ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ರಾಜು ಕುರಡಗಿ ನೇಮಕ

Published 16 ಜನವರಿ 2024, 6:53 IST
Last Updated 16 ಜನವರಿ 2024, 6:53 IST
ಅಕ್ಷರ ಗಾತ್ರ

ಗದಗ: ಬಿಜೆಪಿ ಗದಗ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ರಾಜು ಕುರಡಗಿ ಅವರು ನೇಮಕಗೊಂಡಿದ್ದು, ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಬೇಕಿದೆ.

ಈ ಹಿಂದೆ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದ ಮುತ್ತಣ್ಣ ಲಿಂಗನಗೌಡ್ರ ರೋಣ ವಿಧಾನಸಭಾ ಕ್ಷೇತ್ರದವರು. 2023ರ ವಿಧಾನಸಭಾ ಚುನಾವಣೆಯಲ್ಲಿ ರೋಣ ಕ್ಷೇತ್ರದಲ್ಲೇ ಬಿಜೆಪಿ ದೊಡ್ಡ ಸೋಲು ಅನುಭವಿಸಿತು. ‘ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವಲ್ಲಿ ಅವರು ವಿಫಲರಾಗಿದ್ದಾರೆ’ ಎಂದು ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದರು.

‘ಲಿಂಗಾಯತ ಗಾಣಿಗ ಸಮುದಾಯಕ್ಕೆ ಸೇರಿದ ಮುತ್ತಣ್ಣ ಲಿಂಗನಗೌಡ್ರ ಅವರ ಜಾಗಕ್ಕೆ ಲಿಂಗಾಯತ ಬಣಜಿಗ ಪಂಗಡಕ್ಕೆ ಸೇರಿದ ರಾಜು ಕುರಡಗಿ ಅವರನ್ನು ತರಲಾಗಿದೆ. ಇಲ್ಲಿ ಜಾತಿ ಸಮೀಕರಣಕ್ಕಿಂತ ‘ಸ್ವಜಾತಿ’ ಪ್ರೇಮದಿಂದ ಈ ಆಯ್ಕೆ ನಡೆದಿದೆ’ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ನಡೆದಿದೆ.

ಎರಡು ದಶಕಗಳಿಂದ ರಾಜಕಾರಣದಲ್ಲಿ ಇರುವ ರಾಜು ಕುರಡಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗದಗ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಟಿಕೆಟ್‌ ಸಿಗುವ ವಿಶ್ವಾಸ ಅವರಲ್ಲಿತ್ತು. ಆದರೆ, ಟಿಕೆಟ್ ಅನಿಲ್‌ ಮೆಣಸಿನಕಾಯಿ ಅವರ ಪಾಲಾಯಿತು. ಟಿಕೆಟ್‌ ಸಿಗದಿದ್ದರೂ ಬೇಸರಗೊಳ್ಳದೇ ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಂಡರು.

‘ಗದಗ ಜಿಲ್ಲೆಯು ಹಾವೇರಿ ಮತ್ತು ಬಾಗಲಕೋಟೆ ಲೋಕಸಭಾ ಕ್ಷೇತ್ರಗಳಿಗೆ ಒಳಪಟ್ಟಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಗುರಿಯಿದೆ. ಅದಕ್ಕಾಗಿ ಬೂತ್‌ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಆದ್ಯತೆ ಕೊಡಲಾಗುವುದು’  ಎಂದು ರಾಜು ಕುರಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡ ಬಳಿಕ ಕ್ಷೇತ್ರದ ಕಾರ್ಯಕರ್ತರು ಉತ್ಸಾಹ ಕಳೆದುಕೊಂಡಿದ್ದರು. ಆದರೆ, ಈಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು  ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚಿನ ಮತಗಳನ್ನು ಗಳಿಸಲು ಪ್ರಯತ್ನಿಸಲಾಗುವುದು’ ಎಂದು ಅವರು ಹೇಳಿದರು.

ಬಿಜೆಪಿ ಗದಗ ಜಿಲ್ಲಾ ಘಟಕದಲ್ಲಿ ಬಣ ರಾಜಕಾರಣ ಇಲ್ಲ ಎನ್ನುವ ಅವರು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಚುನಾವಣೆ ಸಂದರ್ಭದಲ್ಲಿ ಟಿಕೆಟ್‌ ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ಟಿಕೆಟ್‌ ಸಿಗುವುದು ಮಾತ್ರ ಒಬ್ಬರಿಗೆ. ಇದರಿಂದ ಮತ್ತೊಬ್ಬರಿಗೆ ನಿರಾಸೆ ಸಹಜ. ಅದನ್ನೇ ಬಣ ರಾಜಕಾರಣ ಎನ್ನುವುದು ತಪ್ಪು ಎಂದು ವ್ಯಾಖ್ಯಾನಿಸುತ್ತಾರೆ ಅವರು. 

‘ನಿಜವಾಗಲೂ ನನ್ನ ಸ್ವಭಾವ ಮೃದು ಇರಬಹುದು. ಆದರೆ, ಮೃದು ಸ್ವಭಾವವೂ ಸಾಕಷ್ಟು ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿದೆ ಎಂಬುದನ್ನು ಇತಿಹಾಸ ತಿಳಿಸುತ್ತದೆ. ಪಕ್ಷದ ಒಳಿತಿಗಾಗಿ ಕಠೋರ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭ ಬಂದರೆ ಮೃದುತ್ವ ಬದಿಗಿಟ್ಟು ದಿಟ್ಟ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ದೃಢವಾಗಿಯೇ ಉಚ್ಛರಿಸಿದರು.

ಬಿಜೆಪಿ ಜಿಲ್ಲಾ ಘಟಕದಲ್ಲಿ ಬಣ ರಾಜಕಾರಣ ಇಲ್ಲ. ಕಾರ್ಯಕರ್ತರು ಚುನಾವಣೆ ವೇಳೆ ಟಿಕೆಟ್‌ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಟಿಕೆಟ್‌ ಒಬ್ಬರಿಗೆ ಮಾತ್ರ ಸಿಗುತ್ತದೆ. ಇದನ್ನು ಬಣ ರಾಜಾರಣವೆಂದು ಭಾವಿಸಬಾರದು.
–ರಾಜು ಕುರಡಗಿ ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ
‘ಎರಡು ದಶಕದ ಅನುಭವಕ್ಕೆ ಮಣೆ’
ಮೂರು ಲೋಕಸಭಾ ಮತ್ತು ಮೂರು ವಿಧಾನಸಭಾ ಚುನಾವಣೆಗಳಲ್ಲಿ ರಾಜು ಕುರಡಗಿ ಕೆಲಸ ಮಾಡಿದ್ದಾರೆ. ಗೋವಾ ವಿಧಾನಸಭಾ ಚುನಾವಣೆ ವೇಳೆ ದಕ್ಷಿಣ ಗೋವಾದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ವಹಿಸಿದ್ದರು. ಕಲಬುರಗಿ ಬೀದರ್‌ ಉಸ್ತುವಾರಿಯಾಗಿ ಚಿಕ್ಕೋಡಿ ಸಂಘಟನಾ ಜಿಲ್ಲೆಯಲ್ಲಿ ಪ್ರಭಾರಿಯಾಗಿ ಕೆಲಸ ಮಾಡಿದ ಅನುಭವವಿದೆ. ಇವೆಲ್ಲ ಗುರುತಿಸಿಯೇ ಅವರಿಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ದೊರಕಿದೆ’ ಎಂದು ಪಕ್ಷದ ಕಾರ್ಯಕರ್ತರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT