ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ–ಗದಗ ಲೋಕಸಭಾ ಕ್ಷೇತ್ರ | ಗ್ಯಾರಂಟಿ ಬಲವೋ; ಮೋದಿ ಅಲೆಯೋ?

ಫಲಿತಾಂಶಕ್ಕೆ ಕ್ಷಣಗಣನೆ: ಯಾರಿಗೆ ಒಲಿಯಲಿದೆ ಹಾವೇರಿ–ಗದಗ ಲೋಕಸಭಾ ಕ್ಷೇತ್ರ
Published 4 ಜೂನ್ 2024, 4:22 IST
Last Updated 4 ಜೂನ್ 2024, 4:22 IST
ಅಕ್ಷರ ಗಾತ್ರ

ಗದಗ: ಹಾವೇರಿ–ಗದಗ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟಗೊಳ್ಳಲಿದ್ದು, ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಗಳ ಬಲ ಇದೆಯೋ ಅಥವಾ ಮೋದಿ ಅಲೆಯ ಪ್ರಭಾವ ಇದೆಯೋ ಎಂಬುದನ್ನು ಬಹಿರಂಗಪಡಿಸಲಿದೆ.

ಕಾಂಗ್ರೆಸ್‌ನಿಂದ ಯುವನಾಯಕ ಆನಂದಸ್ವಾಮಿ ಗಡ್ಡದೇವರಮಠ ಕಣದಲ್ಲಿದ್ದರೆ; ಇವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಹಿರಿಯ ಕಟ್ಟಾಳು ಬಸವರಾಜ ಬೊಮ್ಮಾಯಿ ಬಿಜೆಪಿಯಿಂದ ತೊಡೆ ತಟ್ಟಿದ್ದರು. ಹಾವೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟಿತ್ತು. ಇಬ್ಬರ ಕದನದಲ್ಲಿ ಯಾರ ಬಲ ಹೆಚ್ಚು ಎಂಬುದು ಇಂದೇ ತಿಳಿಯಲಿದೆ.

ಹಾವೇರಿ ಕ್ಷೇತ್ರವನ್ನು ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದಿದ್ದ ಎರಡೂ ಪಕ್ಷಗಳ ಅಭ್ಯರ್ಥಿಗಳು ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಬೆವರು ಸುರಿಸಿದ್ದರು. ಕಾಂಗ್ರೆಸ್‌ನವರು ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳಿದರೆ; ಬಿಜೆಪಿಯವರು ಮೋದಿ ನಾಮಬಲವನ್ನೇ ಹೆಚ್ಚು ನಂಬಿಕೊಂಡು ಮತಬೇಟೆ ಆಡಿದ್ದರು.

ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ಟಿಕೆಟ್‌ ಘೋಷಣೆಯಾದ ದಿನದಿಂದಲೂ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಕ್ಷೇತ್ರ ವ್ಯಾಪ್ತಿಯಲ್ಲಿನ ಪ್ರತಿ ಹಳ್ಳಿಯ ಜನರನ್ನು ತಲುಪಿ ಬಂದಿದ್ದರು. ಕಾಂಗ್ರೆಸ್‌ನ ಯುವನಾಯಕ ಆನಂದಸ್ವಾಮಿ ಅವರನ್ನು ಗೆಲ್ಲಿಸಲೇಬೇಕು ಎಂಬ ಉದ್ದೇಶದಿಂದ ಹಾವೇರಿ ಮತ್ತು ಗದಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಏಳು ಮಂದಿ ಕಾಂಗ್ರೆಸ್‌ ಶಾಸಕರು, ಸಚಿವರು ಜತೆಗೂಡಿ ಪ್ರಚಾರ ನಡೆಸಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ ನಾಯಕರು ಹಾವೇರಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಈ ಬಾರಿ ‘ಮಹಾಲಕ್ಷ್ಮಿ’ ಎಂಬ ಟ್ರಂಪ್‌ ಕಾರ್ಡ್‌ ಬಳಕೆ ಮಾಡಿದ್ದಾರೆ. ಹಳ್ಳಿಹಳ್ಳಿಯಲ್ಲಿನ ಪ್ರತಿ ಮನೆಗೆ ತೆರಳಿ ಮಹಿಳೆಯರನ್ನು ಭೇಟಿ ಮಾಡಿ ಅವರಿಗೆ ಗ್ಯಾರಂಟಿ ಕಾರ್ಡ್‌ ಕೊಟ್ಟಿದ್ದಾರೆ.

‘ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮಹಿಳೆಗೆ ಮಾಸಿಕ ₹8,500 ಜತೆಗೆ ರಾಜ್ಯದ ಗೃಹಲಕ್ಷ್ಮಿ ಹಣ ₹2,000 ಸೇರಿ ಒಟ್ಟು ₹10,500 ನೀಡಲಾಗುತ್ತದೆ’ ಎಂಬುದನ್ನು ‘ಒತ್ತಿ, ಒತ್ತಿ’ ಹೇಳಿದ್ದಾರೆ. ಮಹಿಳಾ ಮತದಾರರ ಮನಗೆಲ್ಲುವ ಅವರ ಈ ಪ್ರಯತ್ನ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬ ಪ್ರಶ್ನೆಗೆ ಇಂದಿನ ಫಲಿತಾಂಶ ಉತ್ತರಿಸಲಿದೆ.

ಇತ್ತ, ಬಿಜೆಪಿಯಿಂದ ಕಣದಲ್ಲಿದ್ದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದವರು. ರಾಜ್ಯದ ಜತೆಗೆ ಪರಿಚಿತರು. ಹಾವೇರಿ– ಗದಗ ಜಿಲ್ಲೆಯ ಜನರಿಗೆ ಪರಮಾಪ್ತರು. ಟಿಕೆಟ್‌ ಘೋಷಣೆಯಾದ ನಂತರ ಇವರೂ ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಳ್ಳಿಗಳನ್ನು ಸುತ್ತಾಡಿದ್ದರು. ಜನರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದರು.

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ ಹಾವೇರಿ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದರು. ಟಿಕೆಟ್‌ ಪಡೆಯಲು ತಂದೆಯ ಮೂಲಕ ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ, ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿನ ವರದಿಯಿಂದ ಅವರಿಗೆ ಟಿಕೆಟ್‌ ತಪ್ಪಿತು. ಬೊಮ್ಮಾಯಿ ಅಭ್ಯರ್ಥಿಯಾದರು.

‘ಕೆ.ಇ.ಕಾಂತೇಶಗೆ ಟಿಕೆಟ್‌ ನೀಡಬೇಕು, ಇಲ್ಲವಾದಲ್ಲಿ ಕುರುಬ ಸಮಾಜದ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ’ ಎಂದು ಜಿಲ್ಲಾ ಕುರುಬ ಸಮಾಜದ ಮುಖಂಡರು ಸುದ್ದಿಗೋಷ್ಠಿ ನಡೆಸಿ ಗುಟುರು ಹಾಕಿದ್ದರು. ಆದರೆ, ಅವರ ಪ್ರತಿರೋಧದ ಶಕ್ತಿ ದಿನೇದಿನೇ ಕ್ಷೀಣಿಸುತ್ತ ಬಂದಿದ್ದರಿಂದ ಆ ವಿಷಯ ಹಿನ್ನಲೆಗೆ ಸರಿಯಿತು. ಬೊಮ್ಮಾಯಿ ಅವರು ಭರ್ಜರಿ ಪ್ರಚಾರ ನಡೆಸುತ್ತ, ಪ್ರಧಾನಿ ಮೋದಿ ಸಾಧನೆಗಳನ್ನು ಕೊಂಡಾಡಿದರು. ಮತ್ತೊಮ್ಮೆ ಅವರು ಪ್ರಧಾನಿ ಆದರೆ ಏನೆಲ್ಲಾ ಬದಲಾವಣೆಗಳಾಗಲಿವೆ ಎಂಬ ಕನಸು ಬಿತ್ತುತ್ತ ಸಾಗಿದರು.

ಇದೇ ಸಂದರ್ಭದಲ್ಲಿ ಚುನಾವಣೆಗೂ ಮುನ್ನವೇ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದು ಚುನಾವಣೆಯಲ್ಲಿ ಗೆದ್ದು ಬರುವಂತೆ ಶುಭ ಕೋರಿದ್ದರು. ನೀವು ಸಂಸದರಾಗಿ ನನ್ನ ತಂಡ ಸೇರುತ್ತಿರುವುದು ದೊಡ್ಡ ಆಸ್ತಿ ಎಂದು ತಿಳಿಸಿದ್ದರು. ಮೋದಿ ಅವರ ಪತ್ರದಲ್ಲಿನ ಸಾಲುಗಳು ಬೊಮ್ಮಾಯಿ ಅವರಿಗೆ ನೂರಾನೆ ಬಲ ತಂದಿದ್ದವು. ಅವರ ಉತ್ಸಾಹವನ್ನು  ಇಮ್ಮಡಿಗೊಳಿಸಿದ್ದವು.

ಗ್ಯಾರಂಟಿ ಯೋಜನೆಗಳ ಬಲದ ಮೇಲೆ ಕಾಂಗ್ರೆಸ್‌, ಮೋದಿ ನಾಮಬಲದ ಮೇಲೆ ಬಿಜೆಪಿ ಈ ಬಾರಿಯ ಚುನಾವಣೆ ಎದುರಿಸಿದ್ದು, ಮತದಾರರ ಯಾರ ಕೊರಳಿಗೆ ವಿಜಯದ ಮಾಲೆ ಹಾಕುತ್ತಾನೆ ಎಂಬುದನ್ನು ತಿಳಿಯಲು ಇನ್ನು ಹೆಚ್ಚಿನ ಸಮಯವೇನೂ ಬೇಕಿಲ್ಲ.

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT