ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆಯ ಕುರಿತು ತಿಳಿವಳಿಕೆ ನೀಡಿ

ಚುನಾವಣೆಗೆ ಸಜ್ಜಾಗುತ್ತಿರುವ ಜಿಲ್ಲಾಡಳಿತ: ವಿಡಿಯೊ ಸಂವಾದ
Last Updated 16 ಫೆಬ್ರುವರಿ 2023, 4:16 IST
ಅಕ್ಷರ ಗಾತ್ರ

ಹಾಸನ: ಚುನಾವಣಾ ಆಯೋಗ ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ನಿಖರವಾಗಿ ಪಾಲನೆ ಮಾಡಬೇಕು. ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯನ್ನು ಯಶಸ್ವಿಯಾಗಿ ನಡೆಸುವಂತೆ ರಾಜ್ಯ ಚುನಾವಣಾ ಆಯೋಗದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳೊಂದಿಗೆ ಚುನಾವಣೆ ಸಿದ್ಧತೆ ಕುರಿತು ವಿಡಿಯೊ ಸಂವಾದದ ಮೂಲಕ ಸಭೆ ನಡೆಸಿದ ಅವರು, ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ ಕ್ಷಣದಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಎಲ್ಲ ಅಧಿಕಾರಿ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಬ್ಯಾನರ್, ಬಂಟಿಂಗ್ಸ್, ಪ್ರಚಾರ ಸಾಮಗ್ರಿ, ಹೆದ್ದಾರಿ ಫಲಕಗಳನ್ನು ತೆರವುಗೊಳಿಸಬೇಕು ಎಂದರು.

ರಾಜಕೀಯ ಪಕ್ಷಗಳಿಗೆ ತಕ್ಷಣವೇ ಮಾದರಿ ನೀತಿ ಸಂಹಿತೆ ಜಾರಿ ಬಗ್ಗೆ ತಿಳಿವಳಿಕೆ ನೀಡಬೇಕು. ಸಾರ್ವಜನಿಕ ಸಭೆ, ಸಮಾರಂಭಗಳ ಮೇಲೆ ನಿಗಾ ವಹಿಸಿ, ಸಂಪೂರ್ಣ ಚಿತ್ರೀಕರಣ ಮಾಡಬೇಕು. ನಿಯಮಾನುಸಾರ ವೆಚ್ಚದ ಬಗ್ಗೆ ಲೆಕ್ಕ ತೆಗೆದುಕೊಳ್ಳಬೇಕು. ನೀತಿ ಸಂಹಿತೆ ಉಲ್ಲಂಘನೆಗಳಾದಲ್ಲಿ ಪ್ರಕರಣ ದಾಖಲಿಸಿ, ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದರು.

ಸಭೆ ಸಮಾರಂಭಗಳನ್ನು ಆಯೋಜಿಸುವಾಗ ಚುನಾವಣಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಯಿಂದ ಅನುಮತಿ ಪಡೆದಿರಬೇಕು ಎಂದ ಅವರು, ಚುನಾವಣಾಧಿಕಾರಿಗಳು ಹಾಗೂ ಸೆಕ್ಟರ್ ಮ್ಯಾಜಿಸ್ಟ್ರೇಟ್‌ಗಳ ಹಾಗೂ ವಿವಿಧ ಅಧಿಕಾರಿಗಳ ಕರ್ತವ್ಯಗಳ ಬಗ್ಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ಮಾತನಾಡಿ, ಎಲ್ಲ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಈಗಿನಿಂದಲೇ ಶೇ 100 ರಷ್ಟು ಮತಗಟ್ಟೆಗಳನ್ನು ಭೇಟಿ ಮಾಡಿ ಪರಿಶೀಲನೆ ಮಾಡಬೇಕು. ಕುಂದು ಕೊರತೆಗಳ ಬಗ್ಗೆ ತಹಶಿಲ್ದಾರರ ಗಮನಕ್ಕೆ ತರಬೇಕು. ಕ್ಷೇತ್ರದ ಚುನಾವಣೆಗೆ ನಿಯೋಜಿಸಿದ ಅಧಿಕಾರಿಗಳ ಸಭೆ ನಡೆಸಿ, ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಿಗೆ ತಂಡಗಳೊಂದಿಗೆ ಭೇಟಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಉಪ ವಿಭಾಗಾಧಿಕಾರಿ ಜಿ.ಕೆ.ಕೃಪಾಲಿನಿ, ಅನಮೋಲ್ ಜೈನ್, ಎಲ್ಲ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು, ತಹಶೀಲ್ದಾರ್‌ಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT