ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಳೆನರಸೀಪುರ | ಡೆಂಗಿ: ರಕ್ತ ಪರೀಕ್ಷೆಗಿಲ್ಲ ಸೌಲಭ್ಯ

ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ
ಎಚ್‌.ವಿ.ಸುರೇಶ್‌ಕುಮಾರ್‌
Published 3 ಜುಲೈ 2024, 6:19 IST
Last Updated 3 ಜುಲೈ 2024, 6:19 IST
ಅಕ್ಷರ ಗಾತ್ರ

ಹೊಳೆನರಸೀಪುರ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಆಸ್ಪತ್ರೆಯ ಎಲ್ಲ ಹಾಸಿಗೆಗಳು ಭರ್ತಿ ಆಗಿವೆ. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಡೆಂಗಿ ಹೆಚ್ಚಾಗುತ್ತಿದ್ದು, ಎಲ್ಲರೂ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಇತ್ತೀಚೆಗೆ ಹಳ್ಳಿಮೈಸೂರಿನ 8 ವರ್ಷದ ಬಾಲಕಿಯೊಬ್ಬಳಿಗೆ ಪ್ಲೇಟ್‌ಲೆಟ್ಸ್ ಕಡಿಮೆಯಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ರಕ್ತದೊತ್ತಡ ಕಡಿಮೆ ಆಗಿತ್ತು. ಅಲ್ಲಿಂದ ಹಾಸನದ ಹಿಮ್ಸ್‌ಗೆ ದಾಖಲಿಸಲಾಗಿತ್ತು. ಅಲ್ಲಿ ಬಾಲಕಿ ಮೃತಪಟ್ಟಿದ್ದಳು.

‘ಡೆಂಗಿ ಪರೀಕ್ಷೆ ಮಾಡಲು ಇಲ್ಲಿನ ಪ್ರಯೋಗಾಲಯದಲ್ಲಿ ಕೆಲವು ದಿನಗಳಿಂದ ಅಗತ್ಯ ಪರಿಕರಗಳು ಇಲ್ಲದಾಗಿವೆ ಎಂದು ಪ್ರಯೋಗಾಲಯದ ಸಿಬ್ಬಂದಿ ಹೇಳುತ್ತಿದ್ದಾರೆ. ಹೊರಗಡೆ ಖಾಸಗಿ ಪ್ರಯೋಗಾಲಯದಲ್ಲಿ ಬಡರೋಗಿಗಳೂ ₹ 600 ರಿಂದ ₹ 800  ಪಾವತಿಸಿ, ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕಿದೆ. ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಂಡು ಪ್ರಯೋಗಾಲಯಕ್ಕೆ ಬೇಕಾದ ಅಗತ್ಯ ಪರಿಕರಗಳನ್ನು ನೀಡಿ ಬಡರೋಗಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು’ ಎಂದು ಜನರು ಆಗ್ರಹಿಸಿದ್ದಾರೆ.

‘ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅನಾರೋಗ್ಯದಿಂದ ನರಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಯಾವುದೇ ಕ್ರಮ ತೆಗದುಕೊಳ್ಳುತ್ತಿಲ್ಲ’ ಎಂದು ಸಾರ್ವಜನಿಕರು ದೂರಿದ್ದಾರೆ.

ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ತೆಗೆದುಕೊಳ್ಳಲಾಗುತ್ತಿದೆ. ಜ್ವರ ಹೆಚ್ಚಾಗುತ್ತಿದ್ದಂತೆಯೇ ಜನರು ನೇರವಾಗಿ ತಾಲ್ಲೂಕು ಆಸ್ಪತ್ರೆಗೆ ಬರುತ್ತಿದ್ದು, ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆ ಆದವರನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ.

ನಿತ್ಯ ಇಲ್ಲಿಗೆ ಬರುವವರ ಪೈಕಿ ಶೇ 10 ರಷ್ಟು ಜನರು ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

‘ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರು ಮೊದಲು ₹10 ನೀಡಿ ರಶೀದಿ ಪಡೆಯಬೇಕು. ಈ ರಶೀದಿ ಪಡೆದುಕೊಳ್ಳಲು ಹೆಚ್ಚು ಸಮಯ ಸರದಿಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಇದ್ದು, ಹೆಚ್ಚು ಕೌಂಟರ್‌ಗಳನ್ನು ತೆರೆಯಬೇಕು’ ಎಂದು ಆಗ್ರಹಿಸಿದ್ದಾರೆ.

ಒಳರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹಾಸಿಗೆಗಳು ಭರ್ತಿ ಆಗಿದ್ದು ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಮಸ್ಯೆ ಆಗಲಿದೆ.
-ಡಾ.ಧನಶೇಖರ್ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ
ರಕ್ತ ಪರೀಕ್ಷೆ ಮಾಡಿಸಿದಾಗ ಬಹುತೇಕ ಎಲ್ಲರಿಗೂ ಪ್ಲೇಟ್‌ಲೆಟ್ಸ್ ಕಡಿಮೆ ಆಗಿರುವುದು ತಿಳಿಯುತ್ತಿದೆ. ಡೆಂಗಿಗೆ ತುತ್ತಾಗಿದ್ದರೆ ಪ್ಲೇಟ್‌ಲೆಟ್ಸ್ ಕಡಿಮೆ ಆಗುತ್ತದೆ.
-ಡಾ. ಸೆಲ್ವಕುಮಾರ್ ಸರ್ಕಾರಿ ಆಸ್ಪತ್ರೆಯ ವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT