ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು | ನಿರಂತರ ಮಳೆಗೆ ಬೆಳೆಗಳು ಜಲಾವೃತ: ಸಂಕಷ್ಟದಲ್ಲಿ ರೈತರು

Published 28 ಮೇ 2024, 7:22 IST
Last Updated 28 ಮೇ 2024, 7:22 IST
ಅಕ್ಷರ ಗಾತ್ರ

ಹಳೇಬೀಡು: ಎರಡು ದಿನದ ಹಿಂದೆ ಸುರಿದ ಮಳೆಗೆ ಮಾದಿಹಳ್ಳಿ, ಹಳೇಬೀಡು ಹೋಬಳಿಯ ಹಲವೆಡೆ ಬೆಳೆಗಳು ಜಲಾವೃತಗೊಂಡಿವೆ. ಕಳೆದ ವರ್ಷ ಬರಗಾಲದಿಂದ ಪರಿತಪಿಸಿದ ರೈತರಿಗೆ ಮಳೆ ಸಂತಸ ನೀಡಿದ್ದರೂ, ತೆಗ್ಗು ಪ್ರದೇಶದ ಜಮೀನಿನಲ್ಲಿ ಬೆಳೆಗಳು ಜಲಾವೃತಗೊಂಡು ನಷ್ಟ ಅನುಭವಿಸುವಂತಾಗಿದೆ.

‘ಪಂಪ್‌ಸೆಟ್‌ನಿಂದ ನೀರುಣಿಸಿ ಬೆಳೆದಿದ್ದ ತರಕಾರಿ ಬೆಳೆಗಳಿಗೆ ತೇವಾಂಶ ಹೆಚ್ಚಾಗಿದೆ. ಮೋಡದ ವಾತಾವರಣದಿಂದ ಜಮೀನಿನಲ್ಲಿ ನಿಂತ ನೀರು ಒಣಗುತ್ತಿಲ್ಲ. ನೀರಿನಲ್ಲಿ ಮುಳುಗಿರುವ ಬೆಳೆಗಳು ಕೊಳೆಯುವ ಸ್ಥಿತಿಗೆ ತಲುಪಿದೆ. ಮುಳುಗಿದ ಬೆಳೆ ತೆಗೆದು, ಬೇರೆ ಬೆಳೆ ಮಾಡುವುದಕ್ಕೂ ಅವಕಾಶ ಇಲ್ಲದಂತಾಗಿದೆ’ ಎಂದು ರೈತ ಯತೀಶ್ ಅಳಲು ತೋಡಿಕೊಂಡರು.

‘ಮೆಣಸು, ಟೊಮೆಟೊ, ಬದನೆ, ಬೀನ್ಸ್, ಸೌತೆ ಬೆಳೆಗಳಿಗೆ ನೀರುಣಿಸಲು ರೈತರು ಪಡಬಾರದ ಕಷ್ಟ ಅನುಭವಿಸುತ್ತಿದ್ದರು. ಅಧಿಕ ಉಷ್ಣಾಂಶದಿಂದ ಅಂತರ್ಜಲ ಕಡಿಮೆಯಾಗಿದ್ದಲ್ಲದೇ, ವಿದ್ಯುತ್ ಸಮಸ್ಯೆಯಿಂದ ಬೆಳೆ ಸೊರಗಿದ್ದವು. 15 ದಿನದ ಹಿಂದೆ ಮಳೆ ಆರಂಭವಾದಾಗ ಬೆಳೆ ಚೇತರಿಸಿಕೊಳ್ಳಲು ಆರಂಭಿಸಿದವು. ಒಂದು ವಾರದಿಂದ ಗಾಳಿಯೊಂದಿಗೆ ರಭಸದ ಮಳೆ ಬಿದ್ದಿದ್ದರಿಂದ ಗದ್ದೆ ಹಾಗೂ ತೆಗ್ಗು ಪ್ರದೇಶದ ಹೊಲದಲ್ಲಿ ನೀರು ನಿಲ್ಲುತ್ತಿದೆ. ಹಳ್ಳದ ಪಕ್ಕದ ಜಮೀನುಗಳಿಗೆ ನೀರು ನುಗ್ಗುತ್ತಿದೆ’ ಎಂದು ರೈತರು ಹೇಳುತ್ತಿದ್ದಾರೆ.

ಜಮೀನಿನಲ್ಲಿ ನಿಂತ ನೀರನ್ನು ಹೊರ ಹಾಕುವ ಕೆಲಸ ಎಲ್ಲ ರೈತರಿಗೂ ಸಾಧ್ಯವಾಗುತ್ತಿಲ್ಲ. ಕೆಲವರು ಜಮೀನಿನ ಸುತ್ತ ಕಾಲುವೆ ತೆಗೆದು ನೀರು ಇಂಗುವ ವ್ಯವಸ್ಥೆ ಮಾಡುತ್ತಿದ್ದಾರೆ. ತೇವಾಂಶ ಅಧಿಕವಾದ ಸ್ಥಳದಲ್ಲಿ ಕಾಲುವೆಯಲ್ಲಿ ನೀರು ಇಂಗಿಸುವುದು ಸುಲಭ ಸಾಧ್ಯವಾಗಿಲ್ಲ. ಎತ್ತರ ಪ್ರದೇಶದ ಜಮೀನುಗಳಲ್ಲಿ ಮಾತ್ರ ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತಿವೆ.

‘ಜೋಳ, ಹತ್ತಿ, ಸೂರ್ಯಕಾಂತಿ, ಅಲಸಂದೆ ಮೊದಲಾದ ಮಳೆ ಆಶ್ರಿತ ಬೆಳೆಗಳಿಗೆ ಅನುಕೂಲವಾಗಿದೆ. ವಾರಕ್ಕೊಮ್ಮೆ ಸಾಧಾರಣ ಮಳೆ ಬಿದ್ದರೂ ಬೆಳೆ ಉಳಿಯುತ್ತದೆ ಎಂಬ ವಿಶ್ವಾಸ ರೈತರಲ್ಲಿ ಮೂಡಿದೆ. ಶುಕ್ರವಾರ ಗಾಳಿಯೊಂದಿಗೆ ಸುರಿದ ರಭಸದ ಮಳೆ ಮುಂದುವರಿದರೆ, ಮಳೆ ಆಶ್ರಿತ ಬೆಳೆಗಳು ಹಾಳಾಗುತ್ತವೆ’ ಎಂದು ರೈತ ಹಳೇಬೀಡಿನ ಜಗದೀಶ ಹೇಳಿದರು.

‘ಸೇವಂತಿಗೆ ಹೂವಿನ ಬೆಳೆಗೂ ಮಳೆ ಅಧಿಕವಾಗಿದೆ. ಮಳೆಯ ಹೊಡೆತಕ್ಕೆ ಸೇವಂತಿಗೆ ಹೂವಿನ ಎಸಳು ಉದುರುತ್ತಿದೆ. ಭೂಮಿಯಲ್ಲಿ ನೀರು ಇಂಗುವಂತಹ ಮಳೆ ಬಿದ್ದರೆ ಬೆಳೆಗೆ ಸಮಸ್ಯೆ ಆಗುವುದಿಲ್ಲ. ಹೂವಿನ ಹೊಲದಲ್ಲಿ ನೀರು ನಿಂತರೆ ಬೆಳೆ ಕೊಳೆಯುತ್ತದೆ. ಮಳೆ ಆಗಾಗ್ಗೆ ಬಿಡುವು ಕೊಟ್ಟು ಬರಬೇಕು. ವಾರಕ್ಕೆ ಒಂದೆರೆಡು ದಿನ ಬಿಸಿಲು ಬಂದು ಮಳೆ ಸುರಿದರೆ ಬೆಳೆಗಳಿಗೆ ತೊಂದರೆ ಆಗುವುದಿಲ್ಲ. ನಿರಂತರ ಮೋಡದ ವಾತಾವರಣ ಇದ್ದರೂ ಬೆಳೆಗಳು ಮುರುಟುತ್ತವೆ’ ಎಂದು ಬಸ್ತಿಹಳ್ಳಿ ದೇವರಾಜು ತಿಳಿಸಿದರು.

ಫಸಲು ಬಿಡುತ್ತಿದ್ದ ಬಾಳೆ, ಗಾಳಿಗೆ ನೆಲಕ್ಕೆ ಬಿದ್ದಿದೆ. ಕೊಯ್ಲು ಮಾಡುವ ಸಮಯಕ್ಕೂ ಮೊದಲು ಬಾಳೆ ಬೆಳೆಗೆ ಹಾನಿಯಾಗಿದ್ದು, ಕೈಯಿಗೆ ಬಂದ ತುತ್ತು ಬಾಯಿಗೆ ಇಲ್ಲ ಎನ್ನುವಂತಾಗಿದೆ. ಹೆಚ್ಚಿನ ತಾಪಮಾನ ಅನುಭವಿಸಿದ ಸಾಕಷ್ಟು ಮಂದಿಗೆ ಭೂಮಿ ತಂಪಾಗಿರುವುದು ಸಂತಸವಾಗಿದೆ. ಕೆರೆ ಕಟ್ಟೆಯ ಗುಂಡಿಗೆ ಮಾತ್ರ ನೀರು ಬಂದಿದೆ. ಕೆರೆಗಳು ಭರ್ತಿಯಾಗುವಂತಹ ಮಳೆ ಬಂದು ಅಂತರ್ಜಲ ವೃದ್ಧಿಸಲಿ ಎಂಬ ಮಾತು ರೈತರಿಂದ ಕೇಳಿ ಬರುತ್ತಿದೆ.

ತೆಗ್ಗು ಪ್ರದೇಶದ ಜಮೀನಿನಲ್ಲಿ ನೀರು ನಿಂತು ಬೆಳೆ ಹಾಳಾಗಿದೆ. ಬೆಳೆ ನಾಶವಾದರೆ ಮತ್ತೊಂದು ಬೆಳೆ ಮಾಡಬಹುದು. ಕೆರೆ ಕಟ್ಟೆ ತುಂಬಿದರೆ ಪ್ರತಿ ಜೀವಿಯೂ ಬದುಕಬಹುದು.
ಸಾಲುಮರದ ಸದಾಶಿವಯ್ಯ ರೈತ
ವಾತಾವರಣದಲ್ಲಿ ಅಸಮತೋಲನ ಕಂಡು ಬರುತ್ತಿದೆ. ಅತಿವೃಷ್ಟಿ ಇಲ್ಲವೆ ಅನಾವೃಷ್ಟಿ ರೈತರನ್ನು ಕಾಡುತ್ತಿದೆ. ಮರ ಬೆಳೆಸಿ ಭೂಮಿಯಲ್ಲಿ ನೀರು ಇಂಗಿಸಬೇಕಾಗಿದೆ.
ರವಿ ಕೆ.ಮಲ್ಲಾಪುರ ಗ್ರಾಮದ ರೈತ
ಬೀನ್ಸ್ ಉಳಿಸಲು ಸಾಹನ
ಬೀನ್ಸ್ ಬೆಲೆ ಈಗ ದುಬಾರಿಯಾಗಿದೆ. ಬೆಳೆ ಉಳಿಸಿಕೊಳ್ಳುವ ರೈತರ ಸಾಹನ ಮುಗಿಯದ ಕಥೆಯಾಗಿದೆ. ಅಧಿಕ ಉಷ್ಣಾಂಶದಿಂದ ಬೀನ್ಸ್ ಬೆಳೆ ಸೊರಗಿತ್ತು. ಬಿಸಿಲಿನ ತಾಪಕ್ಕೆ ಬೆಳೆ ಒಣಗುತ್ತಿತ್ತು. ಈಗ ಮಳೆಯ ಹೊಡೆತಕ್ಕೆ ಬೆಳೆ ಹಾಳಾಗುತ್ತಿದೆ. ‘ಹಳೇಬೀಡು ಭಾಗದಲ್ಲಿ ಗಿಡದ ಬೆಳವಣಿಗೆ ಹಾಗೂ ಹೂವಿನ ಹಂತದಲ್ಲಿದೆ. ಮಳೆ– ಗಾಳಿಗೆ ಹೂವು ಉದುರುತ್ತದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಕೋಲುಗಳನ್ನು ನೆಟ್ಟು ತಂತಿ ಎಳೆದು ಬೀನ್ಸ್ ಗಿಡದ ಬಳ್ಳಿಗಳನ್ನು ಹಬ್ಬಿಸುತ್ತಾರೆ. ಮಳೆ–ಗಾಳಿಗೆ ಬಳ್ಳಿ ತಡೆಯುವುದಿಲ್ಲ’ ಎಂದು ರೈತ ಎಚ್.ಎನ್.ಉಮೇಶ್ ಸಮಸ್ಯೆ ಬಿಚ್ಚಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT