ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಪ್ರತಿಭೆಗೆ ಸಾಧನೆಯ ಗರಿ

ಶೇ 94.83ರಷ್ಟು ಅಂಕ ಪಡೆದ ಸೊರಟೂರ ಗ್ರಾಮದ ಲಕ್ಷ್ಮೀ ದೊಡ್ಡಣ್ಣವರ
Last Updated 17 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಶಿರಹಟ್ಟಿ: ಮನೆಯಲ್ಲಿ ಬಡತನ, ಅನಕ್ಷರಸ್ಥ ತಂದೆ–ತಾಯಿ ಇದ್ದರೂ ಸಾಧನೆ ಮಾಡಲೇಬೇಕು ಎಂಬ ಉತ್ಕಟ ಬಯಕೆಯಿಂದ ಮುನ್ನುಗ್ಗಿದ ಸಮೀಪದ ಸೊರಟೂರ ಗ್ರಾಮದ ಲಕ್ಷ್ಮಿ ದೊಡ್ಡಣ್ಣವರ ದ್ವೀತಿಯ ಪಿಯುಸಿಯಲ್ಲಿ ಶೇ 94.83ರಷ್ಟು ಅಂಕ ಗಳಿಸಿದ್ದಾರೆ.

ಸ್ವಗ್ರಾಮದಲ್ಲಿರುವ ಅನ್ನದಾನೇಶ್ವರ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಓದಿರುವ ಲಕ್ಷ್ಮಿ ತಂದೆ ದೇವಪ್ಪ ಹಾಗೂ ತಾಯಿ ಮಹಾದೇವಿ ಅವರಿಗೆ ಕೃಷಿ ಮತ್ತು ಮನೆ ಕೆಲಸದಲ್ಲಿ ನೆರವಾಗುತ್ತಲೇ ಉತ್ತಮ ಸಾಧನೆ ಮಾಡಿದ್ದಾರೆ. ಕನ್ನಡ–94, ಇಂಗ್ಲಿಷ್–85, ಸಮಾಜಶಾಸ್ತ್ರ–96, ಇತಿಹಾಸ–97, ರಾಜ್ಯಶಾಸ್ತ್ರ–99, ಅರ್ಥಶಾಸ್ತ್ರ–98 ಒಟ್ಟು 600ಕ್ಕೆ 569 ಅಂಕಗಳನ್ನು ಪಡೆದು ತಾಲ್ಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಐಎಎಸ್ ಮಾಡಬೇಕೆಂಬ ಗುರಿ ಹೊಂದಿರುವ ಲಕ್ಷ್ಮಿ ಪದವಿ ಮುಗಿಸಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತೇನೆ ಎಂದು ತಿಳಿಸಿದರು. ‘ನಮ್ಮ ಗ್ರಾಮದವರೇ ಆದ ಐಪಿಎಸ್‌ ಅಧಿಕಾರಿ ರವಿ ಚನ್ನಣ್ಣವರ ನನಗೆ ಸ್ಫೂರ್ತಿ. ಅವರ ಪರಿಶ್ರಮ ಮತ್ತು ವಿದ್ಯಾರ್ಥಿ ಜೀವನದ ಕುರಿತ ಮಾತುಗಳು ನನಗೆ ಪ್ರೇರಣೆಯಾಗಿವೆ’ ಎಂದು ತಿಳಿಸಿದರು.

‘ತಂದೆ–ತಾಯಿ, ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ಶಿಕ್ಷಕ ಕೆ.ಎ.ಬಳಿಗೇರ ಅವರ ಪ್ರೇರಣೆ ಹಾಗೂ ಆಶೀರ್ವಾದ ನನ್ನ ಸಾಧನೆಗೆ ಕಾರಣ. ನಿತ್ಯ ಕನಿಷ್ಠ 6 ಗಂಟೆ ಅಧ್ಯಯನ ಮಾಡುತ್ತಿದ್ದೆ. ಕಾಲೇಜಿನಲ್ಲಿ ಬೋಧಿಸಿದ ಪಾಠ ಆಲಿಸುವ ಜತೆ, ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳುತ್ತಿದ್ದೆ’ ಎಂದು ಅವರು ಹೇಳಿದರು.

ಒಂದು ಎಕರೆ 20 ಗುಂಟೆ ಜಮೀನು ಹೊಂದಿರುವ ದೇವಪ್ಪ ತಮಗೆ ಬರುವ ಅಲ್ಪ ಆದಾಯದಲ್ಲಿಯೇ ಮೂವರು ಹೆಣ್ಣುಮಕ್ಕಳು, ಪುತ್ರ, ಪತ್ನಿಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಬಯಕೆ ಅವರಿಗಿದ್ದರೂ ಅದಕ್ಕೆ ಬಡತನ ಅಡ್ಡಿಯಾಗಬಹುದು ಎಂಬ ಅಳುಕೂ ಇದೆ. ದೇವಪ್ಪ ಅವರಿಗೆ ನೆರವಾಗಲು ಬಯಸುವವರು ಮೊ: 70267 30575 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT