ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ: ಟ್ಯಾಂಕರ್‌ ನೀರಿನಿಂದ ಗಿಡಗಳ ರಕ್ಷಣೆ

ಅರಣ್ಯ ಇಲಾಖೆ ಸಿಬ್ಬಂದಿ ಕ್ರಮಕ್ಕೆ ಪರಿಸರಪ್ರಿಯರ ಮೆಚ್ಚುಗೆ
Published 25 ಫೆಬ್ರುವರಿ 2024, 4:39 IST
Last Updated 25 ಫೆಬ್ರುವರಿ 2024, 4:39 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಅರಣ್ಯ ಬೆಳೆಸಲು ಪ್ರತಿವರ್ಷ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ‘ಗಿಡಮರಗಳನ್ನು ಬೆಳೆಸಿ, ನಾಡು ಉಳಿಸಿ’ ಎಂಬ ಘೋಷವಾಕ್ಯ ಮೊಳಗಿಸುತ್ತದೆ. ಅದರಂತೆ ತಾಲ್ಲೂಕಿನ ಪ್ರಾದೇಶಿಕ ವಲಯ ಮತ್ತು ಸಾಮಾಜಿಕ ಅರಣ್ಯ ಇಲಾಖೆ  ಪ್ರತಿವರ್ಷ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಎರಡೂ ತಾಲ್ಲೂಕುಗಳ ರಸ್ತೆಯ ಎರಡೂ ಬದಿಯಲ್ಲಿ ಮತ್ತು ಅರಣ್ಯ ಪ್ರದೇಶದಲ್ಲಿ ಸಾವಿರಾರು ಗಿಡ ಮರಗಳನ್ನು ಬೆಳೆಸುತ್ತದೆ.

ಆದರೆ, ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಮಳೆಗಳು ಕೈಕೊಟ್ಟಿದ್ದರಿಂದ ಗಿಡಮರಗಳು ಬೆಳೆಯಲು ತೇವಾಂಶದ ಕೊರತೆ ಉಂಟಾಗಿದೆ. ಹೀಗಾಗಿ ಇಲಾಖೆ ತಾನೇ ಹಚ್ಚಿದ ಗಿಡ ಮರಗಳನ್ನು ಒಣಗಲು ಬಿಡದೆ ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅಭಿಮಾನ ಮೂಡಿಸಿದೆ.

ಮಳೆ ಬರದ ಕಾರಣ ಅರಣ್ಯ ಇಲಾಖೆಯವರು ರಸ್ತೆಯ ಇಕ್ಕಲಗಳಲ್ಲಿ ಹಚ್ಚಿದ್ದ ಗಿಡಗಳು ಒಣಗುವ ಹಂತ ತಲುಪಿದ್ದವು. ಇಲಾಖೆ ಟ್ಯಾಂಕರ್ ಮೂಲಕ ಅವುಗಳಿಗೆ ನೀರು ಕೊಡುವ ಮೂಲಕ ಗಿಡಗಳು ಒಣಗದಂತೆ ಜೋಪಾನ ಮಾಡುತ್ತಿದೆ.

ತಾಲ್ಲೂಕಿನ ಎಲ್ಲ ಗ್ರಾಮಗಳ ರಸ್ತೆಗಳ ಬದಿಯಲ್ಲಿ ಇಲಾಖೆ ಗಿಡಗಳನ್ನು ನೆಟ್ಟಿದೆ. ಅದರಲ್ಲೂ ಲಕ್ಷ್ಮೇಶ್ವರದಿಂದ ಯಳವತ್ತಿ ರಸ್ತೆಯಲ್ಲಿ ಹಚ್ಚಿರುವ ನೂರಾರು ಗಿಡಗಳು ಸೊಗಸಾಗಿ ಬೆಳೆದಿವೆ. ಆದರೆ ಮಳೆ ಇಲ್ಲದೆ ಅವುಗಳ ಮುಖ ಬಾಡುವ ಸ್ಥಿತಿ ತಲುಪಿದ್ದವು. ಇಲಾಖೆ ಕುಂದ್ರಳ್ಳಿ, ಕುಂದ್ರಳ್ಳಿ ತಾಂಡಾ, ಹರದಗಟ್ಟಿ, ದೊಡ್ಡೂರು, ಉಳ್ಳಟ್ಟಿ, ಶ್ಯಾಬಳ ರಸ್ತೆಯಲ್ಲಿನ ಗಿಡಗಳಿಗೆ ನೀರುಣಿಸುತ್ತಿದ್ದಾರೆ.

ರಸ್ತೆಗಳ ಇಕ್ಕೆಲಗಳಲ್ಲಿ ಬೇವು, ಆಲ, ಅರಳಿ, ಸಿಹಿಹುಣಸೆ, ತಪಸಿ, ಹೊಂಗೆ ಸೇರಿದಂತೆ ಅಂದಾಜು ಸಾವಿರಾರು ಸಂಖ್ಯೆಯಲ್ಲಿ ಗಿಡಗಳನ್ನು ಹಚ್ಚಲಾಗಿದೆ. ಆದರೆ, ತೇವಾಂಶದ ಕೊರತೆಯಿಂದಾಗಿ ಗಿಡಗಳು ಬಾಡುತ್ತಿದ್ದವು. ಇದನ್ನು ಮನಗಂಡ ಇಲಾಖೆ ಅವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಟ್ಯಾಂಕರ್ ಮೂಲಕ ನೀರು ಹಾಕುತ್ತಿದೆ.

ಆದರೆ, ಅನೇಕ ಗಿಡಗಳು ಬೆಳೆಯುತ್ತಿದ್ದಂತೆ ಕುರಿಗಾರರು ಅವುಗಳಿಗೆ ಕೊಡಲಿ ಏಟು ಹಾಕುತ್ತಾರೆ. ಇದರಿಂದಾಗಿ ಬೆಳೆಯುವ ಗಿಡ ಹಾಗೆಯೇ ಒಣಗಿ ಹೋಗುತ್ತವೆ. ಈ ಕುರಿತು ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಲ್ಲೂಕಿನಾದ್ಯಂತ ಸಾವಿರಾರು ಗಿಡಗಳನ್ನು ಹೆಚ್ಚಿದ್ದೇವೆ. ಈಗ ಮಳೆ ಇಲ್ಲದ್ದರಿಂದ ಅವು ಒಣಗುತ್ತಿದ್ದವು. ಹೀಗಾಗಿ ಗಿಡಗಳಿಗೆ ನೀರು ಕೊಡುತ್ತಿದ್ದೇವೆ

-ರಾಮಪ್ಪ ಪೂಜಾರ ಆರ್‌ಎಫ್‌ಒ

ಅರಣ್ಯ ಇಲಾಖೆ ಗಿಡಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್‌ನಿಂದ ನೀರು ಹಾಕುತ್ತಿರುವುದು ಜನರಲ್ಲಿ ಖುಷಿ ತಂದಿದೆ. ಸಾರ್ವಜನಿಕರು ಸಹ ಗಿಡಮರಗಳನ್ನು ಕಾಪಾಡಿಕೊಂಡರೆ ಪರಿಸರ ಉಳಿಯುತ್ತದೆ

-ಬಿ.ಎಸ್.ಬಾಳೇಶ್ವರಮಠ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT