರಿಸಿಕೊಳ್ಳಲೆಂದು ಬರೆಯುತ್ತಾರೆ. ಆದರೆ, ಈ ಕೃತಿಯಲ್ಲಿ ವೈಯಕ್ತಿಕ ಅನುಭವಗಳು ಸಮಾಜದ ಜೊತೆ ಮಿಳಿತಗೊಂಡು ಬರುತ್ತವೆ. ಹಾಗಾಗಿ ಅದು ದೈವದ ಕತೆಯೂ ಹೌದು, ಅವರ ಕತೆಯೂ ಹೌದು’ ಎಂದರು.

‘ಕೆಲವು ಊರುಗಳಿಗೆ ವ್ಯಕ್ತಿತ್ವ ಇರುತ್ತದೆ. ಧಾರವಾಡ, ಮೈಸೂರುಗಳಿಗೆ ವ್ಯಕ್ತಿತ್ವವಿದ್ದರೆ ಹುಬ್ಬಳ್ಳಿ, ಬೆಂಗಳೂರಿಗೆ ವ್ಯಕ್ತಿತ್ವವಿಲ್ಲ. ಗದಗ-ಬೆಟಗೇರಿಗೂ ಒಂದು ವ್ಯಕ್ತಿತ್ವವಿದೆ. ಆದರೆ ನಿಧಾನವಾಗಿ ಗದಗ ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಆ ನೋವು ಈ ಕೃತಿಯಲ್ಲಿ ಎದ್ದು ಕಾಣುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಕೃತಿ ಪರಿಚಯಿಸಿದ ಸಾಹಿತಿ ಬಿ.ಎ.ಕೆಂಚರೆಡ್ಡಿ ಮಾತನಾಡಿ, ‘ಪರಂಪರೆಯೊಳಗೆ ನೋವಿದೆ, ಮುಲಾಮು ಕೂಡ ಅದರಲ್ಲಿಯೇ ಇದೆ ಎಂಬುದನ್ನು ಇಲ್ಲಿನ ಅನುಭವಗಳು ತಿಳಿಸುತ್ತವೆ. ಇದೊಂದು ವೈಚಾರಿಕ ಬರಹಗಳ ಗುಚ್ಛದಂತಿದೆ. ಯಾಕೆಂದರೆ ಪ್ರಶ್ನೆ ಮಾಡುವ ಮೂಲಕ ಇಲ್ಲಿ ಉತ್ತರ ಕಂಡುಕೊಳ್ಳುವ ಕ್ರಿಯೆ ಇದೆ. ಇದು ಗಾಂಧೀಜಿಯವರ ಹಿಂದ್ ಸ್ವರಾಜ್ ಓದಿದ ಅನುಭವ ನೀಡುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಅಧ್ಯಕ್ಷತೆ ವಹಿಸಿದ್ದ ಜ.ತೋಂಟದಾರ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಪಿ.ಜಿ.ಪಾಟೀಲ, ‘ಅಕ್ಷರ ಸಂಗಾತ’ ಪತ್ರಿಕೆ ಸಂಪಾದಕ ಟಿ.ಎಸ್.ಗೊರವರ, ಲೇಖಕಿ ವನಮಾಲಾ ಕಟ್ಟೇಗೌಡರ್ ಮಾತನಾಡಿದರು.

ಕವಿ ಸಂತೋಷ ಅಂಗಡಿ ಅನುಭವ ಕಥನ ವಾಚಿಸಿದರು. ತಿಪ್ಪಾನಾಯ್ಕ್ ಎಲ್. ನಿರೂಪಿಸಿದರು. ಪ್ರೊ. ಜಿ.ವಿಶ್ವನಾಥ ಸ್ವಾಗತಿಸಿದರು. ಮುಕ್ತಾ ಕಟ್ಟೇಗೌಡರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT