ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತದಲ್ಲಿ ಕೇಂದ್ರ ಸರ್ಕಾರ ವಿಫಲ

ಕೆಪಿಸಿಸಿ ಕಾರ್ಯದರ್ಶಿ ಎಸ್.ಡಿ.ಮಕಾಂದಾರ ಟೀಕೆ
Published 13 ಏಪ್ರಿಲ್ 2024, 14:00 IST
Last Updated 13 ಏಪ್ರಿಲ್ 2024, 14:00 IST
ಅಕ್ಷರ ಗಾತ್ರ

ಮುಂಡರಗಿ: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ದೇಶದ ಜನರು ಅವರ ಆಡಳಿತದಿಂದ ಭ್ರಮನಿರಸನಗೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ದೇಶದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಲಿದ್ದಾರೆ’ ಎಂದು ಕೆಪಿಸಿಸಿ ನೂತನ ಕಾರ್ಯದರ್ಶಿ ಎಸ್.ಡಿ.ಮಕಾಂದಾರ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾವೇರಿ ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದಾದ್ಯಂತ 15–20 ಕಾಂಗ್ರೆಸ್ ಅಭ್ಯರ್ಥಿಗಳು ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ’ ಎಂದು ಭರವಸೆ ವ್ಯಕ್ತಪಡಿಸಿದರು.‌

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಜನಮೆಚ್ಚುವಂತೆ ಆಡಳಿತ ನಡೆಸುತ್ತಿದ್ದು, ಪ್ರಸ್ತುತ ಚುನಾವಣೆಯಲ್ಲಿ ರಾಜ್ಯದ ಮತದಾರರೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲಿದ್ದಾರೆ. ಸಿದ್ದರಾಮಯ್ಯ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದು, ಬಿಜೆಪಿ ಸೇರಿದಂತೆ ದೇಶದಲ್ಲಿರುವ ಎಲ್ಲ ಪಕ್ಷಗಳು ಈ ಮಾದರಿಯನ್ನು ಅನುಸರಿಸುತ್ತಿವೆ’ ಎಂದು ತಿಳಿಸಿದರು.

‘ಕೇಂದ್ರದಲ್ಲಿ ನಮ್ಮ ಪಕ್ಷ ಆಡಳಿತಕ್ಕೆ ಬಂದರೆ ಮಹಿಳೆಯರಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ ಸಾಕಷ್ಟು ವಿಶೇಷ ಸೌಲಭ್ಯಗಳು ದೊರೆಯಲಿವೆ. ಆದ್ದರಿಂದ ಎಲ್ಲ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಬೇಕು’ ಎಂದು ಮನವಿ ಮಾಡಿಕೊಂಡರು.

‘ಚುನಾವಣಾ ಬಾಂಡ್ ಹೆಸರಿನಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಬಹುದೊಡ್ಡ ಭ್ರಷ್ಟಾಚಾರ ನಡೆಸಿದ್ದು, ಅದರಿಂದ ಅವರ ನಿಜವಾದ ಬಣ್ಣ ಬಯಲಾಗಿದೆ. ಹಣ ನೀಡಿದರೆ ದೇಶದಲ್ಲಿ ಏನನ್ನಾದರೂ ಮಾಡಬಹುದು ಎನ್ನುವುದು ಚುನಾವಣಾ ಬಾಂಡ್ ಹಗರಣವು ಸ್ಪಷ್ಟವಾಗಿ ತಿಳಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಹಗರಣಗಳನ್ನು ಬಯಲಿಗೆಳೆಯಲಿದೆ’ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ವಿ.ಎಲ್.ನಾಡಗೌಡರ, ರಾಮು ಕಲಾಲ, ಮುಖಂಡರಾದ ರಾಜು ಡಾವಣಗೇರಿ, ಎಂ.ಯು.ಮಕಾಂದಾರ, ವಿನೋದ ವಡ್ಡರ, ನಿಂಗಪ್ಪ ಹೊನ್ನಾಯಕನಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT