ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತಾ ಅಭಿಯಾನ: ಫೋಟೊಗಷ್ಟೇ ಸೀಮಿತ

Last Updated 25 ಅಕ್ಟೋಬರ್ 2017, 6:29 IST
ಅಕ್ಷರ ಗಾತ್ರ

ಗಜೇಂದ್ರಗಡ: ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಪುರಸಭೆಯ ಆಡಳಿತ ಮಂಡಳಿಯು ಅಂದು ಪೊರಕೆ ಹಿಡಿದು ಫೋಟೊಗೆ ಪೋಜು ಕೊಟ್ಟಿತ್ತು. ಆದರೆ, ನಂತರ ಪಟ್ಟಣ ಸ್ವಚ್ಛವಾಗಿಲ್ಲ. ಡೆಂಗಿ ಕಾಣಿಸಿಕೊಂಡು ಜನರು ಕಂಗಾಲಾಗಿದ್ದರೂ, ಸ್ವಚ್ಛತೆಯ ಬಗ್ಗೆ ಕಾಳಜಿವಹಿಸಿಲ್ಲ ಎಂಬ ಆರೋಪ ವ್ಯಕ್ತವಾಘಿದೆ.ಯತ್ತ ಮನೆ ಮಾಡಿದರೂ ಅದನ್ನು ಅಲಕ್ಷ ಮಾಡುತ್ತಾ ಜಾಣಕುರುಡನಂತೆ ವರ್ತಿಸುತ್ತಿದೆ.

ಪಟ್ಟಣದ ರಸ್ತೆಗಳ ಗುಂಡಿಗಳು ನಿತ್ಯವೂ ವಾಹನ ಸವಾರರನ್ನು ಕಾಡುತ್ತಿವೆ. ಇದರಿಂದ ಪಾದಚಾರಿಗಳಿಗೂ ಸಂಕಷ್ಟ ಎದುರಾಗಿದೆ. ಮಳೆಗಾಲದಲ್ಲಿ ಕೆಲಸ ಆರಂಭಿಸಲಾಗುತ್ತದೆ ಎಂದು ಅಧಿಕಾರಿಗಳು ನೆಪಹೇಳುತ್ತಾರೆ. ಆದರೆ, ಗುಂಡಿಗಳು ಹಾಗೇ ಉಳಿದಿವೆ. ಇನ್ನು ನಿತ್ಯ ಉತ್ಪಾದನೆಯಾಗುವ ಕಸವನ್ನು ಘನತ್ಯಾಜ್ಯ ಘಟಕಕ್ಕೆ ಸಾಗಿಸಲು ಹೊಸ ಜೆಸಿಬಿ ಮತ್ತು ಟಿಪ್ಪರ್ ವಾಹನ ಬಂದು ಪುರಸಭೆ ಆವರಣದಲ್ಲಿ ನಿಂತಿವೆ. ಅವುಗಳ ಬಳಕೆಯಾಗುತ್ತಿಲ್ಲ. ಅವು ತುಕ್ಕು ಹಿಡಿಯುವುದೊಂದು ಬಾಕಿ ಎಂದು ನಾಗರಿಕರು ದೂರುತ್ತಾರೆ.

ಪಟ್ಟಣದ ಚರಂಡಿ ಮತ್ತು ಕಸವನ್ನು ಸ್ವಚ್ಛಗೊಳಿಸಲು ತಂದ ಹೊಸ ವಾಹನಗಳಿಗೂ ಕಾರ್ಯಾಚರಣೆ ಆರಂಭಿಸಿಲ್ಲ. ಕೆಲವು ವಾರ್ಡ್‌ಗಳಲ್ಲಿ ಕಾಲಿಡಲಾಗದಷ್ಟು ಗಲೀಜು ಇದ್ದರೂ ‘ಅಲ್ಲಿ ನಮ್ಮ ಜೆಸಿಬಿ ಹೋಗಲಾಗದು’ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ. ಇಂತಹ ಗಲೀಜಿನಿಂದ ಡೆಂಗಿ ಹಾಗೂ ಇತರ ಸಾಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ‘ಡೆಂಗಿ ಕೊಳೆಚೆಯಿಂದ ಬರುವುದಿಲ್ಲ. ಅದು ಶುದ್ಧ ನೀರಿನಿಂದ ಬರುತ್ತದೆ’ ಎಂದು ಪುರಸಭೆ ಅಧಿಕಾರಿಗಳು ಜನರಿಗೆ ಉಪದೇಶ ಮಾಡುತ್ತಿದ್ದಾರೆ. 23 ವಾರ್ಡ್‌ಗಳಲ್ಲಿ 8 ವಾರ್ಡ್‌ಗಳಲ್ಲಿ ಮಾತ್ರ ರಾಸಾಯನಿಕ ಸಿಂಪಪಡಿಸಿದ್ದರೂ, ಎಲ್ಲ ವಾರ್ಡ್‌ಗಳಲ್ಲೂ ಸಿಂಪಡಣೆಯಾಗಿದೆ ಎಂದು ಪುರಸಭೆಯವರು ಹೇಳುತ್ತಿದ್ದಾರೆ.

‘ಸಾಂಕ್ರಾಮಿಕ ರೋಗಗಳು ಹರಡದಂತೆ ಯಾವುದೇ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಮುಖ್ಯಾಧಿಕಾರಿಗಳಿಗೆ ಹೇಳಿದರೆ ಅವರು ಹಾರಿಕೆ ಉತ್ತರ ನೀಡುತ್ತಾರೆ. ಇದರಿಂದ ಪಟ್ಟಣ ಹಾಳೂರಾಗಿ ಪರಿವರ್ತನೆಗೊಳ್ಳುತ್ತಿದೆ’ ಎಂದು ಪುರಸಭೆ ಸದಸ್ಯ ರವಿ ಕಲಾಲ ಆರೋಪಿಸುತ್ತಾರೆ.

‘ಜೆಸಿಬಿ ಮತ್ತು ಹಿಟಾಚಿ ವಾಹನಗಳನ್ನು ಯಾವ ಪುರುಷಾರ್ಥಕ್ಕಾಗಿ ಖರೀದಿಸಿದ್ದಾರೆ. ಇವುಗಳನ್ನು ಪುರಸಭೆ ಎದುರು ಪ್ರದರ್ಶನಕ್ಕಾಗಿ ಇಡಲು ತರುವುದಾದರೆ ಪಟ್ಟಣದ ಅಭಿವೃದ್ಧಿ ಗಗನ ಕುಸುಮವಾಗುವುದರಲ್ಲಿ ಸಂದೇಹವೇ ಇಲ್ಲ’ ಎಂದು ಪುರಸಭೆ ಸದಸ್ಯ ಎಂ.ಎಸ್.ಹಡಪದ ದೂರಿದರು.

ಈ ಬಗ್ಗೆ ಪುರಸಭೆ ಆರೋಗ್ಯಾಧಿಕಾರಿ ಆರ್.ಎಚ್.ಮಂತಾ ಪ್ರತಿಕ್ರಿಯಿಸಿ, ‘ಸ್ವಚ್ಛತೆ ಕಾರ್ಯಕ್ಕೆ ಸಿಬ್ಬಂದಿ ಇಲ್ಲ. ಹೊಸ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎನ್ನುತ್ತಾರೆ. ‘ಪಟ್ಟಣದಲ್ಲಿ ಅನೇಕ ಮೂಲಸೌಲಭ್ಯಗಳು ಜನರಿಗೆ ದೊರಕುತ್ತಿಲ್ಲ. ಆದರೆ ಇತ್ತ ಜನನಾಯಕರಾಗಲು ಹವಣಿಸುವ ಮುಖಂಡರ ಚಿತ್ತ ಚುಣಾವಣೆಯತ್ತ ಇರುವುದರಿಂದ ಜನರ ಅಳಲನ್ನು ಕೇಳುವವರಾರು’ ಎಂದು ನಾಗರೀಕರು ಪ್ರಶ್ನಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT