ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ಮುನಿಸು ತಣಿಸಲು ದೇವೇಗೌಡರ ರಂಗಪ್ರವೇಶ

Published 29 ನವೆಂಬರ್ 2023, 23:30 IST
Last Updated 29 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಹಾಸನ: ಜೆಡಿಎಸ್‌–ಬಿಜೆಪಿ ಮೈತ್ರಿ ಮಾತುಕತೆಗಳು ನಡೆಯುತ್ತಿರುವಂತೆಯೇ, ಜಿಲ್ಲೆಯ ಬಿಜೆಪಿ ಪಾಳೆಯದಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ವಿರೋಧವನ್ನು ಆರಂಭದಲ್ಲಿಯೇ ನಿವಾರಿಸುವ ಉದ್ದೇಶದಿಂದ ಸ್ವತಃ ಎಚ್‌.ಡಿ. ದೇವೇಗೌಡರೇ ಇದೀಗ ಜಿಲ್ಲೆಯ ಜೆಡಿಎಸ್‌ ಮುಖಂಡರ ಜೊತೆಗೆ ಸಭೆ ನಡೆಸಲಿದ್ದಾರೆ.

ಬಿಜೆಪಿ–ಜೆಡಿಎಸ್ ಮೈತ್ರಿ ಏರ್ಪಟ್ಟಲ್ಲಿ ಹಾಸನ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಅನಿವಾರ್ಯ. ಅದಕ್ಕಾಗಿಯೇ ಬಿಜೆಪಿಯ ಬಹುತೇಕ ಮುಖಂಡರು ಮೈತ್ರಿಯನ್ನು ವಿರೋಧಿಸುತ್ತಿದ್ದಾರೆ. ಆದರೆ, ಇನ್ನೊಂದೆಡೆ ದೇವೇಗೌಡರೇ ಸ್ವರ್ಧೆ ಮಾಡಿದಲ್ಲಿ, ವಿರೋಧವಿಲ್ಲ ಎನ್ನುವ ಮಾತುಗಳನ್ನೂ ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.1 ರಂದು ದೇವೇಗೌಡರು ಕರೆದಿರುವ ಸಭೆ ಮಹತ್ವ ಪಡೆದಿದೆ.

‘ಇನ್ನೊಂದೆಡೆ ದೇವೇಗೌಡರಿಗೆ ಇದು ಕೊನೆಯ ಚುನಾವಣೆ. ಹಾಗಾಗಿ ತವರು ಜಿಲ್ಲೆ ಹಾಸನದಿಂದಲೇ ಸ್ಪರ್ಧೆ ಮಾಡಿದಲ್ಲಿ, ಭಾರಿ ಅಂತರದಿಂದ ಗೆಲುವು ಸಾಧಿಸಬಹುದು. ಅದಕ್ಕಾಗಿ ದೇವೇಗೌಡರೇ ಸ್ಪರ್ಧೆ ಮಾಡಬೇಕು’ ಎನ್ನುವ ಒತ್ತಡ ಪಕ್ಷದ ಪದಾಧಿಕಾರಿಗಳಿಂದ ಕೇಳಿ ಬರುತ್ತಿದೆ.

ಮೈತ್ರಿಯ ಕುರಿತು ಜೆಡಿಎಸ್‌ ಮುಖಂಡರಿಗೆ ಮನವರಿಕೆ ಮಾಡುವುದರ ಜೊತೆಗೆ, ಮೈತ್ರಿಯ ಕುರಿತು ಮುನಿಸಿಕೊಂಡಿರುವ ಜಿಲ್ಲೆಯ ಬಿಜೆಪಿ ನಾಯಕರಿಗೂ ಸ್ಪಷ್ಟ ಸಂದೇಶ ನೀಡುವ ಉದ್ದೇಶವನ್ನು ದೇವೇಗೌಡರು ಹೊಂದಿದ್ದಾರೆ.

ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ ಹೋಬಳಿ ಕಟ್ಟೆ ಬೆಳಗುಲಿ ಶ್ರೀರಾಮದೇವರ ಕಟ್ಟೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಡಿ.1 ಕರೆದಿರುವ ಸಭೆಗೆ ಪಕ್ಷದ ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ , ಅಧ್ಯಕ್ಷರು, ಉಪಾಧ್ಯಕ್ಷರು, ಮಾಜಿ ಸದಸ್ಯರು, ಮಾಜಿ ಶಾಸಕರು ಬರುವಂತೆ ಮನವಿ ಮಾಡಲಾಗಿದೆ. ದೇವೇಗೌಡರೇ ಪ್ರತ್ಯೇಕವಾಗಿ ಎಲ್ಲರಿಗೂ ಪತ್ರ ಬರೆದು ಆಹ್ವಾನ ನೀಡಿದ್ದಾರೆ.

ಪ್ರಜ್ವಲ್‌ ರೇವಣ್ಣ ಸ್ಪರ್ಧೆ ಮಾಡಿದಲ್ಲಿ, ಬಿಜೆಪಿ ಮುಖಂಡರಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆಗಳು ಹೆಚ್ಚಿವೆ. ಅದಕ್ಕಾಗಿಯೇ ಎಚ್‌.ಡಿ. ದೇವೇಗೌಡರನ್ನೇ ಹಾಸನ ಕ್ಷೇತ್ರದಿಂದ ಕಣಕ್ಕೆ ಇಳಿಸುವ ತಂತ್ರಗಾರಿಕೆಯನ್ನು ಜೆಡಿಎಸ್ ಮಾಡುತ್ತಿದೆ. ಈ ಮಧ್ಯೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಡಿಸೆಂಬರ್‌ನಲ್ಲಿ ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದು, ದೇವೇಗೌಡರು ಕರೆದಿರುವ ಸಭೆಯಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿಯ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದರ ಜೊತೆಗೆ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೂ ಪಕ್ಷವನ್ನು ಸಂಘಟಿಸುವ ಉದ್ದೇಶವನ್ನು ದೇವೇಗೌಡರು ಹೊಂದಿದ್ದಾರೆ. ಅದಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದ ಪದಾಧಿಕಾರಿಗಳಿಗೂ ಸಭೆಗೆ ಬರಲು ಆಹ್ವಾನ ನೀಡಲಾಗಿದೆ.

ಹಿಡಿತ ಸಾಧಿಸಲು ಗೌಡರ ಪ್ರಯತ್ನ

ಮೊದಲಿನಿಂದಲೂ ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷ ಬಿಗಿ ಹಿಡಿತ ಹೊಂದಿತ್ತು. ಆದರೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಮತಗಳಿಕೆ ಪ್ರಮಾಣ ಕಡಿಮೆ ಆಗಿದೆ. ಹೀಗಾಗಿ ದೇವೇಗೌಡರೇ ಜಿಲ್ಲೆಯ ಪಕ್ಷದ ಸಂಘಟನೆಗೆ ಚುರುಕು ಮುಟ್ಟಿಸಲು ಮುಂದಾಗಿದ್ದಾರೆ. ಹೊಳೆನರಸೀಪುರ ಕ್ಷೇತ್ರದಲ್ಲಿ ಎಚ್‌.ಡಿ. ರೇವಣ್ಣ ಅಲ್ಪ ಮತಗಳ ಅಂತರದಿಂದ ಪ್ರಯಾಸದ ಗೆಲುವು ಪಡೆದಿದ್ದಾರೆ. ಸಕಲೇಶಪುರ–ಆಲೂರು ಬೇಲೂರು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸಂಘಟನೆಗೆ ಬಲ ತುಂಬಬೇಕು ಎನ್ನುವ ಉದ್ದೇಶದಿಂದ ದೇವೇಗೌಡರೇ ಇದೀಗ ಜಿಲ್ಲೆಯ ರಾಜಕಾರಣಕ್ಕೆ ಪ್ರವೇಶ ಮಾಡಿದ್ದಾರೆ.

ಹಾಸನ ಕ್ಷೇತ್ರದಿಂದ ಎಚ್.ಡಿ. ದೇವೇಗೌಡರೇ ಸ್ಪರ್ಧೆ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ. ಇದನ್ನು ಪಕ್ಷದ ಮುಖಂಡರ ಸಭೆಯಲ್ಲೂ ಸ್ಪಷ್ಟವಾಗಿ ಹೇಳಿದ್ದೇನೆ.
ಎ.ಮಂಜು, ಜೆಡಿಎಸ್‌ ಶಾಸಕ
ಕಳೆದ ಬಾರಿ ದೇವೇಗೌಡರೇ ನನಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಈ ಬಾರಿ ಅವರೇ ಹಾಸನದಿಂದ ಸ್ಪರ್ಧೆ ಮಾಡುವುದಾದರೆ ಸಂತೋಷದಿಂದ ಬಿಟ್ಟು ಕೊಡುತ್ತೇನೆ.
ಪ್ರಜ್ವಲ್‌ ರೇವಣ್ಣ , ಸಂಸದ
ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧೆ ಬಹುತೇಕ ಖಚಿತ. ಹಿರಿಯರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ರಾಷ್ಟ್ರೀಯ ರಾಜ್ಯ ಘಟಕದ ಅಧ್ಯಕ್ಷರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಕೆ.ಎಸ್. ಲಿಂಗೇಶ್‌, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT