ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಹಟ್ಟಿ | ಕಾಮಗಾರಿ ಅಪೂರ್ಣ: ಶೇ 80ರಷ್ಟು ಬಿಲ್‌ ಪಾವತಿ

ಶಿರಹಟ್ಟಿ ತಾ.ಪಂ. ಕೆಡಿಪಿ ಸಭೆಯಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಆಕ್ರೋಶ
Published 17 ಜನವರಿ 2024, 14:54 IST
Last Updated 17 ಜನವರಿ 2024, 14:54 IST
ಅಕ್ಷರ ಗಾತ್ರ

ಶಿರಹಟ್ಟಿ: ‘ಮತಕ್ಷೇತ್ರದ 20 ಕೆರೆ ತುಂಬಿಸುವ ಯೋಜನೆಯಡಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ, ಶೇ 80ರಷ್ಟು ಬಿಲ್ ಪಾವತಿಸಲಾಗಿದೆ. ಕಾಮಗಾರಿಯ ಗುಣಮಟ್ಟತೆ ವರದಿ ನೀಡಲು ಅಧಿಕಾರಿಗಳನ್ನು ನೇಮಿಸಿ’ ಎಂದು ಶಾಸಕ ಡಾ.ಚಂದ್ರು ಲಮಾಣಿ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಬುಧವಾರ ನಡೆದ ತ್ರೈಮಾಸಿಕ ಪ್ರಗತಿ ಪರೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ವರದಿ ಉಲ್ಲೇಖಿಸಿದರು.

‘ತಾಲ್ಲೂಕಿನ ಇಟಗಿ ಹಾಗೂ ಜಾಲವಡಗಿ ಏತ ನೀರಾವರಿ ಕಾಮಗಾರಿ ಸ್ಥಗಿತಗೊಂಡು ಸುಮಾರು ವರ್ಷಗಳೇ ಕಳೆದಿವೆ. ಬಿಡುಗಡೆಯಾದ ₹135 ಕೋಟಿ ಅನುದಾನದಲ್ಲಿ, ₹115 ಕೋಟಿ ಬಿಲ್ ಪಾವತಿಸಲಾಗಿದೆ. ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅರಣ್ಯ ಪ್ರದೇಶದಲ್ಲಿ ಹಾದುಹೋಗುವ ಪೈಪ್‌ಲೈನ್‌ಗೆ ಪರವಾನಗಿ ದೊರೆತಿದ್ದರೂ ಕಾಮಗಾರಿ ಪ್ರಾರಂಭಿಸಿಲ್ಲ. ಈ ಕುರಿತು ಯಾವುದೇ ಮಾಹಿತಿ ನೀಡದ ಹಾಗೂ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ಅವರ ಸಂಬಳ ಕಡಿತಗೊಳಿಸಲಾಗುದು’ ಎಂದು ಎಚ್ಚರಿಕೆ ನೀಡಿದರು.

ಹಣ ನೀಡಬೇಡಿ: ‘ತಾಲ್ಲೂಕಿನ 56 ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲವು ದಿನ ಮಾತ್ರ ಚಾಲ್ತಿಯಲ್ಲಿರುತ್ತವೆ. ಹದಗೆಟ್ಟ ಘಟಕ ದುರಸ್ತಿಗೊಳಿಸಲು ಸಂಬಂಧಪಟ್ಟ ಏಜೆನ್ಸಿಯವರಿಗೆ ಸೂಚನೆ ನೀಡಿದರೂ ಪ್ರಯೋಜನವಾಗಿಲ್ಲ. 40ಕ್ಕೂ ಹೆಚ್ಚು ಘಟಕಗಳು ಬಂದ್ ಆಗಿದ್ದು, ಅವಶ್ಯವಿರದ ಕಡೆಯಿಂದ ಬೇಡಿಕೆ ಇರುವ ಕಡೆಗೆ ಘಟಕ ಸ್ಥಳಾಂತರಿಸಲು ಅವಕಾಶ ನೀಡಬೇಕು.  ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸದ ಏಜೆನ್ಸಿಗೆ ಹಣ ಬಿಡುಗಡೆ ಮಾಡಬಾರದು ಎಂದು’ ಅಧಿಕಾರಿಗೆ ಸೂಚನೆ ನೀಡಿದರು.

ಬೇಜವಾಬ್ದಾರಿ ಬೇಡ: ತಾಲ್ಲೂಕು ಅಧಿಕಾರಿಗಳಲ್ಲಿ ಬೇಜವಾಬ್ದಾರಿ ಹೆಚ್ಚುತ್ತಿದೆ. ಜನರಿಗೆ ಯೋಜನೆಗಳು ಸರಿಯಾಗಿ ತಲುಪದೇ, ನನ್ನ ಬಳಿ ಬಂದು ಸಮಸ್ಯೆ ಹೇಳುತ್ತಿದ್ದಾರೆ. ಬೇಜವಾಬ್ದಾರಿಯಿಂದ ವರ್ತಿಸುವ ಅಧಿಕಾರಿಗಳು ಕೆಲಸ ಮಾಡುವ ಅಗತ್ಯ ಇಲ್ಲ. ಸರ್ಕಾರದಿಂದ ಬಂದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವ ಮೂಲಕ ಪ್ರಾಮಾಣಿಕೆ ಸೇವೆ ಒದಗಿಸಬೇಕ’ ಎಂದರು.

ಮಧ್ಯಂತರ ಬೆಳೆವಿಮೆ: ‘ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ವಿಮೆ ಕಂಪನಿಗೆ ತಾಕೀತು ಮಾಡಿ, ಅಧಿಕಾರಿಗಳೊಂದಿಗೆ ಮತ್ತೆ ಬೆಳೆ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಿದ ನಂತರ  ಮಧ್ಯಂತರ ಬೆಳೆವಿಮೆ ಬಂದಿದೆ. ಅದು ನಮ್ಮ ತಾಲ್ಲೂಕಿನಿಂದ ಪ್ರಾರಂಭವಾಗಿದ್ದು ಹೆಮ್ಮೆಯ ವಿಷಯ’ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ನಿರ್ಮಲಾ, ತಹಶೀಲ್ದಾರ್‌ ಅನಿಲ ಬಡಿಗೇರ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ನಿಂಗಪ್ಪ ಓಲೇಕಾರ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

‘ಅರಣ್ಯ ಪ್ರದೇಶದ ಜನರಿಗೆ ಸೌಲಭ್ಯ ನೀಡಿ’

‘ಶಿರಹಟ್ಟಿ ತಾಲ್ಲೂಕಿನಲ್ಲಿ 11585 ಹೆಕ್ಟೇರ್ ಅರಣ್ಯ ಪ್ರದೇಶವಿದ್ದು ಅದರಲ್ಲಿ 7500 ಕಾಯ್ದಿಟ್ಟ ಅರಣ್ಯ ಪ್ರದೇಶವಿದೆ. ಈ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕೆಲ ಬಡ ಕುಟುಂಬಗಳು ಹೊಲ ಮತ್ತು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರಿಗೆ ಮೂಲಸೌಕರ್ಯ ಕಲ್ಪಿಸಲು ಅಡತಡೆಯಾಗುತ್ತಿದೆ’ ಎಂದು ಶಾಸಕರು ಹೇಳಿದರು. ‘ಈ ಭಾಗದ ಬಗರ್ ಹುಕುಂ ಸಾಗುವಳಿ ಜಮೀನಿನಲ್ಲಿ ಬೋರ್‌ವೆಲ್ ಹಾಗೂ ಮನೆಗಳಿಗೆ ನೀರು ವಿದ್ಯುತ್ ಸಂಪರ್ಕ ನೀಡಲು ಅರಣ್ಯಾಧಿಕಾರಿಗಳು ತಮ್ಮ ಮೇಲಧಿಕಾರಿಗಳಿಂದ ಅನುಮತಿ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.

‘ಅನರ್ಹ ಪಡಿತರ ಚೀಟಿ ರದ್ದು ಮಾಡಿ’

‘ತಾಲ್ಲೂಕಿನಲ್ಲಿ ಒಟ್ಟು 24107 ಪಡಿತರ ಚೀಟಿದಾರರಿದ್ದು ಪ್ರತಿ ಗ್ರಾಮದಲ್ಲಿ ಪಡಿತರ ವಿತರಣೆ ಆಗಬೇಕು. ದುಡಿಮೆಗಾಗಿ ಹೊರ ರಾಜ್ಯಗಳಿಗೆ‌ ಹೋದವರನ್ನು ಪಡಿತರ ಕೇಂದ್ರದವರು ಸಂಪರ್ಕಿಸಿ ಅವರಿಂದ ಒಟಿಪಿ ಪಡೆದು ಪಡಿತರ ವಿತರಣೆ ಮಾಡುತ್ತಿದ್ದಾರೆ. ಕೇಂದ್ರದವರೇ ಅಕ್ಕಿಯನ್ನು ತೆಗೆದುಕೊಂಡು ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಅದನ್ನು ತಡೆಗಟ್ಟಬೇಕು. ಅನರ್ಹ ಪಡಿತರಚೀಟಿಗಳನ್ನು ರದ್ದು ಮಾಡಬೇಕು’ ಎಂದು ಡಾ. ಚಂದ್ರು ಲಮಾಣಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT