ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರಡಿಗಾಲದಲ್ಲಿ ಗೋಮಾಳಕ್ಕೆ ಬೆಂಕಿ

Published 20 ಮಾರ್ಚ್ 2024, 16:02 IST
Last Updated 20 ಮಾರ್ಚ್ 2024, 16:02 IST
ಅಕ್ಷರ ಗಾತ್ರ

ಹೆತ್ತೂರು: ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲು ಧಗೆ ಹೆಚ್ಚಾಗುತ್ತಿದೆ. ಮನುಷ್ಯರಿಗೆ ಕುಡಿಯುವ ನೀರು, ಪ್ರಾಣಿ ಪಕ್ಷಿಗಳಿಗೂ ನೀರಿನ ಹಾಹಾಕಾರ ಉಂಟಾಗುವ ಪರಿಸ್ಥಿತಿ ಉದ್ಭವವಾಗುತ್ತಿದೆ. ಮತ್ತೊಂದೆಡೆ ಕಾಡಂಚಿನ‌ ಪ್ರದೇಶದಲ್ಲಿ ಹುಲ್ಲುಗಾವಲು ಒಣಗಿರುವ ಪರಿಣಾಮ ಕಾಡ್ಗಿಚ್ಚಿನ ಪ್ರಕರಣಗಳಿಗೆ ಕಾರಣವಾಗುತ್ತಿದೆ. ಆಕಸ್ಮಿಕವಾಗಿ ಬೀಳುವ ಪ್ರಕರಣ ಒಂದೆಡೆಯಾದರೆ, ಮತ್ತೊಂದೆಡೆ ಕಿಡಿಗೇಡಿಗಳ ಕೃತ್ಯಕ್ಕೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿ ಆಗುತ್ತಿದೆ ಎಂದು ಜನರು ದೂರುತ್ತಿದ್ದಾರೆ.

ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಕರಡಿಗಾಲ ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ ಗೋಮಾಳಕ್ಕೆ ಆಕಸ್ಮಿಕ ಬೆಂಕಿ ತಗಲಿ ಸುಮಾರು 8 ಎಕರೆಗೂ ಹೆಚ್ಚು ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಸರ್ಕಾರಿ ಗೋಮಾಳದಲ್ಲಿ ಬೆಳೆದಿದ್ದ ಕುರುಚಲ ಗಿಡಕ್ಕೆ ಬೆಂಕಿ ಹತ್ತಿಕೊಂಡಿದ್ದು, ಬಿಸಿಲು ಹಾಗೂ ಗಾಳಿಯ ರಭಸಕ್ಕೆ ಬೆಂಕಿ ಗೋಮಾಳದ ಪ್ರದೇಶವನ್ನು ಆಕ್ರಮಿಸಿಕೊಡಿತ್ತು.

ಸ್ಥಳೀಯರ ಕರೆಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಸಕಲೇಶಪುರ ತಾಲ್ಲೂಕು ಅಗ್ನಿಶಾಮಕ ದಳದ ಅಧಿಕಾರಿ ರಾಜು ಹಾಗೂ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಇದರಿಂದ ಅಕ್ಕಪಕ್ಕದಲ್ಲಿದ್ದ ಕಾಫಿ ತೋಟಕ್ಕೆ ಬೆಂಕಿ ತಗುಲುವುದನ್ನು ತಪ್ಪಿಸಿದರು.

ಮಲೆನಾಡು ಹಳ್ಳಿ ಭಾಗದಲ್ಲಿ ಬಿಸಲಿನ ಧಗೆ ಕಾಡ್ಗಿಚ್ಚಿಗೆ ದಾರಿ ಮಾಡಿಕೊಡುತ್ತದೆ. ಈ ಭಾಗಕ್ಕೆ ಬರುವ ಪ್ರವಾಸಿಗರ ಹುಡುಗಾಟ, ಧೂಮಪಾನವು ಬೆಂಕಿಗೆ ಕಾರಣವಾಗುತ್ತಿದೆ. ಚಿಕ್ಕದಾಗಿ ಹಚ್ಚಿದ ಬೆಂಕಿ ರಭಸವಾಗಿ ಬೀಸುವ ಗಾಳಿಯಿಂದಾಗಿ ಅಕ್ಕ ಪಕ್ಕದ ಕಾಫಿ ತೋಟಕ್ಕೆ ಹಾನಿ ಮಾಡುತ್ತದೆ. ಇದರಿಂದ ಎಷ್ಟೋ ರೈತರ ಶ್ರಮ ಕಣ್ಣೀರಿನಲ್ಲಿ ಕೈ ತೊಳೆಯುವಂತ ಪರಿಸ್ಥಿತಿ ಉಂಟಾಗುತ್ತದೆ. ಬೆಂಕಿ ಅವಘಡಗಳು ಆಗದಂತೆ ನಾಗರಿಕರು ಎಚ್ಚರವಹಿಸಬೇಕು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.

‘ಬೇಸಿಗೆ ಕಾಲದಲ್ಲಿ ಸಾರ್ವಜನಿಕರು ತೋಟದಲ್ಲಿ ಅಥವಾ ಬಯಲು ಪ್ರದೇಶದಲ್ಲಿ ಬಿಡಿ, ಸಿಗರೇಟ್ ಸೇದಿ ಅರಿಸದೆ ಹಾಗೆ ಬಿಡಬಾರದು. ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡರೆ ಸಾರ್ವಜನಿಕರು ಬೆಂಕಿ ಆರಿಸುವ ಕೆಲಸಕ್ಕೆ ಮುಂದಾಗಬೇಕು. ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದರೆ ಕೂಡಲೇ ಸಕಲೇಶಪುರ ಅಗ್ನಿಶಾಮಕ ಇಲಾಖೆ ( ದೂ.ಸಂ-08173230101 ಅಥವಾ ತುರ್ತು ಕರೆ 112) ಯನ್ನು ಸಂಪರ್ಕಿಸಬೇಕು ಎಂದು ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಾಜು ತಿಳಿಸಿದ್ದಾರೆ.

ಹೆತ್ತೂರು ಹೋಬಳಿಯ ಕರಡಿಗಾಲ ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ ಗೋಮಾಳಕ್ಕೆ ಆಕಸ್ಮಿಕ ಬೆಂಕಿ ಬಿದ್ದಿರುವುದು
ಹೆತ್ತೂರು ಹೋಬಳಿಯ ಕರಡಿಗಾಲ ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ ಗೋಮಾಳಕ್ಕೆ ಆಕಸ್ಮಿಕ ಬೆಂಕಿ ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT