ಬುಧವಾರ, ಅಕ್ಟೋಬರ್ 27, 2021
21 °C
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿವಿ ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ

ಐದು ಸ್ನಾತಕ ಪದವಿ ಕೋರ್ಸ್‌ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ವರ್ಷದಿಂದಲೇ ಐದು ವಿಭಾಗಗಳಲ್ಲಿ ಸ್ನಾತಕ ಪದವಿ ಆರಂಭಿಸಲಾಗುವುದು’ ಎಂದು ಕುಲಪತಿ ಪ್ರೊ. ವಿಷ್ಣುಕಾಂತ ಎಸ್. ಚಟಪಲ್ಲಿ ಹೇಳಿದರು.

ನಗರದ ರೈತ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಅ.9ರಂದು ಬೆಳಿಗ್ಗೆ 10ಕ್ಕೆ ವಿವಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಕೌಶಲ ವಿಕಾಸ ಭವನ, ಅಧ್ಯಯನ ಶಾಲಾ ಕಟ್ಟಡ ಹಾಗೂ ವಿದ್ಯಾರ್ಥಿನಿಲಯ ಕಟ್ಟಡಗಳ ಲೋಕಾರ್ಪಣೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಪದವಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುತ್ತಿರುವ ಪ್ರಥಮ ಸಂಸ್ಥೆಗಳಲ್ಲಿ ಒಂದಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ಈ ದಿಕ್ಕಿನಲ್ಲಿ ಪ್ರಗತಿಪರ ಮುನ್ನಡೆ ಸಾಧಿಸಿದೆ. ಪ್ರಸಕ್ತ ಸಾಲಿನಿಂದ ಸ್ನಾತಕ ಪದವಿಗಳಾದ ಬಿಎ ಹಾನರ್ಸ್‌ ಗ್ರಾಮೀಣಾಭಿವೃದ್ಧಿ ಮತ್ತು ಆಡಳಿತ, ಬಿಎಸ್‌ಸಿ ಹಾನರ್ಸ್‌ ಸಾರ್ವಜನಿಕ ಆರೋಗ್ಯ ಮತ್ತು ಸಮಾಜಕಾರ್ಯ, ಬಿಎಸ್‌ಸಿ ಹಾನರ್ಸ್‌ ಕೃಷಿ ವ್ಯವಹಾರ ಮತ್ತು ಆಹಾರ ಸಂಸ್ಕರಣೆ, ಬಿಎಸ್‌ಸಿ ಹಾನರ್ಸ್‌ ಜಿಯೋಇನ್‌ಫಾರ್‌ಮೆಟಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್, ಬಿಎಸ್‌ಸಿ ಹಾನರ್ಸ್‌ ನಾವೀನ್ಯತೆ ಮತ್ತು ನವೋದ್ಯಮ ತರಗತಿಗಳು ವಿವಿಯಲ್ಲಿ ನಡೆಯಲಿವೆ. ವಿಭಾಗದಲ್ಲೂ 60 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.

‘ವಿವಿಯಲ್ಲಿ ಆರಂಭಿಸಲಾಗುತ್ತಿರುವ 5 ಹೊಸ ಸ್ನಾತಕ ಪದವಿಗಳು ಹಲವು ವಿಶೇಷತೆಗಳನ್ನು ಒಳಗೊಂಡಿವೆ. ಅವುಗಳಲ್ಲಿ ಬಹುಶಿಸ್ತೀಯ ವಿಧಾನ, ಬಹು ಹಂತದ ಪ್ರವೇಶ ಹಾಗೂ ನಿರ್ಗಮನ, ಬ್ಲೆಂಡೆಡ್ ಕಲಿಕಾ ವಿಧಾನ, ಗ್ರಾಮೀಣ ಕಾರ್ಯಕ್ರಮ, ಪ್ರಾಜೆಕ್ಟ್‌ ವರ್ಕ್, ಕೃಷಿ ಆಧಾರಿತ ಚಟುವಟಿಕೆಗಳು, ಡಿಜಿಟಲ್ ಸಾಕ್ಷರತೆ, ಸಂವಹನ ಕೌಶಲಗಳು, ನೈತಿಕ ಮೌಲ್ಯಗಳು, ವೃತ್ತಿಪರ ಕೌಶಲಗಳು, ಪರಿಸರ ಅಧ್ಯಯನ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಸ ಸ್ನಾತಕ ಪದವಿಗಳು ಹೊಂದಿವೆ’ ಎಂದು ತಿಳಿಸಿದರು.

ವಿವಿ ಕುಲಸಚಿವ ಪ್ರೊ. ಬಸವರಾಜ ಲಕ್ಕಣ್ಣವರ, ವಿಶೇಷಾಧಿಕಾರಿ ಉಮೇಶ್ ಬಾರ್ಕೇರ್, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ ಇದ್ದರು.

ನಾಲ್ಕು ವರ್ಷಗಳ ಪದವಿ ಪೂರೈಸಿದವರು ನೇರವಾಗಿ ಪಿ.ಎಚ್‍ಡಿಗೆ ಪ್ರವೇಶ ಪಡೆಯಬಹುದು. ಈ ಮಧ್ಯೆ ಯಾವ ಹಂತದಲ್ಲಿ ಓದು ನಿಲ್ಲಿಸಿದರೂ ಅವರಿಗೆ ಪ್ರಮಾಣಪತ್ರ ಸಿಗಲಿದೆ. ಜತೆಗೆ ಬೇಕಾದಾಗ ಮತ್ತೆ ಸೇರುವ ಅವಕಾಶವೂ ಇರಲಿದೆ
ಪ್ರೊ.ವಿಷ್ಣುಕಾಂತ ಚಟಪಲ್ಲಿ, ಕುಲಪತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು