ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ | ಶಿಫಾರಸು ಹಿಂಪಡೆಯದಿದ್ದರೆ ಪ್ರತಿಭಟನೆ: ಎಚ್ಚರಿಕೆ

Published 31 ಜನವರಿ 2024, 15:51 IST
Last Updated 31 ಜನವರಿ 2024, 15:51 IST
ಅಕ್ಷರ ಗಾತ್ರ

ಗದಗ: ‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಂವಿಧಾನದ 341 (3) ತಿದ್ದುಪಡಿಗಾಗಿ ಕೇಂದ್ರ ಸರ್ಕಾರಕ್ಕೆ ಮಾಡಿರುವ ಶಿಫಾರಸು ಹಿಂಪಡೆಯಬೇಕು. ಇಲ್ಲವಾದಲ್ಲಿ  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅದರ ಪರಿಣಾಮ ಎದುರಿಸಲಿದೆ’ ಎಂದು ನ್ಯಾ. ಎ.ಜೆ.ಸದಾಶಿವ ಆಯೋಗ ವರದಿ ವಿರೋಧಿ ಹೋರಾಟ ಸಮಿತಿ ಮುಖಂಡ ರವಿಕಾಂತ ಅಂಗಡಿ ಎಚ್ಚರಿಸಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಂವಿಧಾನದ 341 (3) ತಿದ್ದುಪಡಿ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಮರಣ ಶಾಸನವಾಗಲಿದೆ. ಪರಿಶಿಷ್ಟ ಪಟ್ಟಿಯಿಂದ ಸಹೋದರ ಜಾತಿಗಳನ್ನು ಕೈಬಿಡುವುದು, ವರ್ಗೀಕರಿಸುವದು ವರದಿಯ ಅಪಾಯಕಾರಿ ಅಂಶ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಇನ್ನೊಮ್ಮೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲಿ’ ಎಂದು ಆಗ್ರಹಿಸಿದರು.

‘ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಸದಾಶಿವ ಆಯೋಗ ವರದಿ ಅವೈಜ್ಞಾನಿಕ ಎಂದು ಹೇಳಿ ಅದರ ರದ್ದತಿಗೆ ಕೋರಿತ್ತು’ ಎಂದು ತಿಳಿಸಿದರು.

‘ಆದರೆ, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ಸದಾಶಿವ ಆಯೋಗ ವರದಿಯನ್ನು ಮತ್ತೆ ಮುನ್ನಲೆಗೆ ತಂದು ಸಚಿವ ಸಂಪುಟದಲ್ಲಿ ಸಂವಿಧಾನದ 341(3) ತಿದ್ದುಪಡಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಇದರ ಅನ್ವಯ ಎಡಗೈ ಸಮುದಾಯಕ್ಕೆ ಶೇ 6.5, ಬಲಗೈ ಸಮುದಾಯಕ್ಕೆ ಶೇ 5.5, ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ 3 ಮತ್ತು ಅಲೆಮಾರಿ ಸಮುದಾಯಕ್ಕೆ ಶೇ 1ರಷ್ಟು ಒಳಮಿಸಲಾತಿ ಸಿಗಲಿದೆ. ಇದರಿಂದ ಸಮುದಾಯಕ್ಕೆ ಅನ್ಯಾಯವಾಗಲಿದೆ. ಕೇಂದ್ರಕ್ಕೆ ಮಾಡಿರುವ ಶಿಫಾರಸು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಮುಂದೆ ಆಗುವ ಯಾವುದೇ ಅಹಿತಕರ ಘಟನೆಗೆ ಸರ್ಕಾರವೇ ಹೊಣೆಯಾಗಲಿದೆ’ ಎಂದು ಎಚ್ಚರಿಸಿದರು.

‘ಅಹಿಂದ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ಸಮುದಾಯದ ಜನಪ್ರತಿನಿಧಿಗಳಿಗೆ ಯಾವುದೇ ಹುದ್ದೆ ನೀಡಿಲ್ಲ’ ಎಂದು ಕಿಡಿಕಾರಿದರು.

ಮುಖಂಡರಾದ ಪರಮೇಶ ನಾಯಕ, ದಯಾನಂದ ಪವಾರ, ಪಾಂಡು ಚವ್ಹಾಣ, ನೀಲು ರಾಠೋಡ, ಸೋಮಪ್ಪ ಲಮಾಣಿ, ಟಿ.ಡಿ. ಪೂಜಾರ, ವಿಠ್ಠಲ ತೋಟದ, ಶಿವಪ್ಪ ಪವಾರ, ಮುತ್ತಣ್ಣ ಸಂದಕದ, ಸೋಮು ಗದಗ, ಶ್ರೀಕಾಂತ ಪಾಪನಾಶಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT