ಡಂಬಳ: ಗ್ರಾಮದ ಹೊರವಲಯದಲ್ಲಿ ರಾಶಿರಾಶಿಯಾಗಿ ಬಿದ್ದಿರುವ ಕೋಳಿ ಅಂಗಡಿ ತಾಜ್ಯ ಸಹಿಸಲಾಗದ ದುರ್ವಾಸನೆ ಬೀರುತ್ತಿದೆ. ಇದರಿಂದಾಗಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ವಿವಿಧ ಓಣಿಯ ಸ್ವಚ್ಛತೆ ಕಾಪಾಡಲು ಯತ್ನಿಸುವ ಪಂಚಾಯ್ತಿ ಅಧಿಕಾರಿಗಳಿಗೆ ಗ್ರಾಮದ ಹೊರವಲಯ ಕಾಣಿಸುತ್ತಿಲ್ಲ. ಹೀಗಾಗಿ ಹೊರವಲಯದಲ್ಲಿ ಸಂಚರಿಸುವವರಿಗೆ ದುರ್ವಾಸನೆ ಸಹಿಸಲು ಅಸಾಧ್ಯವಾಗಿದೆ.
ಗ್ರಾಮದ ಹೊರವಲಯದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡಬಸವೇಶ್ವರ ದೇವಸ್ಥಾನ, ಸೋಮೆಶ್ವರ ದೇವಸ್ಥಾನ ಸೇರಿ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ನಿತ್ಯ ವಿವಿಧ ಭಾಗದಿಂದ ಪ್ರವಾಸಿಗರು ಬರುತ್ತಾರೆ. ಆದರೆ ಈ ಕೋಳಿ ತ್ಯಾಜ್ಯದಿಂದಾಗಿ ಪ್ರವಾಸಿಗರಲ್ಲಿ ಅಸಹ್ಯ ಸೃಷ್ಟಿಯಾಗಿದೆ. ಅಲ್ಲದೆ ವಾಯುವಿಹಾರಕ್ಕೆ ಹೋಗುವವರಿಗೆ, ವಾಹನ ಸವಾರರಿಗೆ, ರೈತರಿಗೆ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಈ ತ್ಯಾಜ್ಯದಿಂದಾಗಿ ಕಿರಿಕಿರಿ ಉಂಟಾಗಿದೆ.