ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡದ ತಡಿಯಲ್ಲಿ ಸಿದ್ದೇಶ್ವರ ಗುಡಿ

ಐತಿಹಾಸಿಕ ಗುಡ್ದದ ತಡಿಯಲ್ಲಿ ಜಿನಗುವ ಗಂಗೆಯಿಂದ ಅಭಿಷೇಕ
Published 17 ಮಾರ್ಚ್ 2024, 4:43 IST
Last Updated 17 ಮಾರ್ಚ್ 2024, 4:43 IST
ಅಕ್ಷರ ಗಾತ್ರ

ನರಗುಂದ: ಪಂಚಪೀಠಗಳ ಉಪಪೀಠಗಳ ಮುಖ್ಯ ಪೀಠವೆಂದೇ ಕರೆಯಲ್ಪಡುವ ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದೇಶ್ವರ ದೇವಾಲಯ ಐತಿಹಾಸಿಕ ಬೆಟ್ಟದ ತಡಿಯಲ್ಲಿದ್ದು, ಸಹಸ್ರಾರು ಭಕ್ತರನ್ನು ಕೈ ಬೀಸಿ ಕರೆಯುತ್ತದೆ.

ಇಲ್ಲಿಯ ಕರ್ತೃ ಸಿದ್ದೆಶ್ವರರ ಗದ್ದುಗೆಗೆ ಹಾಗೂ ಪಂಚಗ್ರಹ ಹಿರೇಮಠದ ಹಿಂದಿನ ಪೀಠಾಧಿಪತಿಗಳ ಗದ್ದುಗೆಗಳಿಗೆ ನಿತ್ಯ ಗುಡ್ಡದ ಮೇಲಿಂದ ಸಣ್ಣಝರಿಯಾಗಿ ಹರಿಯುವ ಗಂಗೆಯಿಂದಲೇ ಅಭಿಷೇಕ ನಡೆಯುವುದು ವಿಶೇಷ! ನೀರು ಬೀಳುವ ಪುಷ್ಕರಣಿ ಕಲ್ಲಿನ ಅಡಿಯಲ್ಲಿ ತನ್ನಿಂದ ತಾನೆ ನಿರ್ಮಿತವಾಗಿದ್ದು ಹೆಚ್ಚಿನ ನೀರಿನ ಸಂಗ್ರಹ ಕಂಡು ಬರುತ್ತದೆ.

ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ, ಪರಂಪರೆ ಇರುವ ಸಿದ್ದೇಶ್ವರ ದೇವಾಲಯ ಪಟ್ಟಣದ ಮಧ್ಯಭಾಗದಲ್ಲಿ ಇರುವ ಪಂಚಗ್ರಹ ಗುಡ್ಢದ ಹಿರೇಮಠದ ಮೂಲ ದೇವಾಲಯ. ಇಲ್ಲಿಯ ಪೀಠಾಧಿಪತಿಗಳು ತಮ್ಮ ಸಿದ್ದಿ ಸಾಧನೆಗೆ ಗುಡ್ಡದ ತಡಿಯಲ್ಲಿ ವಾಸಿಸುತ್ತಿದ್ದರು. ಇದರ ಪರಿಣಾಮವಾಗಿ ಗುಡ್ದದ ತಡಿಯಲ್ಲಿ ದೇವಾಲಯ ಚಾಲುಕ್ಯರ ಕಾಲದಿಂದಲೇ ನಿರ್ಮಿತವಾಗಿದೆ ಎಂದು ಮಠದ ಪರಂಪರೆ ಬಲ್ಲ ಹಿರಿಯರು ಹೇಳುತ್ತಾರೆ.

ಕೆಲವು ಪ್ರಾಚೀನ ಧಾರ್ಮಿಕ. ಗ್ರಂಥಗಳಲ್ಲಿ ಇದರ ಉಲ್ಲೇಖ ಇದೆ ಎಂದು ಇಂದಿನ ಮಠಾಧಿಪತಿ ಸಿದ್ದಲಿಂಗ ಶಿವಾಚಾರ್ಯರು ಹೇಳುತ್ತಾರೆ.

ಗುಡ್ಡದಲ್ಲಿ ವಾಸಿಸುತ್ತಿದ್ದ ಸಿದ್ದೇಶ್ವರರು, ನಂತರ ಬಂದ ಪೀಠಾಧಿಪತಿಗಳು ಭಕ್ತರಿಗೆ ದರ್ಶನ ನೀಡಲು ಪಂಚಗ್ರಹ ಹಿರೇಮಠದಲ್ಲಿ ಬರುತ್ತಿದ್ದರು. ಇದರ ಪರಿಣಾಮವಾಗಿ ಪಂಚಗ್ರ‌ಹ ಗುಡ್ಡದ ಹಿರೇಮಠವೂ ಇಂದಿಗೂ ಸಿದ್ದೇಶ್ವರರ ಕರ್ತೃ ಗದ್ದುಗೆಯನ್ನು ಹೊಂದಿ ನರಗುಂದ ಹಾಗೂ ಸುತ್ತಮುತ್ತಲಿನ ಭಕ್ತರಿಂದ ಪೂಜಿಸಲ್ಪಡುತ್ತದೆ. ಇದರಿಂದ ಗುಡ್ಡದ ತಡಿಯಲ್ಲಿರುವ ಸಿದ್ದೇಶ್ವರ ದೇವಾಲಯ ಹಾಗೂ ಪಂಚಗ್ರಹ ಗುಡ್ಡದ ಹಿರೇಮಠ ಒಂದೇ ಪರಂಪರೆ ಹೊಂದಿ ದೇವಾಲಯ ಹಾಗೂ ಹಿರೇಮಠದ ಜವಾಬ್ದಾರಿಗಳನ್ನು ಇಂದಿನವರೆಗೂ ಆಗಿ ಹೋದ 23 ಪೀಠಾಧಿಪತಿಗಳು ನಿರ್ವಹಿಸಿದ್ದರು. ಅದೇ ಪರಂಪರೆಯಲ್ಲಿ ಇಂದಿನ 24ನೇ ಪೀಠಾಧಿಪತಿ ಸಿದ್ದಲಿಂಗ ಶಿವಾಚಾರ್ಯರು ನಿರ್ವಹಿಸಿ ಗುಡ್ಡದ ತಡಿಯ ದೇವಾಲಯ ಹಾಗೂ ಪಂಚಗ್ರಹ ಗುಡ್ಡದ ಹಿರೇಮಠದ ನವೀಕರಣಕ್ಕೆ ಹಾಗೂ ಶಿಕ್ಷಣ ಸಂಸ್ಥೆ ಆರಂಭಕ್ಕೆ ಮುಂದಾಗಿದ್ದಾರೆ.

ಭಾವೆಯವರ ದರ್ಶನ: ನರಗುಂದ ಐತಿಹಾಸಿಕ ನಗರವಾಗಿದ್ದು ಭಾಸ್ಕರರಾವ್ ಭಾವೆ (ಬಾಬಾಸಾಹೇಬ) ಅವರಿಗೆ ಗುಡ್ಡದ ತಡಿಯಲ್ಲಿ ಸಿದ್ದೇಶ್ವರ ದೇವಾಲಯ ಗುರುಮನೆಯಾಗಿತ್ತು. ಪಟ್ಟಣದಲ್ಲಿ ಅರಮನೆ ಹೊಂದಿದ್ದರೂ ನಿತ್ಯ ಸಿದ್ದೇಶ್ವರರ ದರ್ಶನ ಪಡೆದು ತಮ್ಮ ಕೆಲಸ ಆರಂಭಿಸುತ್ತಿದ್ದರು. ಆದರೆ ದರ್ಶನಕ್ಕೆ ಬರಲು ಅವರ ಪೂರ್ವಜರು ನಿರ್ಮಿಸಿದ ಸುರಂಗ ಮಾರ್ಗ ಬಳಸುತ್ತಿದ್ದರು. ಇದಕ್ಕೆ ಸಾಕ್ಷಿಯಾಗಿ ಸಿದ್ದೇಶ್ವರ ದೇವಾಲಯದ ಅನತಿ ದೂರದಲ್ಲಿಯೇ ಸುರಂಗವಿದೆ. ಅಲ್ಲಿಯ ಸುರಂಗಮಾರ್ಗ ನರಗುಂದ ಪಟ್ಟಣಕ್ಕೆ, ರಾಮದುರ್ಗಕ್ಕೆ, ಸಿರಸಂಗಿ, ಸವದತ್ತಿಗೆ ತೆರಳಲು ಮಾರ್ಗ ಹೊಂದಿರುವುದಾಗಿ ಇತಿಹಾಸದ ದಾಖಲೆಗಳು ಹೇಳುತ್ತವೆ.

ಬ್ರಿಟಿಷರು ನರಗುಂದ ವಶಪಡಿಸಿಕೊಳ್ಳುವ ಪೂರ್ವದಲ್ಲಿ ಬಾಬಾಸಾಹೇಬರ ಪತ್ನಿ,ತಾಯಿ ಇದೇ ಮಾರ್ಗದಿಂದ ಸಂಗಳಕ್ಕೆ ತೆರಳಿದರೆ, ನಂತರದ ದಿನಗಳಲ್ಲಿ ಬಾಬಾಸಾಹೇಬ ಕೊನೆಗೆ ಅದೇ ಮಾರ್ಗದಿಂದ ರಾಮದುರ್ಗದ ತೋರಗಲ್‌ಗೆ ತೆರಳಿದ್ದು ತಿಳಿದು ಬರುತ್ತದೆ.
ಜತೆಗೆ ಚಾಲುಕ್ಯರು, ಆದಿಲ್ ಶಾಹಿಗಳ ಆಕ್ರಮಣಕ್ಕೆ ಒಳಗಾದಾಗ ಅಲ್ಲಿಯ ರಾಜರು, ಸೇನಾಧಿಪತಿಗಳು ನರಗುಂದ ಸಿದ್ದೇಶ್ವರ ದೇವಾಲಯದಲ್ಲಿ ಆಶ್ರಯ ಪಡೆದು ಇಲ್ಲಿಂದಲೇ ತಮ್ಮ ಸಾಮ್ರಾಜ್ಯ ನಿಯಂತ್ರಣ ಮಾಡುತ್ತಿದ್ದರೆಂದು ಇತಿಹಾಸದ ಪುಸ್ತಕಗಳು ಹೇಳುತ್ತವೆ.

ಲಿಂ.ಸಿದ್ದೇಶ್ವರ ಶಿವಾಚಾರ್ಯ ರ ಗದ್ದುಗೆ
ಲಿಂ.ಸಿದ್ದೇಶ್ವರ ಶಿವಾಚಾರ್ಯ ರ ಗದ್ದುಗೆ
ನರಗುಂದ ಐತಿಹಾಸಿಕ ಗುಡ್ಡದ ಮೇಲಿನ ಸಿದ್ದೇಶ್ವರರ ದೇವಾಲಯದ ಬಳಿ ಝರಿಯ ರೀತಿಯಲ್ಲಿ ಜಿನಗುವ ಗಂಗೆ
ನರಗುಂದ ಐತಿಹಾಸಿಕ ಗುಡ್ಡದ ಮೇಲಿನ ಸಿದ್ದೇಶ್ವರರ ದೇವಾಲಯದ ಬಳಿ ಝರಿಯ ರೀತಿಯಲ್ಲಿ ಜಿನಗುವ ಗಂಗೆ
ಭಾವೆಯವರ ಕಾಲದಲ್ಲಿನ ಸುರಂಗ ಮಾರ್ಗ
ಭಾವೆಯವರ ಕಾಲದಲ್ಲಿನ ಸುರಂಗ ಮಾರ್ಗ

ಶಿಕ್ಷಣ ಸಂಸ್ಥೆಗೆ 42 ಎಕರೆ ಜಮೀನು ದಾನ

ಪಟ್ಟಣದಲ್ಲಿ ಇಂದು ಸರ್ಕಾರಿ ಕಾಲೇಜುಗಳು ಸ್ನಾತಕೋತ್ತರ ಕೇಂದ್ರಗಳು ತಲೆ ಎತ್ತಿ ನಿಲ್ಲಲಿಕ್ಕೆ ಕಾರಣವಾಗಿರುವುದು ಗಂಟಿ ಸ್ವಾಮಿಗಳೇ ಎಂದೇ ಖ್ಯಾತರಾಗಿದ್ದ 22ನೇ ಪೀಠಾಧಿಪತಿ ಸಿದ್ದೇಶ್ವರ ಶಿವಾಚಾರ್ಯರು ಹಾಗೂ ಹಿಂದಿನ ಪೀಠಾಧಿಪತಿ ಲಿಂ. ಚನ್ನವೀರ ಶಿವಾಚಾರ್ಯರು. 42 ಎಕರೆ ಜಮೀನನ್ನು ದಾನವಾಗಿ ನೀಡಿ ಇಂದು ಸಹಸ್ರಾರು ವಿದ್ಯಾರ್ಥಿಗಳು ಕಲಿಯಲು ಆಶ್ರಯ ನೀಡಿದ್ದಾರೆ.

ಭಾವೈಕ್ಯದ ಸಂಕೇತ 

22ನೇ ಪೀಠಾಧಿಪತಿ ಲಿಂ.ಸಿದ್ದೇಶ್ವರ ಶಿವಾಚಾರ್ಯರು ಶಿಶುನಾಳ ಷರೀಫರ ಗದ್ದುಗೆಗೆ ತೆರಳಿ ಅದರಲ್ಲಿ ಮಾಯವಾಗಿ ಮಾತನಾಡುತ್ತಿದ್ದರು ಎಂದು ಮಠದ ಬಗ್ಗೆ ಅಧ್ಯಯನ ಮಾಡಿರುವ ಸಿದ್ದಲಿಂಗ ಶಿವಾಚಾರ್ಯರು ಹೇಳುತ್ತಾರೆ. ಜತೆಗೆ ಶಿರಹಟ್ಟಿ ಫಕೀರೇಶ್ವರರ ಮಠಕ್ಕೂ ಹಲವಾರು ಶತಮಾನಗಳಿಂದ ಸಂಬಂಧ ಹೊಂದಿದ್ದಾರೆ. ಈಚೆಗಷ್ಟೇ ಸಿದ್ದೇಶ್ವರರ ಜಾತ್ರೆಗೆ ₹30 ಲಕ್ಷ ವೆಚ್ಚದಲ್ಲಿ ನೂತನ ತೇರನ್ನು ಮುಸ್ಲಿಂ ಸಮುದಾಯದ ಟ್ರಸ್ಟ್‌ನವರು ನಿರ್ಮಿಸಿ ಕೊಟ್ಟಿದ್ದು ಭಾವೈಕ್ಯದ ಸಂಕೇತ ಈ ಮಠದ್ದಾಗಿದೆ. ಐತಿಹಾಸಿಕ ಧಾರ್ಮಿಕ ಪರಂಪರೆ ಹೊಂದಿರುವ ದೇವಾಲಯ ನರಗುಂದ ಸುತ್ತಲಿನ ಆಧ್ಯಾತ್ಮಿಕ ತಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT