ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಕಲಗೂಡು | ಸೇವಂತಿಗೆ ಬೆಲೆ ಕುಸಿತ: ಟ್ರ್ಯಾಕ್ಟರ್‌ನಲ್ಲಿ ಉತ್ತು ಬೆಳೆ ನಾಶ

Published 24 ಸೆಪ್ಟೆಂಬರ್ 2023, 5:15 IST
Last Updated 24 ಸೆಪ್ಟೆಂಬರ್ 2023, 5:15 IST
ಅಕ್ಷರ ಗಾತ್ರ

ಅರಕಲಗೂಡು: ಸೇವಂತಿಗೆ ಹೂವಿಗೆ ಬೆಲೆ ತಾಳಕ್ಕೆ ಕುಸಿದಿರುವ ಪರಿಣಾಮ ಕಂಗೆಟ್ಟ ಹೂವಿನ ಬೆಳೆಗಾರರು, ಬೆಳೆದಿದ್ದ ಹೂವಿನ ಗಿಡಗಳನ್ನು ಕಣ್ಣೀರಿಡುತ್ತಲೇ ನಾಶ ಮಾಡುತ್ತಿದ್ದಾರೆ.

ವರಮಹಾಲಕ್ಷ್ಮೀ ಹಬ್ಬದ ಸಮಯದಲ್ಲಿ ಉತ್ತಮ ಬೆಲೆ ಕಂಡಿದ್ದ ಹೂ ಬೆಳೆಗಾರರು, ಇದೀಗ ದರ ಕುಸಿತದ ಪರಿಣಾಮ ಹೂವು ಬೆಳೆದ ತಪ್ಪಿಗೆ ಕೈ ಸುಟ್ಟುಕೊಳ್ಳುವ ಸಂಕಷ್ಟದ ಸ್ಥಿತಿ ಅನುಭವಿಸುವಂತಾಗಿದೆ. ಮಾರುಕಟ್ಟೆಯಲ್ಲಿ ಒಂದು ಮಾರು ಸೇವಂತಿಗೆ ಹೂವಿನ ಬೆಲೆ ₹ 10ಕ್ಕೂ ಕಡಿಮೆ ಇದ್ದು, ಕೇಳುವವರೇ ಇಲ್ಲದಂತಾಗಿದೆ.

ಸೇವಂತಿಗೆ ಹೂವಿಗೆ ಬೆಲೆ ಇಲ್ಲದ ಕಾರಣ ಅನೇಕ ಬೆಳೆಗಾರರು ಹೊಲದಲ್ಲಿ ಹುಲುಸಾಗಿ ಬೆಳೆದಿದ್ದ ಗಿಡಗಳನ್ನು ಹೂವಿನ  ಸಮೇತ ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಿ ನೆಲಸಮಗೊಳಿಸುತ್ತಿದ್ದಾರೆ. ಗಿಡದಲ್ಲಿ ನಳ ನಳಿಸುತ್ತಿದ್ದ ಸೇವಂತಿಗೆ ಹೂ ಬೆಳೆಗಾರರ ಕಣ್ಣೆದುರಲ್ಲೇ ಮಣ್ಣುಪಾಲಾಗುತ್ತಿದೆ.

ಸೇವಂತಿ ಮಾರಿಗೆ ₹ 5–₹ 10 ಕ್ಕೆ ಮಾರಾಟ ಮಾಡಬೇಕಾಗಿದೆ. ಗಿಡಗಳಲ್ಲಿ ಹೂ ಕೊಯ್ದು ಮಾಲೆ ಕಟ್ಟಲು ತಗಲುತ್ತಿರುವ ಕೂಲಿ ವೆಚ್ಚವೂ ಸಿಗುತ್ತಿಲ್ಲ. ಮನನೊಂದು ಬೆಳೆಯನ್ನು ಟ್ರ್ಯಾಲಿ ಹೊಡೆಸಿ ನಾಶಪಡಿಸುತ್ತಿದ್ದೇನೆ.
ದುಮ್ಮಿ ಚಂದ್ರಶೇಖರ್, ಬೆಳೆಗಾರ

ಶನಿವಾರ ತಾಲ್ಲೂಕಿನ ದುಮ್ಮಿ ಗ್ರಾಮದ ರೈತ ಚಂದ್ರಶೇಖರ್ ಎಂಬುವವರು, ಬೆಲೆ ಇಲ್ಲದ ಕಾರಣ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೇವಂತಿಗೆ ಗಿಡಗಳನ್ನು ಹೂ ಸಮೇತ ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಿ ನಾಶಪಡಿಸಿದರು.

ಏಳೂವರೆ ಸಾವಿರ ಗಿಡಗಳನ್ನು ನೆಟ್ಟು ಬೆವರು ಸುರಿಸಿ ಬೆಳೆದಿದ್ದೆ. ನೀರು ಹಾಯಿಸಿ ಸಾವಿರಾರು ರೂಪಾಯಿ ಹಣ ವ್ಯಯಿಸಿ ಬೆಳೆದಿದ್ದ ಹೂವಿನ ಬೆಳೆ, ಜೇಬು ತುಂಬಿಸುವ ಬದಲು ಆರ್ಥಿಕವಾಗಿ ಸಂಕಷ್ಟಕ್ಕೀಡು ಮಾಡಿದೆ ಎಂದು ಅಳಲು ತೋಡಿಕೊಂಡರು.

ಹೂ ಮಾಲೆಗಳನ್ನು ಕೊಂಡು ಹುಬ್ಬಳ್ಳಿ ಮಂಗಳೂರು ಕೇರಳ ಮತ್ತಿತರೆಡೆ ಮಾರಾಟ ಮಾಡಲಾಗುತ್ತಿತ್ತು. ಈಗ ಎಲ್ಲೆಡೆ ಹೂವಿನ ದರ ಪಾತಾಳ ಕಂಡಿದೆ. ಬೇಡಿಕೆ ಇಲ್ಲದ್ದರಿಂದ ಮಾರಾಟ ಸ್ಥಗಿತಗೊಳಿಸಿದ್ದೇನೆ.
ಸಂತೋಷ್ ಶಣವಿನಕುಪ್ಪೆ, ಹೂ ವ್ಯಾಪಾರಿ

ಕಳೆದ ವಾರ ಗೌರಿ ಗಣೇಶ ಹಬ್ಬದ ಸಮಯದಲ್ಲೂ ಸೇವಂತಿಗೆ ಹೂವಿಗೆ ಬೆಲೆ ಸಿಗಲಿಲ್ಲ. ಉತ್ತಮ ಲಾಭ ಗಳಿಸುವ ಆಸೆಯಿಂದ ಅಪಾರ ಶ್ರಮ ವಹಿಸಿ ಬೆಳೆದಿದ್ದ ಬೆಳೆ, ನಮ್ಮ ಕುಟುಂಬವನ್ನು ಸಾಲದ‌ ಶೂಲಕ್ಕೆ ತಳ್ಳಿತು ಎಂದು ಹೂ ಬೆಳೆಗಾರರು ಅಲವತ್ತಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನ ಕಸಬಾ, ಕೊಣನೂರು, ರಾಮನಾಥಪುರ, ಕೇರಳಾಪುರ ಭಾಗದಲ್ಲಿ ಅಪಾರ ಬೆಳೆಗಾರರು ಬದುಕಿಗಾಗಿ ಹೂ ಬೆಳೆಯನ್ನೆ ನೆಚ್ಚಿಕೊಂಡಿದ್ದಾರೆ. ನಿತ್ಯ ಪಟ್ಟಣ ಪ್ರದೇಶಗಳಿಗೆ ತೆರಳಿ ಹೂ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಇದೀಗ ಹೂವಿಗೆ ಬೆಲೆಯಿಲ್ಲದೆ ಪರಿತಪಿಸುವಂತಾಗಿದೆ ಎನ್ನುತ್ತಾರೆ ಬೆಳೆಗಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT