ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ: ರಾಜ್ಯ ಹೆದ್ದಾರಿಗಳಲ್ಲಿ ಗುಂಡಿ–ಸಂಚಾರಕ್ಕೆ ಸಂಚಕಾರ

Published 14 ಡಿಸೆಂಬರ್ 2023, 4:41 IST
Last Updated 14 ಡಿಸೆಂಬರ್ 2023, 4:41 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ಜಿಲ್ಲಾ ಮುಖ್ಯ ರಸ್ತೆಗಳು ಮತ್ತು ತಾಲ್ಲೂಕಿನಲ್ಲಿ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿಗಳು ಗುಂಡಿ ಬಿದ್ದು ಹಾಳಾಗಿವೆ. ಅದರಲ್ಲೂ ಜಿಲ್ಲಾ ರಸ್ತೆಗಳು ಹಾಳಾಗಿದ್ದು ವಾಹನಗಳ ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ.

ಕಾರವಾರ-ಇಳಕಲ್ಲ, ಕಲ್ಮಲಾ-ಶಿಗ್ಗಾವಿ, ಪಾಳಾ-ಬದಾಮಿ ರಾಜ್ಯ ಹೆದ್ದಾರಿಗಳನ್ನು ಆಯ್ದ ಭಾಗಗಳಲ್ಲಿ ಸುಧಾರಣೆ ಮಾಡಲು ₹ 30 ಕೋಟಿ ಮೊತ್ತದ ಅಂದಾಜು ಪತ್ರಿಕೆಯನ್ನು ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ.

ಇನ್ನು ಜಿಲ್ಲಾ ಮುಖ್ಯ ರಸ್ತೆಗಳ ಸ್ಥಿತಿಯಂತೂ ನರಕ ಯಾತನೆ ನೀಡುತ್ತಿವೆ. ಗೋವನಾಳ-ಶಿಗ್ಲಿ ರಸ್ತೆ ಹಾಳಾಗಿ ಮೂರ್ನಾಲ್ಕು ವರ್ಷಗಳೇ ಕಳೆದಿವೆ. ಆದರೆ ಇಲಾಖೆಯ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಈ ರಸ್ತೆ ಎಷ್ಟರಮಟ್ಟಿಗೆ ಹಾಳಾಗಿದೆ ಎಂದರೆ ಜಾನುವಾರು ಕೂಡ ಓಡಾಡಲು ಆಗುತ್ತಿಲ್ಲ. ಸವಣೂರ ತಾಲ್ಲೂಕಿನ ಯಲವಗಿ-ಗೋವನಾಳ ಮಾರ್ಗವಾಗಿ ಶಿಗ್ಲಿ, ಒಡ್ಡೂರು ಮೂಲಕ ಸೂರಣಗಿ ತಲುಪಲು ಇದು ಒಂದೇ ರಸ್ತೆ ಇರುವುದು. ಅದೂ ಸಹ ಸಂಪೂರ್ಣ ತಗ್ಗು ಬಿದ್ದು ಹಾಳಾಗಿದೆ. ಬಸ್ ಸಂಚಾರ ಬಂದ್ ಆಗಿ ವರ್ಷಗಳೇ ಕಳೆದಿವೆ.

ಅದರಂತೆ ತಾಲ್ಲೂಕಿನ ಪ್ರಮುಖ ಜಿಲ್ಲಾ ಮುಖ್ಯ ರಸ್ತೆಗಳಾದ ಲಕ್ಷ್ಮೇಶ್ವರ-ದೇವಿಹಾಳ, ಲಕ್ಷ್ಮೇಶ್ವರ-ಹೊಸರಿತ್ತಿ, ಲಕ್ಷ್ಮೇಶ್ವರ-ಶಿರಹಟ್ಟಿ, ಲಕ್ಷ್ಮೇಶ್ವರ-ಅಣ್ಣಿಗೇರಿ, ಲಕ್ಷ್ಮೇಶ್ವರ-ಯತ್ತಿನಹಳ್ಳಿ, ಅಡರಕಟ್ಟಿ-ಕುಂದ್ರಳ್ಳಿ-ನಾದಿಗಟ್ಟಿ, ಸೂರಣಗಿ-ಗುತ್ತಲ ರಸ್ತೆಗಳು ಇದ್ದೂ ಇಲ್ಲದಂತಿದ್ದು ಪ್ರಯಾಣಿಕರ ಪ್ರಾಣ ಹರಣಕ್ಕಾಗಿ ಕಾಯುತ್ತಿವೆ.

‘ತಾಲ್ಲೂಕಿನ ರಸ್ತೆಗಳು ಬಹಳಷ್ಟು ಹಾಳಾಗಿವೆ. ಕಾರಣ ಲೋಕೋಪಯೋಗಿ ಇಲಾಖೆ ಕೂಡಲೇ ಅವುಗಳ ದುರಸ್ತಿ ಮಾಡಿಸಲು ಮುಂದಾಗಬೇಕು’ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ ಆಗ್ರಹಿಸಿದರು.

ಹದಗೆಟ್ಟಿರುವ ರಸ್ತೆಗಳ ಸುಧಾರಣೆಗಾಗಿ ಅಧಿವೇಶನದಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಅವರು ಲೋಕೋಪಯೋಗಿ ಸಚಿವರ ಮೇಲೆ ಒತ್ತಡ ತರಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಗೋವನಾಳ-ಶಿಗ್ಲಿ ರಸ್ತೆಯ ಸುಧಾರಣೆಗೆ ₹ 8 ಕೋಟಿ ಮೊತ್ತದ ಅಂದಾಜು ಪತ್ರಿಕೆಯನ್ನು ಸಲ್ಲಿಸಲಾಗಿದೆ
–ಫಕೀರೇಶ ತಿಮ್ಮಾಪುರ ಎಇಇ ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT