ನಗರಸಭೆ ಮೇಲ್ದರ್ಜೆಗೆ; ಸಚಿವ ಯು.ಟಿ.ಖಾದರ್

7
ಕಾನೂನು ತಜ್ಞರ ಅಭಿಪ್ರಾಯ ಬಂದ ನಂತರ ಸೂಕ್ತ ತೀರ್ಮಾನ

ನಗರಸಭೆ ಮೇಲ್ದರ್ಜೆಗೆ; ಸಚಿವ ಯು.ಟಿ.ಖಾದರ್

Published:
Updated:
Prajavani

ಹಾಸನ: ‘ಹಾಸನ ನಗರಸಭೆಯನ್ನು ನಗರಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸುವ ಸಂಬಂಧ ಕಾನೂನು ಅಭಿಪ್ರಾಯ ಕೇಳಲಾಗಿದೆ’ ಎಂದು ಪೌರಾಡಳಿತ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು, ‘ನಗರಪಾಲಿಕೆಯಾಗಿ ಮಾಡುವ ಸಂಬಂಧ ಪ್ರಸ್ತಾವ ಬಂದಿದೆ. ಆದರೆ, ಸರ್ಕಾರವೇ ತೀರ್ಮಾನ ಮಾಡಲು ಆಗುವುದಿಲ್ಲ. ಅದಕ್ಕಾಗಿ ರಾಜ್ಯದ ಅಡ್ವೋಕೇಟ್ ಜನರಲ್ ಮೂಲಕ ಕಾನೂನು ಅಭಿಪ್ರಾಯ ಕೇಳಿದ್ದೇವೆ’ ಹೇಳಿದರು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಈ ಕುರಿತು ದೊಡ್ಡ ಆಸಕ್ತಿ ಇದೆ. ಆದರೆ, 2011ರ ಜನಗಣತಿ ಪ್ರಕಾರ, ನಗರಪಾಲಿಕೆ ಆಗಲು ಕನಿಷ್ಠ 3 ಲಕ್ಷ ಜನ ಸಂಖ್ಯೆ ಇರಲೇಬೇಕು. ಹೀಗಾಗಿ, ಕಾನೂನು ತಜ್ಞರ ಅಭಿಪ್ರಾಯಕ್ಕೆ ಕಳಿಸಲಾಗಿದೆ ಎಂದು ಹೇಳಿದರು.

ಹಾಸನ ಬೆಳೆಯುತ್ತಿರುವ ನಗರ. ಭವಿಷ್ಯದಲ್ಲಿ ನಗರಪಾಲಿಕೆ ಆಗುವ ಎಲ್ಲಾ ಅವಕಾಶಗಳಿವೆ. ಹೀಗಾಗಿಯೇ ಹಾಲಿ ಇರುವ 35 ವಾರ್ಡ್ ಜತೆಗೆ ನಗರದ ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳನ್ನು ಸೇರಿಸುವ ಬಗ್ಗೆ ಜಿಜ್ಞಾಸೆಯಿದೆ. ನಗರಪಾಲಿಕೆ ಮಾಡಲು ಹತ್ತಿರದ ಗ್ರಾಮ ಪಂಚಾಯಿತಿಗಳನ್ನು ಸೇರಿಸಿಕೊಳ್ಳಬೇಕೋ? ಬೇಡವೋ? ಎಂಬ ಬಗ್ಗೆ ಕಾನೂನು ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಆ ಕುರಿತ ಅಭಿಪ್ರಾಯ ಶೀಘ್ರವೇ ಸರಕಾರದ ಕೈ ಸೇರಲಿದೆ. ಬಂದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯ 5 ಸ್ಥಳೀಯ ಸಂಸ್ಥೆ ಸೇರಿದಂತೆ ರಾಜ್ಯದ ಸುಮಾರು 100ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಬಗ್ಗೆ ಕಾನೂನು ಸಂಘರ್ಷ ನಡೆಯುತ್ತಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಅಲ್ಲಿ ಸೂಕ್ತ ನಿರ್ಧಾರ ಹೊರ ಬೀಳುವವರೆಗೂ ಮುಂದಕ್ಕೆ ಹೋಗಲಿದೆ ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಜಿಲ್ಲಾ ಕಾಂಗ್ರೆಸ್ ನಲ್ಲಿ ಬಿಕ್ಕಟ್ಟು ಉಲ್ಬಣಿಸಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜ್ಯ ನಾಯಕರು, ಸಮನ್ವಯ ಸಮಿತಿ ಅಧ್ಯಕ್ಷರು ಇದನ್ನು ಬಗೆಹರಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ರಾಜಕೀಯವಾಗಿ ಉಭಯ ಪಕ್ಷಗಳ ತಳಮಟ್ಟದ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಸಮಸ್ಯೆ ಇದ್ದೇ ಇರುತ್ತದೆ. ಆದರೆ ರಾಜ್ಯದಲ್ಲಿ ಸೋದರತೆ ಮತ್ತು ಶಾಂತಿ ಕಾಪಾಡಲು ಸಮ್ಮಿಶ್ರ ಸರ್ಕಾರ ಅತ್ಯಗತ್ಯ. ಅದಕ್ಕಾಗಿ ಕೆಲ ಸ್ಥಾನ ತ್ಯಾಗ ಮಾಡಬೇಕಾಗುತ್ತದೆ’ ಎಂದು ತಿಳಿ ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ನಾಯಕರಾದ ಎ.ಮಂಜು, ಬಿ. ಶಿವರಾಂ ಅವರೊಂದಿಗೆ ಚರ್ಚಿಸಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಇತರೆ ನಾಯಕರು ಬಗೆಹರಿಸಲಿದ್ದಾರೆ ಎಂದರು.

* ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಆದರೆ ದೋಸ್ತಿ ಪಕ್ಷಗಳು ಮೇಲುಗೈ ಸಾಧಿಸಲಿವೆ ಎಂಬ ಅಸೂಯೆಯಿಂದ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಷಡ್ಯಂತ್ರ ಮಾಡುತ್ತಿದ್ದಾರೆ
–ಯು.ಟಿ.ಖಾದರ್, ಸಚಿವ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !