ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಂಗಾಲೇಶ್ವರ ಶ್ರೀ ಬ್ಲಾಕ್‌ಮೇಲ್‌ ಪರಿಣತ: ಸೂಳಿಬಾವಿ

Published 15 ಏಪ್ರಿಲ್ 2024, 14:43 IST
Last Updated 15 ಏಪ್ರಿಲ್ 2024, 14:43 IST
ಅಕ್ಷರ ಗಾತ್ರ

ಗದಗ: ‘ದಿಂಗಾಲೇಶ್ವರ ಸ್ವಾಮೀಜಿ ರಾಜಕಾರಣಿಗಳಂತೆ ತಂತ್ರ– ಕುತಂತ್ರ ಮಾಡುವುದರಲ್ಲಿ ಎತ್ತಿದ ಕೈ. ಬ್ಲಾಕ್‌ಮೇಲ್‌ ಮಾಡುವುದರಲ್ಲೂ ನಿಸ್ಸೀಮ. ಅವರು ಮಠವನ್ನು ತ್ಯಜಿಸಿ, ವ್ಯಕ್ತಿತ್ವಕ್ಕೆ ಅನುಸಾರ ರಾಜಕೀಯ ಪಕ್ಷಕ್ಕೆ ಸೇರಬೇಕು. ಇಲ್ಲದಿದ್ದರೆ, ಅವರನ್ನು ಭಕ್ತರೇ ತ್ಯಜಿಸುವರು’ ಎಂದು ಸಾಹಿತಿ ಬಸವರಾಜ ಸೂಳಿಬಾವಿ ತಿಳಿಸಿದರು.

‘ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳುವ ದಿಂಗಾಲೇಶ್ವರ ಸ್ವಾಮೀಜಿ ತಮ್ಮ ಹೋರಾಟ ಪ್ರಲ್ಹಾದ ಜೋಶಿ ವಿರುದ್ಧವೇ ಹೊರತು ಬಿಜೆಪಿ ವಿರುದ್ಧವಲ್ಲ ಎನ್ನುತ್ತಾರೆ. ಜೋಶಿ ಅವರಿಂದ ಲಿಂಗಾಯತರಿಗೆ ಅನ್ಯಾಯವಾಗಿದೆ ಎನ್ನುತ್ತಾರೆ. ಆದರೆ, ಯಾವ ಸ್ವರೂಪದ್ದು ಎಂಬುದನ್ನು ಸ್ಪಷ್ಟಪಡಿಸಲ್ಲ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಿಜಾರ್ಥದಲ್ಲಿ ಹಿಂದೂ ಧರ್ಮದೊಳಗೆ ಎಲ್ಲ ಧರ್ಮಗಳನ್ನು ಆಪೋಶನ ಮಾಡುವ ಪ್ರಯತ್ನವನ್ನು ಬಿಜೆಪಿ ನಿರಂತರವಾಗಿ ಮಾಡುತ್ತಿದೆ. ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ನಡೆದಾಗ ಇದೇ ಕಾರಣಕ್ಕೆ ಬಿಜೆಪಿ ಅದನ್ನು ಬೆಂಬಲಿಸಲಿಲ್ಲ. ಅಷ್ಟೇ ಏಕೆ, ದಿಂಗಾಲೇಶ್ವರ ಸ್ವಾಮೀಜಿ ಕೂಡ ಇದನ್ನು ವಿರೋಧಿಸಿದ್ದರು. ಅಂಥವರು ಇವತ್ತು ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾರೆ. ಇದೇ ಮೊದಲಬಾರಿಗೆ ಅವರ ಬಾಯಿಯಿಂದ ಲಿಂಗಾಯತ ಎಂಬ ಪದ ಹೊರಬಂದಿದೆ’ ಎಂದು ಅವರು ತಿಳಿಸಿದರು.

‘ದಿಂಗಾಲೇಶ್ವರ ಸ್ವಾಮೀಜಿ ತಂತ್ರಗಳ ಮೂಲಕವೇ ಮೂರುಸಾವಿರ ಮಠಕ್ಕೆ ಪೀಠಾಧೀಶರಾಗಲು ಹೊರಟಿದ್ದರು. ಹುಬ್ಬಳ್ಳಿಯ ‌ರಾಜಕಾರಣಿಗಳು ಪಕ್ಷಾತೀತವಾಗಿ ಇದನ್ನು ವಿರೋಧಿಸಿದ್ದರು. ಅವರಲ್ಲಿ ಜೋಶಿ ಕೂಡ ಒಬ್ಬರು. ಆಗ ವಿರೋಧಿಸಿದವರ ವಿರುದ್ಧ ಸ್ಪರ್ಧೆ ಮಾಡುವುದು ಇವರ ಈಗಿನ ಉದ್ದೇಶ’ ಎಂದರು.

‘ಒಂದು ಊರಿನ ಸೌಹಾರ್ದ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಜನರ ವೈಮನಸ್ಸನ್ನು ಬಗೆಹರಿಸುವ ಪ್ರಯತ್ನ ಮಾಡಿಲ್ಲ. ಸ್ವಾಮೀಜಿ ವಿರುದ್ಧ ಹಲವು ಪ್ರಕರಣಗಳಿದ್ದು, ಅವರ ಬಂಧನಕ್ಕೆ ಒತ್ತಾಯಿಸಿ ನಿರಂತರ ಹೋರಾಟ ಮಾಡಿದ್ದೇವೆ. ಸ್ವಾಮಿತ್ವಕ್ಕೆ ಬೇರೆ ಅರ್ಥ ಇದೆ. ಆದರೆ, ಸ್ವಾಮಿ ಅನ್ನಿಸಿಕೊಳ್ಳುವ ಯಾವ ಅರ್ಹತೆಯೂ ಇವರಿಗೆ ಇಲ್ಲ’ ಎಂದರು.

ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ

‘ಸ್ಪರ್ಧಿಸದಂತೆ ದಿಂಗಾಲೇಶ್ವರ ಸ್ವಾಮೀಜಿಗೆ ಮನವಿ’

ಹುಬ್ಬಳ್ಳಿ: 'ಧಾರವಾಡ‌ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯದಂತೆ ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಮತ್ತೊಮ್ಮೆ ಮನವಿ ಮಾಡುವೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು 'ಕ್ಷೇತ್ರದ ಜನ ಪಕ್ಷದ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಇದ್ದಾರೆ. ಅವರ ವಿರುದ್ಧ ಸ್ಪರ್ಧಿಸುವ ದುಸ್ಸಾಹಸಕ್ಕೆ ಸ್ವಾಮೀಜಿ ಕೈಹಾಕಬಾರದು. ಯಾವುದೇ ಕಾರಣಕ್ಕೂ ಸ್ಪರ್ಧಿಸದಂತೆ ಅವರನ್ನು ಕೋರುವೆ. ಮುಂದೆ ಏನು ತೀರ್ಮಾನ ಕೈಗೊಳ್ಳುತ್ತಾರೆ ನೋಡೋಣ' ಎಂದರು. ‘ರಾಜ್ಯದಲ್ಲಿ ಬಿಜೆಪಿ ಪ್ರಧಾನಿ ಮೋದಿ ಪರ ಅಲೆ ಇದೆ. ಈ ಕ್ಷೇತ್ರದಲ್ಲಿ ಜೋಶಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಮನೆ ಮನೆಗೆ ಗೊತ್ತಿದೆ. ಅವರೊಬ್ಬ ಪ್ರಬುದ್ಧ ರಾಜಕಾರಣಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT