ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್.ಡಿ. ರೇವಣ್ಣ ಆಪ್ತ ಗುತ್ತಿಗೆದಾರನ ಮೇಲೆ ದಾಳಿಗೆ ಯತ್ನ

Published 12 ಅಕ್ಟೋಬರ್ 2023, 6:24 IST
Last Updated 12 ಅಕ್ಟೋಬರ್ 2023, 6:24 IST
ಅಕ್ಷರ ಗಾತ್ರ

ಹಾಸನ: ಶಾಸಕ ಎಚ್.ಡಿ. ರೇವಣ್ಣ ಅವರ ಆಪ್ತ, ಪ್ರಥಮ ದರ್ಜೆ ಗುತ್ತಿಗೆದಾರ ಅಶ್ವತ್ಥ ಅವರ ಮೇಲೆ ಹೊಳೆನರಸೀಪುರ ತಾಲ್ಲೂಕಿನ ಸೂರನಹಳ್ಳಿಯಲ್ಲಿ ಮಂಗಳವಾರ ರಾತ್ರಿ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗಾಗಿ ಶೋಧ ತೀವ್ರಗೊಳಿಸಿದ್ದಾರೆ.

ಗುತ್ತಿಗೆದಾರ ಅಶ್ವತ್ಥ ಅವರು ಮಂಗಳವಾರ ಸಂಜೆ ಹಾಸನದಿಂದ ಎಚ್.ಡಿ.ರೇವಣ್ಣ ಅವರ ಜೊತೆ ಹೊಳೆನರಸೀಪುರದ ಮನೆಗೆ ತೆರಳಿದ್ದರು. ಕೆಲಕಾಲ ರೇವಣ್ಣ ಅವರ ನಿವಾಸದಲ್ಲಿ ಚರ್ಚಿಸಿದ ಅವರು, ರಾತ್ರಿ 8.30 ಕ್ಕೆ ಚನ್ನರಾಯಪಟ್ಟಣದ ತಮ್ಮ ನಿವಾಸಕ್ಕೆ ಫಾರ್ಚೂನರ್ ಕಾರಿನಲ್ಲಿ ಹೊರಟಿದ್ದರು.

ಅಶ್ವತ್ಥ ಅವರು ಮನೆಗೆ ಹೊರಟಿರುವ ಬಗ್ಗೆ ಮಾಹಿತಿ ಪಡೆದು, ಬಿಳಿ ಬಣ್ಣದ ಕಾರಿನಲ್ಲಿ ಹಿಂಬಾಲಿಸಿದ ಮೂವರು ಅಪರಿಚಿತರು, ಸೂರನಹಳ್ಳಿ ಹಂಪ್ಸ್ ಬಳಿ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಕಾರಿನ ಗ್ಲಾಸ್ ಮೇಲೆ ಕಲ್ಲು ಎತ್ತಿ ಹಾಕಿ, ಮಾರಕಾಸ್ತ್ರಗಳಿಂದ ಕೊಲೆ ಮಾಡಲು ಮುಂದಾಗಿದ್ದರು.

ಕೂಡಲೇ ಕಾರನ್ನು ಹಿಂದೆ ತೆಗೆದುಕೊಂಡು, ವೇಗದಲ್ಲಿ ಮುಂದೆ ಓಡಿಸಿದ್ದರಿಂದ ಅಶ್ವತ್ಥ ಅವರು ಪಾರಾಗಿದ್ದಾರೆ. ದುಷ್ಕರ್ಮಿಗಳು ಮೂಡಲಹಿಪ್ಪೆ ಗ್ರಾಮದವರೆಗೂ ಅಶ್ವತ್ಥ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಗುತ್ತಿಗೆದಾರ ಅಶ್ವತ್ಥ ದೂರು ನೀಡಿದ್ದಾರೆ.

ರಾತ್ರಿಯೇ ಚನ್ನರಾಯಪಟ್ಟಣಕ್ಕೆ ಬಂದ ಎಚ್‌.ಡಿ. ರೇವಣ್ಣ, ಎಸ್ಪಿ ಮೊಹಮ್ಮದ್ ಸುಜೀತಾ ಅವರ ಜೊತೆಗೆ ಘಟನೆಯ ಕುರಿತು ಚರ್ಚೆ ನಡೆಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಮೊಹಮ್ಮದ್ ಸುಜೀತಾ, ‘ಮೂವರು ಬಿಳಿ ಬಣ್ಣದ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದು, ಅಶ್ವತ್ಥ ಅವರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ದಾಳಿ ನಡೆಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ರೇವಣ್ಣ ಆಪ್ತರಾಗಿದ್ದ ಗ್ರಾನೈಟ್‌ ಉದ್ಯಮಿ ಕೃಷ್ಣೇಗೌಡರ ಕೊಲೆ ಹಾಸನ ನಗರದಲ್ಲಿ ನಡೆದಿತ್ತು. ಈ ಪ್ರಕರಣದಲ್ಲಿ 18 ಜನರನ್ನು ಬಂಧಿಸಿದ್ದು, ಪ್ರಮುಖ ಆರೋಪಿಯ ಬಂಧನವಾಗಿಲ್ಲ. ಈ ಮಧ್ಯೆಯೇ ಮತ್ತೊಂದು ಘಟನೆ ನಡೆದಿದೆ.

ತನಿಖೆಗೆ ಆಗ್ರಹ: ಮಂಗಳವಾರ ರಾತ್ರಿ ಗುತ್ತಿಗೆದಾರ ಅಶ್ವತ್ಥ್‌ ಅವರ ಕಾರನ್ನು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿ, ವಾಹನಕ್ಕೆ ಹಾನಿ ಮಾಡಿದ ಪ್ರಕರಣದ ಬಗ್ಗೆ ಪೊಲೀಸರು ಅಮರ್ಪಕ ತನಿಖೆ ನಡೆಸಬೇಕು ಎಂದು ಶಾಸಕ ಎಚ್‌.ಡಿ. ರೇವಣ್ಣ ಒತ್ತಾಯಿಸಿದರು.

ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ವತ್ಥ್‌ ಅವರನ್ನು ದರೋಡೆ ಮಾಡುವ ಅಥವಾ ಕೊಲೆ ಮಾಡುವ ಪ್ರಯತ್ನವೋ ಗೊತ್ತಿಲ್ಲ ಎಂದರು.

ಮಂಗಳವಾರ ರಾತ್ರಿ ನಾನು, ಅಶ್ವತ್ಥ್‌ ಅವರ ಕಾರಿನಲ್ಲೇ ಹೊಳೆನರಸೀಪುರದ ಮನೆಗೆ ಬಂದೆ. ನನ್ನನ್ನು ಬಿಟ್ಟು ಅವರು ಚನ್ನರಾಯಪಟ್ಟಣಕ್ಕೆ ಹೊರಟರು. ಸೂರನಹಳ್ಳಿ ಸಮೀಪ ಕಾರಿಗೆ ಮತ್ತೊಂದು ಕಾರನ್ನು ಅಡ್ಡಹಾಕಿದ್ದಾರೆ. ಅಪಾಯವನ್ನು ಗ್ರಹಿಸಿದ ಅವರು ತಕ್ಷಣ ಕಾರಣನ್ನು ಹಿಂದಕ್ಕೆ ತೆಗೆದುಕೊಂಡು ಸ್ವಲ್ಪ ದೂರ ಹೋಗಿ ಮತ್ತೆ ವೇಗವಾಗಿ ಮುಂದಕ್ಕೆ ಹೋಗಿದ್ದಾರೆ. ಆಗ ದುಷ್ಕರ್ಮಿಗಳು ಕಾರಿನ ಗಾಜು ಒಡೆದು ಹಾಕಿದ್ದಾರೆ. ನಮ್ಮ ಮನೆ ಮುಂದೆ ಒಂದು ಕಾರು ಸಂಜೆಯಿಂದ ನಿಂತಿದ್ದು ಅದರಲ್ಲಿದ್ದವರು ಸತತವಾಗಿ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ಕೆಲವರು ನೋಡಿದ್ದಾರೆ. ಪೊಲೀಸರ ತನಿಖೆ ನಂತರ ವಿವರ ತಿಳಿಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT