ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಂಚಮಸಾಲಿ ಮುಖಂಡರ ಬೆನ್ನಿಗೆ ನಾವಿದ್ದೇವೆ

ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ
Published 13 ಏಪ್ರಿಲ್ 2024, 13:58 IST
Last Updated 13 ಏಪ್ರಿಲ್ 2024, 13:58 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ಕ್ಷೇತ್ರದ ಶಾಸಕರು ಪಂಚಮಸಾಲಿ ಸಮಾಜದ ಯುವಕರ ಮೇಲೆ ಎಫ್ಐಆರ್ ದಾಖಲು ಮಾಡಿಸಿ ಬೆದರಿಸುವ ಕಾರ್ಯ ಮಾಡುತ್ತಿರುವುದು ಖಂಡನೀಯ. ಯುವ ಮುಖಂಡರ ಹಿಂದೆ ಪಂಚಮಸಾಲಿ ಸಮಾಜ ಹಾಗೂ ಗುರುಗಳು ಇದ್ದಾರೆ’ ಎಂದು ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಅವರು ಶಾಸಕ ಚಂದ್ರು ಲಮಾಣಿ ಅವರ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಪಟ್ಟಣದ ಎಪಿಎಂಸಿ ವರ್ತಕರ ಸಂಘದ ಸಭಾಂಗಣದಲ್ಲಿ ಶನಿವಾರ ನಡೆದ ಪಂಚಮಸಾಲಿ ಸಮಾಜದ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಪಂಚಮಸಾಲಿ ಸಮಾಜ ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಕಳೆದ 30 ವರ್ಷಗಳಿಂದ ವಿವಿಧ ಪಕ್ಷಗಳ ರಾಜಕೀಯ ನಾಯಕರಿಂದ ತುಳಿತಕ್ಕೆ ಒಳಗಾಗಿದೆ. ಸಮಾಜಕ್ಕೆ ಸಿಗಬೇಕಾದ ಸೌಲಭ್ಯ ಸಿಕ್ಕಿಲ್ಲ. ಬಿಜೆಪಿ ನಮ್ಮ ಸಮಾಜವನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡು ಅವರನ್ನು ಪಕ್ಕಕ್ಕೆ ಸರಿಸುವ ಕಾರ್ಯ ಮಾಡಿದೆ’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವವರೆಗೆ ನಮ್ಮ  ಹೋರಾಟ ನಿಲ್ಲುವುದಿಲ್ಲ. ಕೇಂದ್ರದಲ್ಲಿ ಒಬಿಸಿ ಮೀಸಲಾತಿ ಸಿಕ್ಕಲ್ಲಿ ನಮ್ಮ ಸಮಾಜದ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗುವುದರಿಂದ ಐಎಎಸ್, ಐಪಿಎಸ್ ಅಧಿಕಾರಿ ಆಗಲು ಸಾಧ್ಯ. ಯಾವ ರಾಜಕೀಯ ಪಕ್ಷಗಳೂ ನಮ್ಮ ಸಮಾಜದವರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರ ಹುದ್ದೆಯನ್ನೂ ನೀಡಿಲ್ಲ, ಗೌರವದಿಂದ ನಡೆಸಿಕೊಂಡಿಲ್ಲ. ನಮ್ಮ ಸಮಾಜದ ಜನಸಂಖ್ಯೆ ಹೆಚ್ಚು ಇರುವ ಪ್ರದೇಶಗಳಿಗೆ ಹೋಗಿ ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು.

ಮಂಜುನಾಥ ಮಾಗಡಿ ಮಾತನಾಡಿ, ‘ವಚನಾನಂದ ಶ್ರೀಗಳು ಪೀಠಾರೋಹಣ ಮಾಡಿ ಆರು ವರ್ಷ ಸಂದಿರುವ ಹಿನ್ನೆಲೆಯಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಲು ಸಮಾಜದ ಮುಖಂಡರು ತೀರ್ಮಾನಿಸಿದ್ದಾರೆ. ಪೀಠಾರೋಹಣದ ವರ್ಷಾಚರಣೆ ಯಾವಾಗ ಹಾಗೂ ಹೇಗೆ ಮಾಡಬೇಕು ಎನ್ನುವ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.

ರಜನಿಕಾಂತ್ ದೇಸಾಯಿ, ಚನ್ನಪ್ಪ ಕರೆಯುತ್ತಿನ, ವಸಂತಗೌಡ ಪಾಟೀಲ, ಶ್ರೀಕಾಂತಗೌಡ ಪಾಟೀಲ, ದೇವೇಂದ್ರಪ್ಪ ಮರಳಿಹಳ್ಳಿ, ಜುಂಜನಗೌಡ ನರಸಮ್ಮನವರ, ರುದ್ರಗೌಡ ಪೋಲೀಸ್ ಪಾಟೀಲ, ಶಿವಾನಂದ ಬನ್ನಿಮಟ್ಟಿ, ಭೀಮಣ್ಣ ಹುಲ್ಲೂರು, ಮಹಾದೇವಪ್ಪ ಕಟಗಿ, ಮಂಜುನಾಥ ಗೌರಿ, ಪರಮೇಶ ರಿತ್ತಿ, ನಿಂಗಪ್ಪ ಪಾಟೀಲ, ಶಂಕರಪ್ಪ ದೊಡ್ಡಗೌಡ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT