ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಸಹಕಾರಕ್ಕೆ ಸಂಸ್ಕಾರವೇ ಮೆಟ್ಟಿಲು: ಪ್ರೊ.ಚಟಪಲ್ಲಿ

ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ‘ಯುವಜನ ಮತ್ತು ಸಹಕಾರ’ ಸಂವಾದ ಕಾರ್ಯಕ್ರಮ ಉದ್ಘಾಟನೆ
Last Updated 24 ಫೆಬ್ರುವರಿ 2023, 3:54 IST
ಅಕ್ಷರ ಗಾತ್ರ

ಗದಗ: ‘ಬದುಕಿನ ಪ್ರತಿ ಹೆಜ್ಜೆಯಲ್ಲೂ ಸಹಕಾರ ಇರುತ್ತದೆ. ಹೀಗಾಗಿ ಇದು ಜೀವನದ ಪದ್ಧತಿ. ಈ ಸಹಕಾರಕ್ಕೆ ಸಂಸ್ಕಾರವೇ ಮೆಟ್ಟಿಲು’ ಎಂದು ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ಹೇಳಿದರು.

ನಾಗಾವಿಯಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಸಹಭಾಗಿತ್ವದಲ್ಲಿ ಗುರುವಾರ ನಡೆದ ‘ಯುವಜನ ಮತ್ತು ಸಹಕಾರ’ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲೇ ಮೊದಲ ಸಹಕಾರಿ ಸಂಘ ಆರಂಭವಾಗಿದ್ದು ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ. ಸಹಕಾರ ಕ್ಷೇತ್ರದಲ್ಲಿ ಆರ್ಥಿಕ ಸ್ವಾತಂತ್ರ್ಯದ ಜತೆಗೆ ಉದ್ಯೋಗಗಳಿಗೂ ವಿಫುಲ ಅವಕಾಶಗಳಿವೆ. ಹೀಗಾಗಿ ಪ್ರತಿ ಹಳ್ಳಿಗೊಂದು ಉತ್ತಮ ಸಹಕಾರ ಸಂಘಗಳು ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಯುವಕರು ಸಹಕಾರ ಕ್ಷೇತ್ರದತ್ತ ಆದ್ಯತೆ ನೀಡಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಅಧ್ಯಕ್ಷ ಜಿ. ನಂಜನಗೌಡ ಮಾತನಾಡಿ, ‘ಯುವಕರಿಗೆ ಸಹಕಾರಿ ಕ್ಷೇತ್ರದ ಬಗ್ಗೆ ಮಾಹಿತಿ ನೀಡಲು ಮೈಸೂರು, ಬೆಂಗಳೂರು, ಬೆಳಗಾವಿ, ವಿಜಯಪುರ, ಕಲಬುರಗಿ, ಧಾರವಾಡ, ಕಾನೂನು ವಿಶ್ವವಿದ್ಯಾಲಯಗಳಲ್ಲಿ ಸಂವಾದ ನಡೆಸಲಾಗಿದೆ. ದೇಶದ ಸಹಕಾರಿ ಚಳವಳಿಗೆ ಒಂದೂ ಕಾಲು ಶತಮಾನದ ಇತಿಹಾಸವಿದೆ. ರೈತರು ಹಾಗೂ ಜನಸಾಮಾನ್ಯರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ದಿಗೆ ಕಾರಣವಾಗಿದೆ. ಈವರೆಗೆ 8 ಲಕ್ಷಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳು 31 ಕೋಟಿ ಸದಸ್ಯರ ಬಳಗವನ್ನು ಹೊಂದಿದೆ. ₹33.71 ಸಾವಿರ ಕೋಟಿ ಷೇರು ಬಂಡವಾಳವಿದ್ದು ₹60.74 ಸಾವಿರ ಕೋಟಿ ದುಡಿಯುವ ಬಂಡವಾಳ ಇದೆ’ ಎಂದು ತಿಳಿಸಿದರು.

ರಾಜ್ಯದಲ್ಲಿ 5,689ಕ್ಕೂ ಹೆಚ್ಚು ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಸೌಹಾರ್ದ ಸಹಕಾರಿಗಳಲ್ಲಿ 1,569ಕ್ಕೂ ಹೆಚ್ಚು ಇ ಸ್ಟ್ಯಾಂಪಿಂಗ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ರಾಜ್ಯದ ಬೊಕ್ಕಸಕ್ಕೆ ಪ್ರತಿದಿನ ₹1.25 ಕೋಟಿಗೂ ಹೆಚ್ಚು ರಾಜಸ್ವವನ್ನು ನೀಡುತ್ತಿವೆ. ರಾಜ್ಯದ ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ 50 ಲಕ್ಷಕ್ಕೂ ಹೆಚ್ಚು ಸದಸ್ಯರು ತೊಡಗಿಸಿಕೊಂಡಿದ್ದಾರೆ. 50 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಧಾರವಾಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಅಜ್ಜಪ್ಪ ಹೊರಕೇರಿ, ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಶಂಕರಪ್ಪ ವೀರಪ್ಪ ಮುಗದ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ನಿರ್ದೇಶಕ ನಾಗರಾಜ ದೇಶಪಾಂಡೆ, ಡಾ. ಅಭಯಕುಮಾರ ಗಸ್ತಿ ವೇದಿಕೆಯಲ್ಲಿದ್ದರು.

ರಘುನಂದನ ಕೆ. ಸ್ವಾಗತಿಸಿದರು. ಸವಿತಾ ಎನ್.ಇ. ನಿರೂಪಿಸಿದರು. ವಿ.ಜೆ.ಕಾರಕೂನ ವಂದಿಸಿದರು.

ಡಿಪ್ಲೊಮಾ ಕೋರ್ಸ್‌ ಆರಂಭ

‘ಜಿಲ್ಲೆಯ ಕಣಗಿನಹಾಳದಲ್ಲಿ ದೇಶದ ಮೊದಲ ಸಹಕಾರಿ ಸಂಘ ಆರಂಭವಾಗಿದ್ದರಿಂದ ಈ ಭಾಗದಲ್ಲಿ ಸಹಕಾರ ಕ್ಷೇತ್ರವನ್ನು ಇಂದಿನ ಯುವ ಪೀಳಿಗೆಗೆ ಹೆಚ್ಚು ಪರಿಚಯಿಸಿ, ಅದರ ಬೆಳವಣಿಗೆಗೆ ಪೂರಕವಾಗಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನಿಂದ ಒಂದು ವರ್ಷದ ‘ಡಿಪ್ಲೋಮಾ ಇನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‍ಮೆಂಟ್’ (ಡಿಸಿಬಿಎಂ) ಕೋರ್ಸ್ ಆರಂಭಿಸಲಾಗಿದೆ’ ಎಂದು ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ತಿಳಿಸಿದರು.

ಇದಕ್ಕಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರಿಂದ ಸಹಕಾರ ಕ್ಷೇತ್ರದಲ್ಲಿ ಯುವಕರಿಗೆ ಉದ್ಯೋಗ ಪಡೆದುಕೊಳ್ಳಲು ನೆರವಾಗಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT