ಲಕ್ಷ್ಮೇಶ್ವರ: ಅಕಾಲಿಕ ಮಳೆ, ಬೆಳೆಗಳಿಗೆ ತಗುಲುವ ಹತ್ತಾರು ರೋಗರುಜಿನಗಳ ಬಾಧೆ ಸೇರಿದಂತೆ ಹತ್ತಾರು ಸಮಸ್ಯೆಗಳ ಹೊಡೆತಕ್ಕೆ ತೋಟ ಮಾಡುವ ರೈತರು ಬೇಸತ್ತಿದ್ದಾರೆ. ಫಸಲು ಬಂದಾಗ ದರ ಇರುವುದಿಲ್ಲ. ದರ ಇದ್ದಾಗ ಫಸಲು ಇರುವುದಿಲ್ಲ. ಇದರಿಂದಾಗಿ ರೋಸಿ ಹೋಗಿರುವ ಕೆಲ ರೈತರು ತೋಟಗಾರಿಕೆಯಿಂದಲೇ ವಿಮುಖರಾಗುತ್ತಿದ್ದಾರೆ. ಆದರೆ ಇಂಥ ವಿಷಮ ಪರಿಸ್ಥಿತಿಯಲ್ಲೂ ತಾಲ್ಲೂಕಿನ ಗೊಜನೂರು ಗ್ರಾಮದ ರೈತರೊಬ್ಬರು ಕಳೆದ 20 ವರ್ಷಗಳಿಂದ ತೋಟದಲ್ಲಿ ಬಹು ವಾರ್ಷಿಕ ಬೆಳೆಗಳನ್ನು ಬೆಳೆಯುತ್ತಿದ್ದು ಇತರೇ ರೈತರಿಗೆ ಮಾದರಿಯಾಗಿದ್ದಾರೆ.
ಗೊಜನೂರಿನ ಲಿಂಗರಾಜ ಫ. ಹೊಸಮನಿ ಅವರು 22 ಎಕರೆಯಲ್ಲಿ ಬಹು ವಾರ್ಷಿಕ ಹಣ್ಣಿನ ಗಿಡಗಳನ್ನು ಬೆಳೆಸಿದ್ದು ಅವು ಈಗ ಫಲ ನೀಡುತ್ತಿವೆ. ಒಟ್ಟು 1500 ಚಿಕ್ಕು, 350 ತೆಂಗು, ಒಂದು ಸಾವಿರ ಲಿಂಬು, ಒಂದು ಸಾವಿರ ಬಾಳೆ, ಒಂದು ಸಾವಿರ ಪೇರಲ, 500 ನುಗ್ಗೆ, ಒಂದು ಸಾವಿರ ಪಪ್ಪಾಯ ಗಿಡಗಳನ್ನು ಬೆಳೆಸಿದ್ದಾರೆ. ನೀರು ಉಳಿಸುವ ನಿಟ್ಟಿನಲ್ಲಿ ಆರಂಭದಿಂದಲೇ ಡ್ರಿಪ್ ಮೂಲಕ ಗಿಡಗಳಿಗೆ ನೀರುಣಿಸುತ್ತ ಬಂದಿದ್ದಾರೆ. ಇದಕ್ಕಾಗಿ ತೋಟದಲ್ಲಿ ಎರಡು ದೊಡ್ಡ ದೊಡ್ಡ ಬಾವಿಗಳನ್ನು ನಿರ್ಮಿಸಿ ಆರು ಕೊಳವೆ ಬಾವಿಗಳಿಂದ ಅವುಗಳನ್ನು ತುಂಬಿಸುತ್ತಾರೆ. ಆನಂತರ ಡ್ರಿಪ್ ಮೂಲಕ ನೀರನ್ನು ಗಿಡಗಳಿಗೆ ಕೊಡುತ್ತಾರೆ.
ರೈತ ಹೊಸಮನಿ ಅವರ ತೋಟವನ್ನು ಇಪ್ಪತ್ತು ವರ್ಷಗಳಿಂದ ಅದೇ ಗ್ರಾಮದ ನಾಗಪ್ಪ ಮಡಿವಾಳರ ಎಂಬುವವರು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ರೈತ ಹೊಸಮನಿ ಅವರ ಮಾರ್ಗದರ್ಶನದ ಮೇರೆಗೆ ಗಿಡಗಳಿಗೆ ಕೊಡಬೇಕಾದ ಗೊಬ್ಬರ, ಔಷಧ, ಕ್ರಿಮಿನಾಶಕಗಳನ್ನು ಬಳಸುತ್ತಾರೆ. ತೋಟದಲ್ಲಿನ ಗಿಡಗಳಿಂದ ಸಿಗುವ ಕೃಷಿ ತ್ಯಾಜ್ಯದಿಂದ ಸಾವಯವ ಗೊಬ್ಬರ ಸಿದ್ಧಪಡಿಸಿ ಹಣ್ಣಿನ ಗಿಡಗಳಿಗೆ ಕೊಡುತ್ತಿರುವುದರಿಂದ ಇವರ ತೋಟದ ಹಣ್ಣುಗಳು ವಿಷಮುಕ್ತವಾಗಿವೆ.
ತೋಟದ ಮನೆಯಲ್ಲಿ ಎರೆಹುಳು ತೊಟ್ಟಿ, ಗೋಮೂತ್ರ ಘಟಕ ನಿರ್ಮಿಸಿಕೊಂಡು ಆ ಮೂಲಕ ಗಿಡಗಳಿಗೆ ಆದಷ್ಟು ಕಡಿಮೆ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಸುವ ರೂಢಿ ಬೆಳೆಸಿಕೊಂಡಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಎಲ್ಲ ಗಿಡಗಳನ್ನು ನಾಟಿ ಮಾಡಿದ್ದಲ್ಲದೆ ತೋಟದಲ್ಲಿನ ಕಳೆಗಳನ್ನು ತೆಗೆಯುತ್ತಾರೆ. ಇವರ ತೋಟ ಕಸಕಡ್ಡಿ ಇಲ್ಲದೆ ಸಾಕಷ್ಟು ಸ್ವಚ್ಛವಾಗಿ ಕಾಣುತ್ತದೆ.
ಸಧ್ಯ ಇವರ ತೋಟದ ಚಿಕ್ಕು ಗಿಡಗಳು ಮೈ ತುಂಬ ಕಾಯಿ ಬಿಟ್ಟು ನಳನಳಿಸುತ್ತಿವೆ. ಪ್ರತಿ ಬಾರಿ ಗದಗ ನಗರದ ವ್ಯಾಪಾರಿಗಳು ತೋಟಕ್ಕೆ ಬಂದು ಹಣ್ಣು ಖರೀದಿಸಲು ಒಡಂಬಡಿಕೆ ಮಾಡಿಕೊಳ್ಳುತ್ತಾರೆ. ಒಂದು ಬಾರಿ ಕೊಯ್ಲು ಮಾಡಿದರೆ ಬರೋಬ್ಬರಿ 10 ಕ್ವಿಂಟಲ್‍ನಷ್ಟು ಚಿಕ್ಕು ಫಸಲು ದೊರೆಯುತ್ತದೆ. ಈಗ ಮಾರುಕಟ್ಟೆಯಲ್ಲಿ ಕೆಜಿ ಚಿಕ್ಕು ದರ ₹15 ರಿಂದ ₹20 ಇದೆ. ಅದರಂತೆ ಉಳಿದ ಗಿಡಗಳಿಂದಲೂ ಉತ್ತಮ ಇಳುವರಿ ಬರುತ್ತಿದ್ದು ಇವರು ಬಹು ವಾರ್ಷಿಕ ಬೆಳೆಗಳಿಂದ ಲಾಭ ಮಾಡುತ್ತಿದ್ದಾರೆ.
‘ನಾನು ತೋಟದಲ್ಲಿಯೇ ಇದ್ದು ಉಸ್ತುವಾರಿ ನೋಡಿಕೊಳ್ಳುತ್ತಿದ್ದೇನೆ. ಈ ಭಾಗದಲ್ಲಿ ಮಂಗಗಳ ಹಾವಳಿ ಬಹಳ. ಹೀಗಾಗಿ ಸಾಕಷ್ಟು ಹಣ್ಣುಗಳು ಮಂಗಗಳ ಪಾಲಾಗುತ್ತವೆ’ ಎಂದು ನಾಗಪ್ಪ ಮಡಿವಾಳರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.