ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ವಲ್‌ ಪ್ರಕರಣ: ಮೇ 30ರಂದು ಜನಪರ ಚಳವಳಿಗಳ ಒಕ್ಕೂಟದಿಂದ ಪ್ರತಿಭಟನೆ

Published 25 ಮೇ 2024, 15:30 IST
Last Updated 25 ಮೇ 2024, 15:30 IST
ಅಕ್ಷರ ಗಾತ್ರ

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಬೇಕು. ಮಹಿಳೆಯರ ಘನತೆಯನ್ನು ಉಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಜನಪರ ಚಳವಳಿಗಳ ಒಕ್ಕೂಟದಿಂದ ಮೇ 30ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಭೆ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಹಾಗೂ ಹೊಸ ಬಸ್ ನಿಲ್ದಾಣದ ರಸ್ತೆಯಲ್ಲಿ ಹೋರಾಟವನ್ನು ಹಮ್ಮಿಕೊಳ್ಳುತ್ತಿದ್ದು, ರಾಜ್ಯದ ಮೂಲೆ ಮೂಲೆಗಳಿಂದಲೂ ಮಹಿಳಾ, ದಲಿತ ,ಕಾರ್ಮಿಕ, ರೈತ, ಅಲ್ಪಸಂಖ್ಯಾತ, ಹಿಂದುಳಿದ, ಲಿಂಗತ್ವ ಅಲ್ಪಸಂಖ್ಯಾತ, ಆದಿವಾಸಿ, ನಿವೃತ್ತ ಅಧಿಕಾರಿಗಳು, ನೌಕರರ ಸಂಘಟನೆ, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಹಾಸನದ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಸುಮಾರು 10ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

ಪ್ರತಿಭಟನಾ ಮೆರವಣಿಗೆ ಸಂಬಂಧ ರೂಪುರೇಷೆಗಳ ಕುರಿತು ಈಗಾಗಲೇ ಜನಪರ ಚಳವಳಿ ಸದಸ್ಯರ ಸಭೆಯನ್ನು ನಡೆಸಲಾಗಿದ್ದು, ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ನಮ್ಮ ಪ್ರಮುಖ ಬೇಡಿಕೆಯಾಗಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಬೇಕು. ಈ ನೀಚ ಕೃತ್ಯವನ್ನು ಸೆರೆಹಿಡಿದವರು, ನಂತರ ಆ ವಿಡಿಯೋಗಳನ್ನು ಪೆನ್ ಡ್ರೈವ್‌ಗಳ ಮೂಲಕ ಹಂಚಿಕೆ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಇದೊಂದು ಅಂತರ ರಾಷ್ಟ್ರೀಯ ಮಟ್ಟದ ಹೀನ ಕೃತ್ಯವಾಗಿದ್ದು, ಇದನ್ನು ಸಂಘಟನೆ ಬಲವಾಗಿ ಖಂಡಿಸುತ್ತದೆ ಎಂದರು.

ನಮ್ಮ ಹೋರಾಟ ಯಾವುದೇ ಒಂದು ಪಕ್ಷ ಹಾಗೂ ಮುಖಂಡರ ವಿರುದ್ಧವಾಗಿಲ್ಲ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳ ವಿರುದ್ಧವಾಗಿದೆ ಎಂದರು.

ಇತ್ತೀಚಿಗೆ ಪತ್ರಿಕಾಗೋಷ್ಠಿ ನಡೆಸಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು, ಪ್ರತಿಭಟನೆಯಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ. ಜೆಡಿಎಸ್ ಪಕ್ಷದ ಎಚ್.ಡಿ, ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಅವರು ಯಾರ ಮತಗಳಿಂದಲೇ ಗೆದ್ದಿದ್ದಾರೆ? ಇದೀಗ ಜಿಲ್ಲೆಯ ನೂರಾರು ಮಹಿಳೆಯರಿಗೆ ಅನ್ಯಾಯವಾಗಿದ್ದು, ಅವರ ಪರ ನಿಲ್ಲಬೇಕಾದ ಇವರು ಈ ರೀತಿ ಹೋರಾಟ ಹತ್ತಿಕ್ಕುವ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಾರದು ಎಂದು ಒತ್ತಾಯಿಸಿದರು.

ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಈಗಾಗಲೇ ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಆದಾಗ್ಯೂ ನಾವು ಜೆಡಿಎಸ್ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದ್ದು, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟುಕೊಳ್ಳುವ ರೀತಿಯಲ್ಲಿ ಕುಮಾರಸ್ವಾಮಿ ಅವರು ವರ್ತಿಸಬಾರದು. ಜಿಲ್ಲೆಯ ಮಹಿಳೆಯರ ಪರವಾಗಿ ಧ್ವನಿ ಎತ್ತಲು ಪ್ರತಿಭಟನೆಗೆ ಸಹಕಾರ ಕೊಡಿ ಇಲ್ಲದಿದ್ದರೆ ಸುಮ್ಮನಿರಿ ಎಂದು ಹೇಳಿದರು.

ಪ್ರತಿಭಟನೆಗೆ ಸಹಕರಿಸುವಂತೆ ಯಾವುದೇ ಅಧಿಕಾರಿಗಳು, ಮಹಿಳಾ ನೌಕರರ ಮೇಲೆ ಒತ್ತಡ ಹೇರಿಲ್ಲ. ಈ ರೀತಿ ಹೇಳಿಕೆ ನೀಡುವ ಮೂಲಕ ಹೋರಾಟವನ್ನು ತಡೆಯುವ ತಂತ್ರಗಾರಿಕೆಯನ್ನು ಜೆಡಿಎಸ್‌ನವರು ಮಾಡುತ್ತಿದ್ದು, ನಮ್ಮ ಹೋರಾಟ ನಿಲ್ಲುವುದಿಲ್ಲ. ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಮುಂದೆ ಯಾವುದಾದರೂ ಅನಾಹುತ ನಡೆದರೆ ಅದಕ್ಕೆ ಜೆಡಿಎಸ್‌ನವರೇ ನೇರ ಹೊಣೆಗಾರರು ಎಂದು ಎಚ್ಚರಿಸಿದರು.

ಸಂದೇಶ್, ವಿಜಯ್ ಕುಮಾರ್, ಪೃಥ್ವಿ, ರಾಜಶೇಖರ್, ಸೋಮಶೇಖರ್, ಅಬ್ದುಲ್ ಸಮ್ಮದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT