ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತಕ್ಕಿದೆ ಕಲ್ಲು ಹೃದಯ ಕರಗಿಸುವ ಶಕ್ತಿ: ಬಸವರಾಜು

Published 12 ಡಿಸೆಂಬರ್ 2023, 13:02 IST
Last Updated 12 ಡಿಸೆಂಬರ್ 2023, 13:02 IST
ಅಕ್ಷರ ಗಾತ್ರ

ಗದಗ: ‘ಕಲ್ಲು ಹೃದಯವನ್ನು ಕರಗಿಸುವಂತಹ ಶಕ್ತಿ ಸಂಗೀತಕ್ಕೆ ಇದ್ದು, ಸಂಗೀತವನ್ನು ತಪಸ್ಸಿನಂತೆ ನಿರಂತರವಾಗಿ ಅಭ್ಯಾಸ ಮಾಡಿ ಒಲಿಸಿಕೊಳ್ಳಬೇಕು’ ಎಂದು ಮೈಸೂರಿನ ಸಾಹಿತಿ ಜಿ.ಪಿ. ಬಸವರಾಜು ಹೇಳಿದರು.

ಡಾ. ಪಿಜಿಎಎಸ್ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯ ಹಾಗೂ ಸಂಗೀತ ಸ್ನಾತಕೋತ್ತರ ಭಾಷಾ ವಿಭಾಗದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ವೀರೇಶ್ವರ ಪುಣ್ಯಾಶ್ರಮದವರೇ ಆದ ಹಿಂದೂಸ್ತಾನಿ ಸಂಗೀತಗಾರ ಪಂಡಿತ್‌ ಎಂ. ವೆಂಕಟೇಶ್ ಕುಮಾರ್ ಅವರನ್ನು ಕೋಲ್ಕತ್ತ, ಮುಂಬೈ, ಪುಣೆಯಂತಹ ಮಹಾನಗರಗಳ ಸಂಗೀತ ರಸಿಕರು ದೇವರೆಂದೇ ಕಾಣುತ್ತಾರೆ. ವಿದ್ಯಾರ್ಥಿಗಳಾದವರು ಪ್ರತಿದಿನ ಸಂಗೀತವನ್ನು 8–10 ಗಂಟೆಗಳ ಕಾಲ ಅಭ್ಯಾಸ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸಂಗೀತ ಕಲಿತವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಂತ ಉದಾಹರಣೆಗಳಿಲ್ಲ. ಮನಸ್ಸಿಗೆ ನಿರಂತರ ನೆಮ್ಮದಿ ನೀಡುವಂತಹ ಏಕೈಕ ವಿದ್ಯೆ ಎಂದರೆ ಅದು ಸಂಗೀತ’ ಎಂದು ಅವರು ಹೇಳಿದರು.

ಕನ್ನಡ ಉಪನ್ಯಾಸಕ ವಿ.ಎಂ. ಗುರುಮಠ ಮಾತನಾಡಿ, ‘ಸಾಹಿತಿ ಜಿ.ಪಿ. ಬಸವರಾಜು ಅವರು ಕನ್ನಡ ಸಾಹಿತ್ಯಕ್ಕೆ ಹಾಗೂ ಪತ್ರಿಕೋದ್ಯಮದ್ಯಕ್ಕೆ ಅಮೋಘ ಕೊಡುಗೆ ನೀಡಿದವರಾಗಿದ್ದು ಕಾವ್ಯ ಕಥೆ ವಿಮರ್ಶೆ ಇವರ ಆಸಕ್ತ ಕ್ಷೇತ್ರಗಳಾಗಿವೆ. ‘ಪ್ರಜಾವಾಣಿ’, ‘ಮಯೂರ’ ಪತ್ರಿಕೆಯಲ್ಲಿ ಅನೇಕ ವರ್ಷಗಳ ಕಾಲ ಕೆಲಸ ನಿರ್ವಹಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ’ ಎಂದು ಹೇಳಿದರು.

ಪ್ರಾಚಾರ್ಯ ಡಾ. ಮೃತ್ಯುಂಜಯ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎನ್.ಎಂ. ಶೇಖ್, ಲತಾ ವೃತ್ತಿಕೊಪ್ಪ, ತಬಲಾ ವಾದಕ ಶರಣಪ್ಪ ಕಲಬುರಗಿ, ಎನ್.ವಿ. ಅಕ್ಕಸಾಲಿ, ಕೊಡಗಾನೂರು ಹನುಮಂತ, ವಿಶ್ವನಾಥ್ ಹಿರೇಮಠ, ವೈ.ಆರ್‌. ಮೂಲಿಮನಿ ಹಾಗೂ ಯಶೋದಾ ಮಾದರ ಇದ್ದರು. ಆರಂಭದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಗಂಗಾಧರ್ ಹಿಡ್ಕಿಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT