ಶುಕ್ರವಾರ, ಸೆಪ್ಟೆಂಬರ್ 20, 2019
29 °C

ನಾಲ್ವರನ್ನು ಬಲಿ ಪಡೆದ ಕೆಎಸ್ಆರ್‌ಟಿಸಿ ಬಸ್‌; ಆಸ್ಪತ್ರೆಗೆ ಹೊರಟವರು ಮಸಣ ಸೇರಿದರು

Published:
Updated:

ಹಾಸನ: ಅವರೆಲ್ಲರೂ ಹುಷಾರಿಲ್ಲದ ಮೂರು ತಿಂಗಳ ಕಂದಮ್ಮನಿಗೆ ಆಸ್ಪತ್ರೆಗೆ ತೋರಿಸಲು ಆಟೊದಲ್ಲಿ ಹೊರಟಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಜವರಾಯನಂತೆ ಬಂದ ಸಾರಿಗೆ ಬಸ್‌ ನಾಲ್ವರನ್ನು ಬಲಿ ತೆಗೆದುಕೊಂಡಿತು.

ಮೂರು ತಿಂಗಳ ಕಂದಮ್ಮ ಹಾಗೂ ಏಳು ವರ್ಷದ ಬಾಲಕ ಸೇರಿ ನಾಲ್ವರು ಘಟನೆಯಲ್ಲಿ ಮೃತಪಟ್ಟರು. ಒಂದೇ ಕುಟುಂಬದ ನಾಲ್ವರ ಮೃತದೇಹ ಪಡೆದುಕೊಂಡು ಹೋಗಲು ಬಂದಿದ್ದ ಸಂಬಂಧಿಕರ ಆಕ್ರಂದನ ಆಸ್ಪತ್ರೆಯ ಆವರಣದಲ್ಲಿ ಮುಗಿಲು ಮುಟ್ಟಿತ್ತು.

ಬೇಲೂರು ತಾಲ್ಲೂಕಿನ ರಂಗನಕೊಪ್ಪಲು ಗ್ರಾಮದ ರವಿಕುಮಾರ್ ಅವರು ಆರು ಮಂದಿ ಕುಟುಂಬ ಸದಸ್ಯರೊಂದಿಗೆ ಸ್ವ ಗ್ರಾಮದಿಂದ ಮೂರು ತಿಂಗಳ ತನ್ನ ತಂಗಿ ಮಗು ಹಾಗೂ ತನ್ನ ಮಗನನ್ನು ವೈದ್ಯರಿಗೆ ತೋರಿಸಲು ಹಗರೆಗೆ ಬರುತ್ತಿದ್ದರು.

ಈ ವೇಳೆ ಹಾಸನದ ಕಡೆಯಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಹಿಂಬದಿಯಿಂದ ಆಟೊಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೊದಲ್ಲಿದ್ದ ಆರು ಮಂದಿ ಪೈಕಿ ಮಗು ಸೇರಿ ಮೂವರು ಸ್ಥಳದಲ್ಲಿಯೇ ಅಸುನೀಗಿದರೆ, ಎಂಟು ವರ್ಷದ ಬಾಲಕ ತಡರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ರಂಗನಕೊಪ್ಪಲು ಗ್ರಾಮದ ಲಕ್ಷ್ಮಮ್ಮ (51), ಚಂದ್ರಕಲಾ (31), ದಯಾಶಂಕರ್ (8) ಹಾಗೂ ಮೂರು ತಿಂಗಳ ಮಗು ಸೇರಿ ನಾಲ್ವರು ಮೃತಪಟ್ಟರು. ಚಾಲಕ ರವಿಕುಮಾರ್ ಸೇರಿ ಮತ್ತಿಬ್ಬರ ಸ್ಥಿತಿಯೂ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಶವಾಗಾರದ ಎದುರು ಸಂಬಂಧಿಕರು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಆಸ್ಪತ್ರೆಗೆ ಬಂದಿದ್ದ ಸಾರ್ವಜನಿಕರು ಎರಡು ಕಂದಮ್ಮಗಳನ್ನು ಕಂಡು ಮಮ್ಮಲ ಮರುಗಿದರು.

‘ಚಾಲಕನ ಅತಿ ವೇಗವೇ ದುರಂತಕ್ಕೆ ಕಾರಣವಾಗಿದೆ. ಈಗಲಾದರೂ ಎಚ್ಚೇತ್ತುಕೊಂಡು ಸಾರಿಗೆ ಬಸ್ ಚಾಲಕರು, ಸ್ವಲ್ಪ ನಿಧಾನವಾಗಿ ಚಾಲನೆ ಮಾಡಿದರೆ ಅಮಾಯಕ ಜೀವಗಳು ಉಳಿದುಕೊಳ್ಳುತ್ತವೆ. ಬಸ್ ಚಾಲಕನಿಂದಲೇ ತಪ್ಪು ಆಗಿರುವುದರಿಂದ ಮೃತರ ಕುಟುಂಬಕ್ಕೆ ಸರ್ಕಾರ ₹ 25 ಲಕ್ಷ ಪರಿಹಾರ ನೀಡಬೇಕು’ ಎಂದು ಮೃತ ಸಂಬಂಧಿ ಗಂಗಾಧರ್ ಒತ್ತಾಯಿಸಿದರು.

 

Post Comments (+)