ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಹಬ್ಬಕ್ಕೆ ಸಿದ್ಧಗೊಂಡ ಗದಗ ಜಿಲ್ಲೆ, 959 ಮತಗಟ್ಟೆ ;4236 ಸಿಬ್ಬಂದಿ ನೇಮಕ

23ರಂದು ಮತದಾನ
Last Updated 22 ಏಪ್ರಿಲ್ 2019, 13:17 IST
ಅಕ್ಷರ ಗಾತ್ರ

ಗದಗ: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ಸಂಜೆ 6ಗಂಟೆಗೆ ತೆರೆಬಿದ್ದಿದ್ದು, ಪ್ರಜಾಪ್ರಭುತ್ವದ ದೊಡ್ಡ ಸಂಭ್ರಮವಾದ ಚುನಾವಣಾ ಹಬ್ಬಕ್ಕೆ ಜಿಲ್ಲೆ ಸಿದ್ಧಗೊಂಡಿದೆ. ಏ.23ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಮತದಾರರು ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಬಹುದಾಗಿದೆ.

ಗದಗ ಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ 5ನೇ ಲೋಕಸಭಾ ಚುನಾವಣೆ ಇದು. ಜಿಲ್ಲೆಯ ಗದಗ, ರೋಣ ಮತ್ತು ಶಿರಹಟ್ಟಿ ವಿಧಾನಸಭಾ ಕ್ಷೇತ್ರಗಳು ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಮತ್ತು ನರಗುಂದ ವಿಧಾನಸಭಾ ಕ್ಷೇತ್ರ ಬಾಗಲಕೋಟೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಇದೇ ಮೊದಲ ಬಾರಿಗೆ ಹಾವೇರಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಜಿಲ್ಲೆಯ ಅಭ್ಯರ್ಥಿಗೆ ಅವಕಾಶ ಲಭಿಸಿದೆ.

ಜಿಲ್ಲೆಯಲ್ಲಿ ಒಟ್ಟು 959 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 740 ಮತಗಟ್ಟೆಗಳು ಮತ್ತು ಬಾಗಲಕೋಟೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 219 ಮತಗಟ್ಟೆಗಳು ಬರುತ್ತವೆ. ಚುನಾವಣಾ ಕಾರ್ಯಕ್ಕಾಗಿ ಒಟ್ಟು 4236 ಸಿಬ್ಬಂದಿ ನಿಯೋಜಿಸಲಾಗಿದೆ. ಒಟ್ಟು 188 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ.

ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಚುರುಕು ಪಡೆದುಕೊಂಡಿತ್ತು. ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲು ಹಿರಿಯ ಮುಖಂಡರು ಜಿಲ್ಲೆಗೆ ಭೇಟಿ ನೀಡಿದ್ದರು. ಗ್ರಾಮಾಂತರ ಪ್ರದೇಶಗಳಲ್ಲಿ ಮನೆಮನೆಗೆ ಭೇಟಿ ಮೂಲಕ ಪ್ರಾರಂಭಗೊಂಡ ಚುನಾವಣಾ ಪ್ರಚಾರ ಕಳೆದ ಎರಡು ವಾರಗಳಿಂದ ಅಬ್ಬರ ಪಡೆದುಕೊಂಡಿತ್ತು. ಅಭ್ಯರ್ಥಿಗಳು ರೋಡ್‌ಶೋ, ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದ್ದರು.

ಜಿಲ್ಲಾಡಳಿತ ಸಿದ್ಧತೆ: ಜಿಲ್ಲೆಯಲ್ಲಿ ನ್ಯಾಯಸಮ್ಮತವಾದ ಮತ್ತು ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತ ಕ್ರಮ ವಹಿಸಿದೆ. ಈಗಾಗಲೇ ಜಿಲ್ಲಾ ಸ್ವೀಪ್‌ ಸಮಿತಿಯು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದೆ. ಮತದಾನದ ಪ್ರಮಾಣ ಹೆಚ್ಚಿಸಲು ಜಾಗೃತಿ ಮೂಡಿಸಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಜ.16ರ ನಂತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ತನಕ ಹೊಸದಾಗಿ 13,335 ಸೇರ್ಪಡೆಗೊಂಡಿದ್ದಾರೆ. ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಈ ಪರಿಷ್ಕರಣೆ ಕಾರ್ಯ ಮಹತ್ವ ಪಡೆದುಕೊಂಡಿದೆ. ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಂತೆ 4.30 ಲಕ್ಷ ಪುರುಷ, 4.23 ಲಕ್ಷ ಮಹಿಳೆ ಮತ್ತು 53 ಇತರೆ ಮತದಾರರು ಸೇರಿ ಒಟ್ಟು 8.54 ಲಕ್ಷ ಮತದಾರರಿದ್ದಾರೆ. ಮರಣ, ಸ್ಥಳ ಬದಲಾವಣೆ, ಪುನರಾವರ್ತನೆಯಿಂದ ಹಿಂದಿನ ಮತದಾರರ ಪಟ್ಟಿಯಿಂದ 2,671 ಪುರುಷ ಮತ್ತು 2867 ಮಹಿಳಾ ಮತದಾರರು ಸೇರಿ ಒಟ್ಟು 5,538 ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ.

ಮಹಿಳಾ ಮತಗಟ್ಟೆ: ಚುನಾವಣಾ ಆಯೋಗದ ಸೂಚನೆಯಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮೂರರಂತೆ ಒಟ್ಟು 12 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ದಿನ ಈ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಸಂಪೂರ್ಣ ಸಿಬ್ಬಂದಿ ಮಹಿಳೆಯರೇ ಆಗಿರುತ್ತಾರೆ. ಇದರ ಜತೆಗೆ ಗದುಗಿನ ಎಪಿಎಂಸಿ ಆವರಣದಲ್ಲಿ ಅಂಗವಿಕಲರ ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದೆ. ಇಲ್ಲಿನ ಮತಗಟ್ಟೆ ಸಂಖ್ಯೆ– 102ರಲ್ಲಿ ಸಂಪೂರ್ಣ ಅಂಗವಿಕಲ ಅಧಿಕಾರಿಗಳೇ ಕಾರ್ಯನಿರ್ವಹಿಸಲಿದ್ದಾರೆ.

ಮತದಾರರಿಗೆ ಸಹಾಯ: ಮತದಾನ ಮಾಡಲು ಬರುವ ಮತದಾರರಿಗೆ, ಅವರ ಹೆಸರು, ಕ್ರಮ ಸಂಖ್ಯೆ ಹಾಗೂ ಮತಗಟ್ಟೆ ವಿವರ ಒಳಗೊಂಡ ಮಾಹಿತಿ ಪ್ರತಿಯನ್ನು ಈಗಾಗಲೇ ವಿತರಿಸಲಾಗಿದೆ. ಇದಲ್ಲದೆ, ಮತದಾನದ ದಿನ, ಅಂಗವಿಕಲರು, ಹಿರಿಯ ನಾಗರಿಕರು ಸರದಿಗಾಗಿ ಕಾಯದೇ ಮತ ಚಲಾಯಿಸಲು ಸಹಾಯಕರೊಬ್ಬರನ್ನು ಪ್ರತಿ ಮತಗಟ್ಟೆಗೆ ನಿಯೋಜಿಸಲಾಗಿದೆ.

ಮತದಾನಕ್ಕೆ ಅವಶ್ಯ ದಾಖಲೆ: ಮತದಾರರ ಗುರುತಿನ ಚೀಟಿ ಇಲ್ಲದಿದ್ದಲ್ಲಿ, ಪಾಸ್‌ಪೋರ್ಟ್‌, ಡ್ರೈವಿಂಗ್ ಲೈಸೆನ್ಸ್, ಕೇಂದ್ರ,ರಾಜ್ಯ ಸರ್ಕಾರ, ಸಾರ್ವಜನಿಕ ಕಂಪನಿಗಳು ನೀಡಿರುವ ಭಾವಚಿತ್ರ ಇರುವ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿಯ ಪಾಸ್‌ಬುಕ್‌, ಪಾನ್‌ ಕಾರ್ಡ್‌, ನರೇಗಾ ಉದ್ಯೋಗ ಪತ್ರ, ಗ್ಯಾಸ್ ಏಜೆನ್ಸಿಗಳು ವಿತರಿಸುವ ಗುರುತಿನ ಚೀಟಿ, ಆರೋಗ್ಯ ವಿಮಾ ಗುರುತಿನ ಚೀಟಿ, ಆಧಾರ್ ಕಾರ್ಡ್‌ ಇವುಗಳಲ್ಲಿ ಯಾವುದಾದರೂ ಒಂದು ದಾಖಲಾತಿ ಹಾಜರು ಪಡಿಸಿ ಮತ ಚಲಾಯಿಸಬಹುದು.

ಕ್ಷೇತ್ರವಾರು ಮತದಾರರ ಪಟ್ಟಿ

ಕ್ಷೇತ್ರ; ಪುರುಷ; ಮಹಿಳೆ; ಇತರೆ; ಒಟ್ಟು

ಗದಗ 1,09,362; 1,09,210; 21; 2,18,593

ಶಿರಹಟ್ಟಿ 1,08,400; 1,05,782; 8; 2,14,190

ರೋಣ 1,13,655; 1,12,346; 14; 2,26,015

ನರಗುಂದ 95,295; 92,188; 6; 1,87,489

ಒಟ್ಟು 4,26,712; 4,19,526; 49; 8,46,287

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT