ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನಾಥಸ್ವಾಮಿಯ 93ನೇ ವರ್ಷದ ಜಾತ್ರೆ: ಪುಂಗನೂರು ರಾಸು ಜತೆ ರೈತರ ಸೆಲ್ಫಿ

ಬೂಕನಬೆಟ್ಟದ ಜಾತ್ರೆಯಲ್ಲಿ ಆಂಧ್ರ, ತುಮಕೂರು, ಮಂಡ್ಯ, ಮೈಸೂರಿನ ಕೃಷಿಕರು
Published 11 ಜನವರಿ 2024, 7:46 IST
Last Updated 11 ಜನವರಿ 2024, 7:46 IST
ಅಕ್ಷರ ಗಾತ್ರ

ಹಿರೀಸಾವೆ: ಬೂಕನಬೆಟ್ಟದ ರಂಗನಾಥಸ್ವಾಮಿಯ 93ನೇ ವರ್ಷದ ಜಾತ್ರೆಯಲ್ಲಿ ಪುಂಗನೂರು ತಳಿಯ ಎತ್ತುಗಳು ರೈತರು ಮತ್ತು ಜಾತ್ರೆಗೆ ಬಂದವರ ಗಮನ ಸೆಳೆಯುತ್ತಿವೆ.

ನಾಲ್ಕು ದಿನಗಳಿಂದ ರಾಸುಗಳ ಜಾತ್ರೆ ನಡೆಯುತ್ತಿದ್ದು, ಸಾವಿರಾರು ಎತ್ತುಗಳು ಸೇರಿವೆ. ಇದೇ ಮೊದಲ ಬಾರಿಗೆ ಪುಂಗನೂರು ತಳಿಯ ಎತ್ತುಗಳು ಪ್ರದರ್ಶನದಲ್ಲಿ ಭಾಗವಹಿಸಿವೆ.

ಹೊನ್ನಶೆಟ್ಟಿಹಳ್ಳಿಯ ಸಂದೀಪ್ ಈ ಎತ್ತುಗಳನ್ನು ಸಾಕಿ, ಜಾತ್ರೆಗೆ ತಂದಿದ್ದಾರೆ. ಅಗಲ ಹಣೆ, ಪುಟ್ಟ ಕಾಲುಗಳು, ಗಿಡ್ಡವಾಗಿದ್ದರೂ, ಮೈಕಟ್ಟಿನಿಂದ ತುಂಬಿಕೊಂಡಿವೆ. ಆಂಧ್ರಪ್ರದೇಶದ ಚಿತ್ತೂರು, ಮದನಪಲ್ಲಿ ಭಾಗದಲ್ಲಿ ಈ ತಳಿಯ ಎತ್ತುಗಳು ಇವೆ. ಈ ಭಾಗದಲ್ಲಿ ಮತ್ತು ಜಾತ್ರೆಯಲ್ಲಿ ಹಳ್ಳಿಕಾರ್‌ ಎತ್ತುಗಳನ್ನು ನೋಡಿರುವ ರೈತರಿಗೆ ಈ ರಾಸುಗಳು ವಿಶೇಷವಾಗಿ ಕಾಣಿಸುತ್ತಿವೆ. ಇವುಗಳ ಮುಂದೆ ಸೆಲ್ಫಿ ಹಾಗೂ ಫೋಟೊ ತೆಗೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ.

ಹಾಸನ, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳ ರೈತರು ಜಾತ್ರೆಯಲ್ಲಿ ₹ 4 ಲಕ್ಷದಿಂದ ₹ 10 ಲಕ್ಷ ಬೆಲೆಬಾಳುವ ನೂರಾರು ಜೊತೆ ಎತ್ತುಗಳನ್ನು ಪ್ರದರ್ಶನ ಮಾಡಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ರೈತರು ಜಾತ್ರೆಗೆ ಬಂದು ರಾಸುಗಳನ್ನು ಕೊಂಡು ಹೋಗುತ್ತಿದ್ದಾರೆ.

‘ಮಂಗಳವಾರ, ಬುಧವಾರ ಒಳ್ಳೆಯ ವ್ಯಾಪಾರ ನಡೆಯಿತು. ಗುರುವಾರ ಮತ್ತು ಶುಕ್ರವಾರವೂ ವ್ಯಾಪಾರ ನಡೆಯುತ್ತದೆ. ಶನಿವಾರದ ನಂತರ ಜಾನುವಾರುಗಳ ಜಾತ್ರೆ ಮುಕ್ತಾಯವಾಗಲಿದೆ. ಕುಡಿಯುವ ನೀರು ಸೇರಿದಂತೆ ಎಲ್ಲ ಸೌಲಭ್ಯಗಳು ಉತ್ತಮವಾಗಿವೆ’ ಎನ್ನುತ್ತಾರೆ ರೈತರ ಹೊಸೂರು ಕುಮಾರ್.

ಕಳೆದ ವರ್ಷ ಚರ್ಮಗಂಟು ರೋಗದ ಸಮಸ್ಯೆಯಿಂದ ಜಾತ್ರೆ ನಡೆಸಲು ಸರ್ಕಾರ ಅನುಮತಿ ನೀಡದೆ, ರೈತರು ಜಾತ್ರೆ ಆವರಣದ ಹೊರಭಾಗದಲ್ಲಿ ರಾಸುಗಳ ಮಾರಾಟ ಮಾಡಿದ್ದರು.

ನಮ್ಮ ಮನೆಯಲ್ಲಿ ಪುಂಗನೂರು ತಳಿಯ ಹಸು ಇದೆ ಅದರ ಕರುಗಳಿವು ಸಾಕಿ ಕೃಷಿ ಕೆಲಸವನ್ನು ಮಾಡಿದ್ದೇವೆ. ಮಾರಾಟ ಮಾಡುವುದಿಲ್ಲ ಪ್ರದರ್ಶನಕ್ಕಾಗಿ ಜಾತ್ರೆಗೆ ಬಂದಿದ್ದೇವೆ.
ಸಂದೀಪ್ ಪುಂಗನೂರು ಎತ್ತುಗಳ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT