ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚಳ

ಜಿಲ್ಲೆಯಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚಳ: ಮೂರು ಪಟ್ಟು ಹೆಚ್ಚಿದ ವೈದ್ಯಕೀಯ ತ್ಯಾಜ್ಯ; ವಿಲೇವಾರಿಯದ್ದೇ ಸಮಸ್ಯೆ
Last Updated 17 ಮೇ 2021, 3:08 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ವೈದ್ಯಕೀಯ ತ್ಯಾಜ್ಯದ ಉತ್ಪಾದನೆ ಕೂಡ ಮಾಮೂಲಿಗಿಂತ ಮೂರು ಪಟ್ಟು ಹೆಚ್ಚಾಗಿದೆ. ಎಲ್ಲ ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿಯನ್ನು ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್‌ ಸಂಸ್ಥೆ ನಿರ್ವಹಿಸುತ್ತಿದ್ದು, ಸಂಗ್ರಹಣೆಗೆ ಪ್ರತ್ಯೇಕ ಸಿಬ್ಬಂದಿ ನೇಮಿಸಿಕೊಂಡಿದೆ.

‘ಗದಗ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನ ಕೋವಿಡ್‌ ಆಸ್ಪತ್ರೆಯಲ್ಲಿ ಬಳಸಿದ ಕೈಗವಸು, ಮಾಸ್ಕ್‌, ಪಿಪಿಇ ಕಿಟ್‌ ಸೇರಿದಂತೆ ವೈದ್ಯಕೀಯ ತ್ಯಾಜ್ಯವನ್ನು ಕಪ್ಪು ಕವರ್‌ನಲ್ಲಿ ಪ್ರತ್ಯೇಕವಾಗಿ ಹಾಕಿ ಇಡಲಾಗಿರುತ್ತದೆ. ಬಯೋ ಮೆಡಿಕಲ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಸಿಬ್ಬಂದಿ ಎರಡು ದಿನಕ್ಕೊಮ್ಮೆ ಬಂದು ಅದನ್ನು ತೆಗೆದುಕೊಂಡು ಹೋಗುತ್ತಾರೆ. ಇದನ್ನು ಸಂಗ್ರಹಿಸುವ ಸಿಬ್ಬಂದಿ ಪಿಪಿಇ ಕಿಟ್‌ ಧರಿಸಿರುತ್ತಾರೆ. ವೈದ್ಯಕೀಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕರೀಗೌಡ್ರ ತಿಳಿಸಿದ್ದಾರೆ.

‘ಗದಗ ತಾಲ್ಲೂಕು ಸೇರಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ವೈದ್ಯಕೀಯ ತ್ಯಾಜ್ಯವನ್ನ ಎಲ್ಲೂ ಕೂಡ ಎಸೆಯು ವಂತಿಲ್ಲ. ಇದರ ನಿರ್ವಹಣೆಗೆ ಬಿಎಂಡಬ್ಲ್ಯುಎಂ ಸಂಸ್ಥೆ ಪರಿಸರ ಇಲಾಖೆ ಹಾಗೂ ಜಿಲ್ಲಾಡಳಿತದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯ ಸಂಸ್ಥೆಗಳು ಪ್ರತ್ಯೇಕವಾಗಿ ಎಲ್ಲೂ ವೈದ್ಯಕೀಯ ತ್ಯಾಜ್ಯವನ್ನ ನಿರ್ವಹಣೆ ಮಾಡುತ್ತಿಲ್ಲ’ ಎಂದು ಟಿಎಚ್‍ಒ ಡಾ.ಎಸ್.ಎಸ್.ನೀಲಗುಂದ ತಿಳಿಸಿದರು.

‘ಕೋವಿಡ್ ನಿಯಂತ್ರಣಕ್ಕೆ ಮಾಸ್ಕ್ ಬಳಕೆ, ಸುರಕ್ಷಿತ ಅಂತರ ಕಾಯ್ದು ಕೊಳ್ಳುವುದು ಅಗತ್ಯ. ಜನರು ಸೋಂಕು ನಿಯಂತ್ರಣಕ್ಕಾಗಿ ಬಳಸುವ ಮಾಸ್ಕ್‌ನ ಸ್ವಚ್ಛತೆ ಬಗ್ಗೆಯೂ ಗಮನಹರಿಸಬೇಕು. ಬಳಸಿದ ಮಾಸ್ಕ್, ಗ್ಲೌಸ್‌ಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು’ ಎಂದು ವೈದ್ಯ ಡಾ.ಎಸ್.ಸಿ.ಚವಡಿ ಹೇಳಿದರು.

ಆಸ್ಪತ್ರೆ ಒಳಗಿನ ವ್ಯವಸ್ಥಿತವಾಗಿ ನಿರ್ವಹಣೆ ಆಗುತ್ತಿದೆ. ಆದರೆ, ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಬಳಸಿದ ಎಸೆದಿರುವ ಮಾಸ್ಕ್‌, ಕೈಗವಸುಗಳು ಬಿದ್ದಿರುವುದು ಕಣ್ಣಿಗೆ ರಾಚುತ್ತವೆ. ಜನರಲ್ಲಿ ಸೂಕ್ತ ತಿಳಿವಳಿಕೆ ಮೂಡಿಸುವ ಮೂಲಕ ಆಸ್ಪತ್ರೆಗಳ ಆವರಣವನ್ನು ಸ್ವಚ್ಛವಾಗಿ ಇಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಮರ್ಪಕ ತ್ಯಾಜ್ಯ ನಿರ್ವಹಣೆ

ಮುಳಗುಂದ: ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಸ್ಥಳೀಯ ಸಂಸ್ಥೆಗಳು ವ್ಯವಸ್ಥೆ ಅಳವಡಿಸಿಕೊಂಡಿಲ್ಲ, ಬದಲಾಗಿ ಖಾಸಗಿ ಸಂಸ್ಥೆಯೊಂದು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯಕೀಯ ತ್ಯಾಜ್ಯವನ್ನು ಸಂಗ್ರಹಸಿ ನಿರ್ವಹಣೆ ಮಾಡುತ್ತಿದೆ.

ಪರಿಸರ ಇಲಾಖೆಯೊಂದಿಗೆ ಸಹ ಯೋಗ ಹೊಂದಿದ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್‌ ಸಂಸ್ಥೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ವೈದ್ಯಕೀಯ ತ್ಯಾಜ್ಯವನ್ನು ವಾರದಲ್ಲಿ ಎರಡು ಬಾರಿ ವಾಹನದ ಮೂಲಕ ಸಂಗ್ರಹಿಸುತ್ತಿದೆ. ಪ್ರತಿವರ್ಷವೂ ಖಾಸಗಿ ಆಸ್ಪತ್ರೆ ಮತ್ತು ಸರ್ಕಾರಿ ಆಸ್ಪತ್ರೆಗಳಿಂದ ನಿಗದಿತ ಶುಲ್ಕ ಪಡೆಯುತ್ತಿದೆ.

ತಾಲ್ಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಬಳಸಿದ ಸಿರಿಂಜ್, ಹ್ಯಾಂಡ್ ಗ್ಲೌಸ್‌, ಬ್ಯಾಂಡೇಜ್, ಪಿಪಿಇ ಕಿಟ್, ಮಾಸ್ಕ್ ಹಾಗೂ ನೀಡಲ್ಸ್ ಸೇರಿದಂತೆ ಮೊದಲಾದ ತ್ಯಾಜ್ಯಗಳನ್ನು ನಾಲ್ಕು ವಿಧದ ಡಬ್ಬಿಗಳಲ್ಲಿ ಮೂಲದಲ್ಲೇ ವಿಂಗಡಿಸಲಾಗುತ್ತಿದೆ. ಹೀಗೆ ಮಾಡುವುದರಿಂದ ವಾಹನಗಳಿಗೆ ಸಾಗಿಸಲು ಸುಲಭವಾಗಿದೆ. ಸುರಕ್ಷತಾ ಕ್ರಮಗಳನ್ನ ಅಳವಡಿಸಿಕೊಂಡು ತ್ಯಾಜ್ಯ ಸಂಗ್ರಹ ನಡೆಯುತ್ತಿದೆ. ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯ
ಕೀಯ ತ್ಯಾಜ್ಯ ಮೂಲದಲ್ಲೇ ಬೇರ್ಡಡಿಸಲು ನಾಲ್ಕು ಡಬ್ಬಿಗಳನ್ನು ಇರಿಸಲಾಗಿದೆ.

ತಾಲ್ಲೂಕು ಮಟ್ಟದಲ್ಲಿ ಘಟಕ ಇಲ್ಲ

ಲಕ್ಷ್ಮೇಶ್ವರ: ವೈದ್ಯಕೀಯ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಘಟಕ ಪಟ್ಟಣದಲ್ಲಿ ಇಲ್ಲ. ಹೀಗಾಗಿ ದಿನನಿತ್ಯದ ಕಸದ ರಾಶಿಯಲ್ಲಿಯೇ ಸೋಂಕಿತರು ಬಳಕೆ ಮಾಡಿದ ಮಾಸ್ಕ್, ಸ್ಯಾನಿಟೈಸರ್ ಬಾಟಲಿಗಳು, ಮಾತ್ರೆಗಳ ಖಾಲಿ ಕವರ್‌ಗಳು ಕಸ ವಿಲೇವಾರಿ ಘಟಕ ಸೇರುತ್ತಿವೆ.

ಕಳೆದ ವರ್ಷ ಸೋಂಕಿತರಿಗಾಗಿ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಲಾಗಿತ್ತು. ಆಗ ಆರೋಗ್ಯ ಇಲಾಖೆ ಸಿಬ್ಬಂದಿ ವೈದ್ಯಕೀಯ ತ್ಯಾಜ್ಯಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಅವಕಾಶ ಇತ್ತು. ಆದರೆ ಈ ಬಾರಿ ಸೋಂಕಿತರು ಮನೆಯಲ್ಲಿಯೇ ಕ್ವಾರಂಟೈನ್ ಆಗಲು ಸೂಚಿಸಲಾಗಿದೆ. ಇದರಿಂದಾಗಿ ಅವರು ಬಳಸಿದ ವೈದ್ಯಕೀಯ ತ್ಯಾಜ್ಯವೆಲ್ಲವೂ ಕಸದ ರಾಶಿ ಸೇರುತ್ತಿದೆ.

‘ಕ್ವಾರಂಟೈನ್ ಕೇಂದ್ರ ತೆರೆದಿದ್ದರೆ ಈ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಸಮಸ್ಯೆ ಬರುತ್ತಿದ್ದಿಲ್ಲ. ಆದರೆ ಈ ಬಾರಿ ಕೋವಿಡ್‌ ಕೇರ್‌ ಕೇಂದ್ರ ಇಲ್ಲ. ಕಾರಣ ಸೋಂಕಿತರು ಬಳಸಿದ ಉಪಕರಣಗಳನ್ನು ಪುರಸಭೆಯ ಕಸದ ವಾಹನಗಳಲ್ಲಿ ಹಾಕುತ್ತಿದ್ದಾರೆ. ಯಾರ ಮನೆಯಲ್ಲಿ ಸೋಂಕಿತರು ಇದ್ದಾರೆ ಎಂಬುದು ಪುರಸಭೆಗೆ ಮಾಹಿತಿ ಇರುವುದಿಲ್ಲ. ಒಂದು ವೇಳೆ ಆರೋಗ್ಯ ಇಲಾಖೆಯವರು ಸೋಂಕಿತರ ಕುರಿತು ಮಾಹಿತಿ ನೀಡಿದರೆ ಅಂತವರ ಮನೆಗಳ ಕಸವನ್ನು ಸಂಗ್ರಹಿಸಲು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲು ಅನುಕೂಲ ಆಗುತ್ತದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ತಿಳಿಸಿದರು.

ಆಸ್ಪತ್ರೆ ತ್ಯಾಜ್ಯದ ಸಮಸ್ಯೆ ಇಲ್ಲ

ನರೇಗಲ್:‌ ಆಸ್ಪತ್ರೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ನಿರ್ವಹಣೆ ಆಸ್ಪತ್ರೆಗಳ ಮಾಲೀ ಕರು, ವೈದ್ಯರು ವೈಜ್ಞಾನಿಕ ರೀತಿಯಲ್ಲಿ ಜವಾಬ್ದಾರಿಯಿಂದ ನಿರ್ವಹಿ ಸುತ್ತಿರುವುದರಿಂದ ಇಂದಿಗೂ ಯಾವುದೇ ಸಮಸ್ಯೆ ಉಂಟಾಗಿಲ್ಲ.

ಸ್ಥಳೀಯವಾಗಿ ಒಂದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, 4 ಖಾಸಗಿ ಆಸ್ಪತ್ರೆಗಳು, 5 ಖಾಸಗಿ ಕ್ಲಿನಿಕ್‌ಗಳು ಹಾಗೂ 3 ಲ್ಯಾೊರೇ ಟರಿಗಳಿವೆ. ಇವರೆಲ್ಲರೂ ಸಂಗ್ರಹಿಸಿದ ವೈದ್ಯಕೀಯ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಗದಗ ಜಿಲ್ಲೆಯ ನರಸಾಪೂರ ಕೈಗಾರಿಕಾ ಪ್ರದೇಶದಲ್ಲಿರುವ ಗದಗ ಎನ್‌ವಿರೋಟೆಕ್ ಎಂಬ ಘಟಕದ ಜೊತೆಗೆ ವರ್ಷಕ್ಕೆ ಇಂತಿಷ್ಟು ಎಂದು ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾಗಿ ಘಟಕದವರು ಗದುಗಿನಿಂದ ಎರಡು ದಿನಕ್ಕೊಮ್ಮೆ ಬಂದು ತ್ಯಾಜ್ಯವನ್ನು ವಾಹ ನದಲ್ಲಿ ತೆಗದುಕೊಂಡು ಹೋಗುತ್ತಾರೆ.

ಇನ್ನೂ ಜನರು ಬಳಕೆ ಮಾಡಿ ಎಸೆಯುವ ಮಾಸ್ಕ್, ಸ್ಯಾನಿಟೈಸರ್ ಬಾಟಲಿಗಳು, ಮಾತ್ರೆಗಳ ಪ್ಲಾಸ್ಟಿಕ್ ಕವರ್, ಸಿರಿಂಜ್‌ಗಳು, ಥರ್ಮಾ ಮೀಟರ್, ಆಕ್ಸಿಮೀಟರ್‌ಗಳನ್ನು ಮನೆಮನೆಯಿಂದ, ಸಾರ್ವಜನಿಕ ಸ್ಥಳದಿಂದ ಪಟ್ಟಣ ಪಂಚಾಯ್ತಿ ಸಿಬ್ಬಂದಿ ಕಸ ವಿಲೇವಾರಿ ವಾಹನದ ಮೂಲಕ ಬೇರ್ಪಡಿಸಿಕೊಂಡು ಎಸ್.‌ಡಬ್ಲ್ಯು.ಲೇಔಟ್‌ನಲ್ಲಿ ತೆಗ್ಗು ಅಗೆದು ಮುಚ್ಚುತ್ತಾರೆ. ಅದರಲ್ಲಿ ಕೆಲವು ತ್ಯಾಜ್ಯಗಳನ್ನು ಸುಡುತ್ತಾರೆ. ಆದ್ದರಿಂದ ಪಟ್ಟಣದಲ್ಲಿ ಇಲ್ಲೀಯವರೆಗೆ ಆಸ್ಪತ್ರೆ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ಆಗಿಲ್ಲ.

ಎಲ್ಲೆಂದರಲ್ಲಿ ಮಾಸ್ಕ್‌ಗಳನ್ನು ಎಸೆಯುವ ಜನರು

ಗಜೇಂದ್ರಗಡ: ತಾಲ್ಲೂಕಿನಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಏಜೆನ್ಸಿ ಪಡೆದವರು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದ್ದಾರೆ. ಆದರೆ ನೋಂದಣಿ ಪಡೆಯದ ಕೆಲ ವೈದ್ಯರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದಾರೆ.

ತಾಲ್ಲೂಕಿನಲ್ಲಿ ಈ ಮೊದಲು ವೈದ್ಯಕೀಯ ಮಾಸ್ಕ್‌ ಗಳನ್ನು ವೈದ್ಯರು ಮಾತ್ರ ಬಳಸುತ್ತಿದ್ದರು. ಕೊರೊನಾ ಸೋಂಕಿನ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ಸಾರ್ವ ಜನಿಕರು ವೈದ್ಯಕೀಯ ಮಾಸ್ಕ್ ಸೇರಿದಂತೆ ಬಟ್ಟೆಯಿಂದ ಮಾಡಿದ ಮಾಸ್ಕ್‌ಗಳನ್ನು ಬಳಸುತ್ತಿದ್ದಾರೆ. ಆದರೆ ಬಳಸಿದ ಮಾಸ್ಕ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದರಿಂದ ಪರಿಸರ ಮಾಲಿನ್ಯವಾಗುವುದರ ಜೊತೆಗೆ ಚರಂಡಿಗಳು ಕಟ್ಟಿಕೊಳ್ಳುತ್ತಿವೆ. ಕೊರೊನಾ ಸೋಂಕಿನ ಅಲೆ ಉಬ್ಬರದಲ್ಲಿರುವ ಸಂದರ್ಭದಲ್ಲಿ ಸಣ್ಣ ನೆಗಡಿ, ಕೆಮ್ಮಿಗೂ ಜನರು ಆಸ್ಪತ್ರೆಗೆ ತೆರಳಿ ಔಷಧಿ ಪಡೆಯುತ್ತಿದ್ದಾರೆ. ಗುಳಿಗೆ, ಔಷಧಿ ಮುಗಿದ ನಂತರ ಮಾತ್ರೆ ಕವರ್‌ ಮತ್ತು ಸಿರಫ್‌ ಬಾಟಲಿಗಳನ್ನು ಎಸೆಯುವುದರಿಂದ ಪರಿಸರಕ್ಕೆ ಪ್ಲಾಸ್ಟಿಕ್ ಸೇರ್ಪಡೆಯಾಗುತ್ತಿದೆ.

ಜಿಲ್ಲಾ ಮಟ್ಟದಲ್ಲಿ ನಿರ್ವಹಣೆ

ನರಗುಂದ: ಕೊರೊನಾ ಸೋಂಕು ಹೆಚ್ಚಳದಿಂದಾಗಿ ಮಾಸ್ಕ್‌ಗಳ ಬಳಕೆ ಹೆಚ್ಚಾಗಿದೆ. ಪ್ರತಿ ಮನೆಯಲ್ಲೂ ಸ್ಯಾನಿಟೈಸರ್‌ಗಳ ಬಳಕೆಯೂ ಹೆಚ್ಚಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಜ್ವರ, ಕೆಮ್ಮು, ಶೀತ, ನೆಗಡಿಯಂತಹ ರೋಗಗಳು ಸಾಮಾನ್ಯವಾಗಿವೆ. ಅವಕ್ಕೆ ವೈದ್ಯರು ನೀಡುವ ಗುಳಿಗೆಗಳನ್ನು ತಂದು ಜನರು ನುಂಗುತ್ತಿದ್ದಾರೆ. ಜತೆಗೆ ಮಧುಮೇಹ, ಬಿಪಿ ಇರುವ ರೋಗಿಗಳ ಮನೆಯಲ್ಲಿ ಸಿರಿಂಜ್, ಥರ್ಮಾಮೀಟರ್, ಆಕ್ಸಿಮೀಟರ್ ಹೆಚ್ಚು ಸಂಗ್ರಹವಾಗಿವೆ. ಮಾಸ್ಕ್‌ಗಳನ್ನು ಪಟ್ಟಣದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಆಳವಾದ ತಗ್ಗುಗಳನ್ನು ತೆಗೆದು ಅದರಲ್ಲಿ ಹೂತು ಕೊಳೆಯುವ ಹಾಗೆ ಮಾಡಲಾಗುತ್ತದೆ. ಉಳಿದ ವಸ್ತುಗಳನ್ನು ಗದಗ ನ್ಯೂರೋ ಟೆಕ್ ಸಂಸ್ಥೆ ಜಿಲ್ಲಾ ಮಟ್ಟದಲ್ಲಿ ಗದಗ ಬಳಿ ನರಸಾಪುರದಲ್ಲಿ ನಿರ್ವಹಣೆ ಮಾಡುತ್ತಿದೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ತ್ಯಾಜ್ಯವೆಲ್ಲವೂ ಅಲ್ಲೇ ವಿಲೇವಾರಿ ಆಗುತ್ತಿದೆ.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಚಂದ್ರಶೇಖರ ಭಜಂತ್ರಿ, ಚಂದ್ರು ಎಂ.ರಾಥೋಡ್‌, ನಾಗರಾಜ ಎಸ್‌.ಹಣಗಿ, ಶ್ರೀಶೈಲ ಎಂ.ಕುಂಬಾರ, ಡಾ. ಬಸವರಾಜ ಹಲಕುರ್ಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT