ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ: ಸೌಲಭ್ಯವಿಲ್ಲದೆ ನರಳುತ್ತಿವೆ ಚೆಕ್‌ಪೋಸ್ಟ್‌

ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಆಹಾರ ಪೂರೈಕೆ, ಅಗತ್ಯ ಸಿಬ್ಬಂದಿಯೂ ಇಲ್ಲ
Published 27 ಮಾರ್ಚ್ 2024, 4:44 IST
Last Updated 27 ಮಾರ್ಚ್ 2024, 4:44 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಅಲ್ಲಿ ಸರಿಯಾಗಿ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಆಹಾರ ಪೂರೈಕೆ ಇಲ್ಲ. ಅಗತ್ಯ ಇರುವಷ್ಟು ಸಿಬ್ಬಂದಿಯೂ ಇಲ್ಲ. ಹೀಗೆ ‘ಇಲ್ಲ’ಗಳ ನಡುವೆ ತಾಲ್ಲೂಕಿನಲ್ಲಿಯ ಚೆಕ್‍ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನ ಗೋವನಾಳ ಮತ್ತು ರಾಮಗೇರಿ ಗ್ರಾಮಗಳಲ್ಲಿ ಚೆಕ್‍ಪೋಸ್ಟ್‌ಗಳನ್ನು ತೆರೆಯಲಾಗಿದೆ. ಆದರೆ ಅವು ಹೆಸರಿಗೆ ಮಾತ್ರ ಚೆಕ್‍ಪೋಸ್ಟ್‌ಗಳಾಗಿದ್ದು ಸೌಲಭ್ಯಗಳಿಲ್ಲದೇ ನರಳುತ್ತಿವೆ.

ಪೊಲೀಸ್, ಶಿಕ್ಷಣ, ಅಬಕಾರಿ, ಹೋಂ ಗಾರ್ಡ್ ಹೀಗೆ ನಾಲ್ಕು ಇಲಾಖೆಗಳ ಸಿಬ್ಬಂದಿ ಎಂಟು ತಾಸುಗಳಲ್ಲಿ ಪಾಳಿ ಪ್ರಕಾರ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಬೇಕಾಗಿದೆ. ಆದರೆ ಶಿಕ್ಷಣ, ಹೋಂ ಗಾರ್ಡ್ ಹೊರತುಪಡಿಸಿದರೆ ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಸಿಬ್ಬಂದಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ.

ಇಬ್ಬರು ಪೊಲೀಸರು ಮತ್ತು ಒಬ್ಬರು ಅಬಕಾರಿ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಒಬ್ಬ ಪೊಲೀಸ್ ಸಿಬ್ಬಂದಿ 12 ತಾಸು ಮತ್ತು ಅಬಕಾರಿ ಸಿಬ್ಬಂದಿ 24 ಗಂಟೆ ಕರ್ತವ್ಯ ನಿರ್ವಹಿಸಬೇಕಾಗಿದೆ. ಆದರೆ ಇದು ಸಿಬ್ಬಂದಿಗೆ ಕಿರಿಕಿರಿ ಆಗುತ್ತಿದೆ. ಇನ್ನು ಚೆಕ್‍ಪೋಸ್ಟ್‌ಗಳಲ್ಲಿ ಸರಿಯಾದ ನೆರಳಿನ ವ್ಯವಸ್ಥೆ ಕೂಡ ಮಾಡಿಲ್ಲ. ನೆತ್ತಿ ಸುಡುವ ಬಿಸಿಲಿನಲ್ಲಿ ಸಿಬ್ಬಂದಿ ವಾಹನ ತಪಾಸಣೆ ನಡೆಸಬೇಕಾದ ಅನಿವಾರ್ಯತೆ ಇದ್ದು ಬಿಸಿಲಿನ ತಾಪಕ್ಕೆ ಬಸವಳಿಯುತ್ತಿದ್ದಾರೆ.

ಕುಡಿಯುವ ನೀರು ಪೂರೈಸಲು ವ್ಯವಸ್ಥೆ

‘ಚೆಕ್‍ಪೋಸ್ಟ್‌ಗಳಲ್ಲಿನ ಸಣ್ಣಪುಟ್ಟ ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಬಿಸಿಲಿನಿಂದ ಪಾರಾಗಲು ವಿಶೇಷ ಕ್ಯಾಪ್‍ಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಇದರೊಂದಿಗೆ ಕುಡಿಯುವ ನೀರು ಪೂರೈಸಲು ವ್ಯವಸ್ಥೆ ಮಾಡಲಾಗುವುದು. ಸಿಬ್ಬಂದಿಗೆ ಊಟದ ವ್ಯವಸ್ಥೆ ಇಲ್ಲ. ಇನ್ನು ಸದ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಪೊಲೀಸರು ಅಲ್ಲಿ ನಿಯೋಜನೆಗೊಂಡಿದ್ದಾರೆ. ಪರೀಕ್ಷೆ ಮುಗಿದ ನಂತರ ಈ ಸಮಸ್ಯೆ ಬಗೆ ಹರಿಯಲಿದೆ’ ಎಂದು ತಹಶೀಲ್ದಾರ್‌ ವಾಸುದೇವ ಸ್ವಾಮಿ ತಿಳಿಸಿದರು. ‘ಅಬಕಾರಿ ಇಲಾಖೆಯಲ್ಲಿ ಇಬ್ಬರು ಸಿಬ್ಬಂದಿ ಇದ್ದು ಒಬ್ಬರು ರಾಮಗೇರಿ ಮತ್ತೊಬ್ಬರು ಗೋವನಾಳ ಚೆಕ್‍ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಶೇಷವಾಗಿ ಅಬಕಾರಿ ಸಿಬ್ಬಂದಿಗೆ ರಾತ್ರಿ ವೇಳೆಯಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT