ಗುರುವಾರ , ಸೆಪ್ಟೆಂಬರ್ 19, 2019
22 °C
ಬೇಸಿಗೆ ಬೆನ್ನಲ್ಲೇ ಮಾರುಕಟ್ಟೆಗೆ ತಗ್ಗಿದ ತರಕಾರಿ ಆವಕ

ಬೀನ್ಸ್‌ ಕೆ.ಜಿಗೆ ₹100; ಗ್ರಾಹಕ ಕಂಗಾಲು

Published:
Updated:
Prajavani

ಗದಗ: ಆವಕ ತಗ್ಗಿರುವ ಬೆನ್ನಲ್ಲೇ, ಇಲ್ಲಿನ ಮಾರುಕಟ್ಟೆಯಲ್ಲಿ ಬೀನ್ಸ್‌ ಬೆಲೆ ದಾಖಲೆ ಏರಿಕೆ ಕಂಡಿದೆ.ಸದ್ಯ ಒಂದು ಕೆ.ಜಿ ಬೀನ್ಸ್‌ ₹100ರ ಸಮೀಪಕ್ಕೆ ಬಂದಿದೆ.

ತಿಂಗಳ ಹಿಂದಿನವರೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೀನ್ಸ್‌ ಬೆಲೆ ಕೆ.ಜಿಗೆ ಸರಾಸರಿ ₹ 60 ಇತ್ತು. ಆದರೆ, ಏಪ್ರಿಲ್‌ ಆರಂಭದಿಂದ ಬೆಲೆಯಲ್ಲಿ ಏರಿಕೆಯಾಗಿದೆ. ಸ್ಥಳೀಯವಾಗಿ ಆವಕವಾಗುವ ಎಳೆಯ ಜವಾರಿ ಬೀನ್ಸ್‌ಗೆ ಹೆಚ್ಚಿನ ಬೇಡಿಕೆ ಇದ್ದು,ಚಿಲ್ಲರೆ ಮಾರಾಟದ ಬೆಲೆ ₹100ರ ಗಡಿ ದಾಟಿದೆ. ಬೀನ್ಸ್‌ ದುಬಾರಿಯಾಗಿರುವುದರಿಂದ ಖಾನಾವಳಿಗಳಲ್ಲಿ, ಹೋಟೆಲ್‌ಗಳಲ್ಲಿ ಬೀನ್ಸ್‌ ಪಲ್ಲೆ ಅಪರೂಪವಾಗಿದೆ.

ಚವಳಿಕಾಯಿ, ಬದನೆ, ಸೊಪ್ಪು ಖರೀದಿಸುತ್ತಿರುವ ಗ್ರಾಹಕರು, ಬೆಲೆ ಕೇಳಿ ಬೀನ್ಸ್‌ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ತಳ್ಳುಗಾಡಿಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡುವ ಚಿಲ್ಲರೆ ವ್ಯಾಪಾರಿಗಳು ಬೀನ್ಸ್‌ ತರುತ್ತಿಲ್ಲ.

ಸತತ ಬರ ಮತ್ತು ಮಳೆ ಕೊರತೆಯಿಂದಾಗಿ ತಾಲ್ಲೂಕಿನ ಮುಂಡರಗಿ, ರೋಣ, ಲಕ್ಷ್ಮೇಶ್ವರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ತರಕಾರಿ ಇಳುವರಿಯೂ ಕಡಿಮೆಯಾಗಿದೆ. ಈರುಳ್ಳಿ, ಟೊಮೊಟೊ ಹೊರತುಪಡಿಸಿ ಉಳಿದೆಲ್ಲಾ ತರಕಾರಿಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವುದು ಗ್ರಾಹಕರ ನಿದ್ರೆಗೆಡಿಸಿದೆ.

‘ಸದ್ಯ ಬೆಳಗಾವಿ, ಧಾರವಾಡ ಜಿಲ್ಲೆಗಳಿಂದ ಮಾತ್ರ ದೊಡ್ಡ ಗ್ರಾತ್ರದ ಬೀನ್ಸ್‌ ಮಾರುಕಟ್ಟೆಗೆ ಆವಕವಾಗುತ್ತಿದೆ. ಬೇಡಿಕೆಯೂ ಕಡಿಮೆ, ಬೆಲೆಯೂ ಹೆಚ್ಚು. ಮುಂಗಾರು ಪ್ರಾರಂಭವಾದ ನಂತರ ಬೆಲೆ ಇಳಿಯಲಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.

‘ 25 ಕೆ.ಜಿ.ಯ ಒಂದು ಚೀಲ ಬೀನ್ಸ್‌ಗೆ ₹1,800ರಿಂದ ₹2 ಸಾವಿರ ದರ ಇದೆ. ಗದುಗಿನ ಮಾರುಕಟ್ಟೆಯಲ್ಲಿ ನಾವು ₹80ರಿಂದ ₹100ರವರೆಗೆ ಬೀನ್ಸ್‌ ಮಾರುತ್ತಿದ್ದೇವೆ’ ಎಂದು ಇಲ್ಲಿನ ತರಕಾರಿ ಮಾರುಕಟ್ಟೆಯ ವ್ಯಾಪಾರಿ ಅಸ್ಲಂ ಧಾರವಾಡ ತಿಳಿಸಿದರು.

Post Comments (+)