ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಪೊಲೀಸರ ಜತೆಗೆ ಚಕಮಕಿ; ಕಾರ್ಯಕರ್ತರ ಬಂಧನ

ಕರವೇ ವತಿಯಿಂದ ಅನ್ಯಭಾಷೆ ನಾಮಫಲಕ ತೆರವುಗೊಳಿಸಲು ಯತ್ನ
Published 5 ಮಾರ್ಚ್ 2024, 15:35 IST
Last Updated 5 ಮಾರ್ಚ್ 2024, 15:35 IST
ಅಕ್ಷರ ಗಾತ್ರ

ಗದಗ: ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸೂಚನೆ ಮೇರೆಗೆ ಮಂಗಳವಾರ ಅನ್ಯಭಾಷೆಯ ನಾಮಫಲಕ ತೆರವು ಜಾಗೃತಿ ರ‍್ಯಾಲಿ ನಡೆಸಿದ ಗದಗ ಜಿಲ್ಲಾ ಕರವೇ ಕಾರ್ಯಕರ್ತರು ಹಿಂದಿ, ಇಂಗ್ಲಿಷ್ ಸೇರಿ ಅನ್ಯಭಾಷೆಗಳಲ್ಲಿ ಅಳವಡಿಸಲಾಗಿದ್ದ ನಾಮಫಲಕಗಳನ್ನು ತೆರವುಗೊಳಿಸಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಕರವೇ ಕಾರ್ಯಕರ್ತರ ನಡುವೆ ಮಾತಿಕ ಚಕಮಕಿ ಕೂಡ ನಡೆಯಿತು.

ಮೊದಲು ತೋಂಟದಾರ್ಯ ಮಠದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅವಳಿ ನಗರದ ವ್ಯಾಪಾರಸ್ಥರಲ್ಲಿ ಅನ್ಯಭಾಷೆಯ ನಾಮಫಲಕ ಅಳವಡಿಸದಂತೆ ಮನವಿ ಮಾಡಿದರು. ಬೇರೆ ಭಾಷೆಯ ಫಲಕ ಅಳವಡಿಸಿದ ಅಂಗಡಿಗಳ ಮಾಲೀಕರಿಗೆ ಮಾರ್ಚ್‌ 13ರೊಳಗಾಗಿ ತೆರವುಗೊಳಿಸುವಂತೆ ಸೂಚಿಸಿದರು. ಇಲ್ಲವಾದರೆ ಕರವೇ ಕಾರ್ಯಕರ್ತರೇ ಅವುಗಳನ್ನು ತೆರವುಗೊಳಿಸಲಿದ್ದಾರೆ ಎಂದು ಎಚ್ಚರಿಸಿದರು.

ನಂತರ ಅನ್ಯಭಾಷೆಯಲ್ಲಿದ್ದ ದೊಡ್ಡ ದೊಡ್ಡ ನಾಮಫಲಕಗಳನ್ನು ಕಂಡು ಅವುಗಳನ್ನು ಕಿತ್ತೆಸೆಯಲು ಯತ್ನಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಅನ್ಯಭಾಷೆಗಳ ನಾಮಫಲಕಗಳನ್ನು ಕಿತ್ತೆಸೆಯಲು ಪಟ್ಟು ಹಿಡಿದ ಕಾರ್ಯಕರ್ತರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು.

ಕರವೇ ರಾಜ್ಯ ಕಾರ್ಯದರ್ಶಿ ಹನುಮಂತ ಅಬ್ಬಿಗೇರಿ ಮಾತನಾಡಿ, ‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಹೀಗಾಗಿ ಮಾರ್ಚ್‌ 13ರ ಒಳಗಾಗಿ ನಾಮಫಲಕ ತೆರವುಗೊಳಿಸದಿದ್ದಲ್ಲಿ ಕರವೇ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಂಡು ನಾಮ-ಫಲಕ ತೆರವು ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳಲಿದ್ದಾರೆ’ ಎಂದು ಎಚ್ಚರಿಸಿದರು.

ಕನ್ನಡದಲ್ಲಿ ಶೇ 60ರಷ್ಟು ನಾಮಫಲಕ ಅಳವಡಿಕೆಗೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಅದಾಗ್ಯೂ ವಾಣಿಜ್ಯ ಮಳಿಗೆ, ಶಿಕ್ಷಣ ಸಂಸ್ಥೆ, ಮಾಲ್, ಆಸ್ಪತ್ರೆ ಮೊದಲಾದವರು ಎಚ್ಚುತ್ತುಕೊಳ್ಳದ ಕಾರಣ ಎರಡನೇ ಹಂತದ ಹೋರಾಟ ಆರಂಭಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಡಳಿತ ಹಾಗೂ ನಗರಸಭೆ ಕನ್ನಡ ನಾಮಫಲಕ ಕಡ್ಡಾಯ ಆದೇಶ ಜಾರಿಗೊಳಿಸುವಲ್ಲಿ ವಿಫಲವಾಗಿವೆ. ಈ ಸಂಬಂಧ ವ್ಯಾಪಾರಿಗಳು, ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರ ಒಂದೇ ಒಂದು ಸಭೆ ನಡೆಸಿಲ್ಲ ಎಂದು ಆರೋಪಿಸಿದರು.

ಕನ್ನಡ ನಾಮಫಲಕ ಅಳವಡಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಡಿ, ಕಾರ್ಯಕರ್ತರಾದ ಚೇತನ ಕಣವಿ, ಹನುಮಂತ ಪೂಜಾರರ, ನಾಗೇಶ ಅಮರಾಪುರ, ಪವನಕುಮಾರ ಕರಿನಾಯಕ, ನಿಂಗನಗೌಡ ಮಾಲಿಪಾಟೀಲ, ತೌಸಿಫ್ ಢಾಲಾಯತ್, ವಿನಾಯಕ ಬದಿ, ದಾವಲಸಾಬ ತಹಶೀಲ್ದಾರ್, ಹುಸೇನಸಾಬ ಅಕ್ಕಿ, ಶ್ರೀಕಾಂತ ಪೂಜಾರ, ಇಸಾಕ್ ನದಾಫ್ ಇದ್ದರು.

ಕನ್ನಡ ನೆಲದಲ್ಲಿ ಕನ್ನಡ ಭಾಷೆ ಕಡೆಗಣನೆ ಸಹಿಸಲಾಗದು. ಜಿಲ್ಲೆಯಾದ್ಯಂತ ಕನ್ನಡದಲ್ಲಿ ಶೇ 60ರಷ್ಟು ನಾಮಫಲಕ ಅಳವಡಿಕೆ ಆದೇಶ ಪಾಲನೆ ಆಗುವವರೆಗೂ ಹೋರಾಟ ಮುಂದುವರಿಯಲಿದೆ

-ಹನುಮಂತ ಅಬ್ಬಿಗೇರಿ ಕರವೇ ರಾಜ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT