ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಬಸ್ ನಿಯೋಜನೆ: ಪರದಾಡಿದ ಪಿಯು ವಿದ್ಯಾರ್ಥಿಗಳು

Published 1 ಮಾರ್ಚ್ 2024, 15:08 IST
Last Updated 1 ಮಾರ್ಚ್ 2024, 15:08 IST
ಅಕ್ಷರ ಗಾತ್ರ

ಅರಕಲಗೂಡು: ಹಾಸನದಲ್ಲಿ ಶುಕ್ರವಾರ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಪಕ್ಷದ ಕಾರ್ಯಕರ್ತರನ್ನು ಕರೆದೊಯ್ಯಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಾಹನಗಳು ತೆರಳಿದ ಕಾರಣ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳು ಪಡಿಪಾಟಲು ಪಡುವಂತಾಯಿತು.

ಪಟ್ಟಣದ ಮೂರು ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ತಾಲ್ಲೂಕಿನ ಗ್ರಾಮೀಣ ಭಾಗಗಳಿಂದ ಬರಲು ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸಿದರು. ಪೋಷಕರು ಸ್ವಂತ ವಾಹನ, ಆಟೊ, ಖಾಸಗಿ ವಾಹನಗಳಲ್ಲಿ ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಬಿಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶುಕ್ರವಾರ ವಾರದ ಸಂತೆಯ ದಿನವಾಗಿದ್ದು, ಸಂತೆಯಲ್ಲಿ ಸರಕುಗಳನ್ನು ಮಾರಾಟ ಮಾಡಲು ಬರುವ ಗ್ರಾಮೀಣ ಭಾಗದ ರೈತರೂ ತೊಂದರೆ ಅನುಭವಿಸುವಂತಾಯಿತು. ಪಟ್ಟಣದ ಡಿಪೊದಿಂದ 35 ಹಾಗೂ ರಾಮನಾಥಪುರ ಡಿಪೊದಿಂದ 35 ವಾಹನಗಳನ್ನು ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿತ್ತು.

ರೈತ ಸಂಘ ಆಕ್ರೋಶ: ತಾಲ್ಲೂಕು ರೈತ ಸಂಘದ ಮುಖಂಡರು ಪಟ್ಟಣದ ಬಸ್ ಡಿಪೊಗೆ ತೆರಳಿ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಕಾರ್ಯಾಧ್ಯಕ್ಷ ಭುವನೇಶ್, ದ್ವಿತೀಯ ಪಿಯು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ, ಇಲ್ಲಿ ಉತ್ತಮ ಅಂಕಗಳನ್ನು ಪಡೆದು ಮುಂದಿನ ಉನ್ನತ ಶಿಕ್ಷಣಕ್ಕೆ ಉತ್ತಮ ಅವಕಾಶಗಳನ್ನು ಗಳಿಸಿಕೊಳ್ಳಲು ವರ್ಷದ ಆರಂಭದಿಂದಲೆ ಕಷ್ಟಪಟ್ಟು ಓದಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ಅವರ ಭವಿಷ್ಯವೇನಾಗುತ್ತದೆ. ಪರೀಕ್ಷೆಯ ಸಮಯದಲ್ಲಿ ತೊಂದರೆಯಾಗದಂತೆ ಹೆಚ್ಚುವರಿ ಬಸ್ ಓಡಿಸಬೇಕು, ಆದರೆ ಇರುವ ಬಸ್‌ಗಳನ್ನು ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ನೀಡಿ ವಿದ್ಯಾರ್ಥಿಗಳು , ಜನಸಾಮಾನ್ಯರು ತೊಂದರೆಪಡುವಂತೆ ಮಾಡಿರುವ ಕ್ರಮ ಖಂಡನೀಯ ಎಂದರು.

ಮುಂದಿನ ದಿನಗಳಲ್ಲಿ ಇದೇ ರೀತಿ ನಡೆದರೆ ಡಿಪೊ ಬಾಗಿಲು ಮುಚ್ಚಿಸಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ತಾಲ್ಲೂಕು ರೈತ ಸಂಘದ ಅಧ್ಯಕ್ಷ ದಿನೇಶ್, ಮುಖಂಡರಾದ ಹೊಂಬೇಗೌಡ, ಮಂಜೇಗೌಡ ಇದ್ದರು.

ಪರೀಕ್ಷೆ ಮುಗಿದ ಬಳಿಕ ಗ್ರಾಮೀಣ ಭಾಗಗಳಿಗೆ ತೆರಳಲು ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಜಾತ್ರೆಯೆ ನೆರೆದಿತ್ತು. ಯಾವುದೇ ಬಸ್ ಬಂದರೂ ನೂಕುನುಗ್ಗಲಿನ ಪರಿಸ್ಥಿತಿ ಏರ್ಪಟ್ಟಿತ್ತು. ಘಟಕ ವ್ಯವಸ್ಥಾಪಕ ಹನುಮಂತಪ್ಪ ನಿಲ್ದಾಣದಲ್ಲಿ ನಿಂತು ವಿದ್ಯಾರ್ಥಿಗಳು ತೆರಳಲು ಬಸ್ ವ್ಯವಸ್ಥೆ ಮಾಡಿದರು. ಬೆಳಗಿನ ವೇಳೆಯೂ ಇರುವ ವಾಹನಗಳಲ್ಲೆ ಪ್ರಯಾಣಕ್ಕೆ ಅನುವು ಮಾಡಿದ್ದು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಿರುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT