ರೈತರು, ಕೂಲಿಕಾರರ ಸಾಲ ಮನ್ನಾ ಮಾಡಲು ಒತ್ತಾಯ: ಪ್ರತಿಭಟನಾಕಾರರ ಬಂಧನ

7

ರೈತರು, ಕೂಲಿಕಾರರ ಸಾಲ ಮನ್ನಾ ಮಾಡಲು ಒತ್ತಾಯ: ಪ್ರತಿಭಟನಾಕಾರರ ಬಂಧನ

Published:
Updated:
Deccan Herald

ಹಾಸನ: ರೈತರ ಸಂಪೂರ್ಣ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಗುರುವಾರ ಜೈಲ್‌ ಭರೋ ಚಳವಳಿ ನಡೆಸಿದ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್), ಸಿಐಟಿಯು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.

‘ದೇಶದಲ್ಲಿ ಕೃಷಿ ನಂಬಿದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಹೊರ ಬರಲಾಗದೆ ಆತ್ಯಹತ್ಯೆ ದಾರಿ ಹಿಡಿಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಅನ್ನದಾತರನ್ನು ಸರ್ಕಾರ ರಕ್ಷಿಸಲು ಮುಂದಾಗಬೇಕು. ಕೇಂದ್ರದ ಬಿಜೆಪಿ ಸರ್ಕಾರ ಚುನಾವಣೆಗೂ ಮುನ್ನಾ ಕೊಟ್ಟ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಡಾ.ಎಂ.ಎಸ್. ಸ್ವಾಮಿನಾಥನ್ ಆಯೋಗ ಶಿಫಾರಸುಗಳನ್ನು ಜಾರಿಗೊಳಿಸುವ ಭರವಸೆ ನೀಡಿತ್ತು. ಆದರೆ ಇದುವರೆಗೂ ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲಾಯಿತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಘೋಷಣೆ ಮಾಡಿದರೂ ಕೇಂದ್ರ ಸರ್ಕಾರ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗುತ್ತದೆ ಎಂಬ ನೆಪವೊಡ್ಡಿ ಸಾಲ ಮನ್ನಾ ನಿರಾಕರಿಸಿತು. ಆದರೆ ಕಾರ್ಪೋರೆಟ್ ಕಂಪನಿಗಳ ತೆರಿಗೆಗೆ ವಿನಾಯಿತಿ ನೀಡುತ್ತಿದೆ. ಇದರಿಂದ ಕೇಂದ್ರ ಸರ್ಕಾರ ರೈತ ವಿರೋಧಿಯಾಗಿದೆ’ ಎಂದು ಟೀಕಿಸಿದರು.

‘ಸ್ವಾಮಿನಾಥನ್ ಕೃಷಿ ಆಯೋಗದ ಸಲಹೆಯಂತೆ ಎಲ್ಲಾ ಕೃಷಿ ಉತ್ಪನ್ನಗಳಿಗೆ ಒಟ್ಟು ಉತ್ಪಾದನಾ ವೆಚ್ಚಕ್ಕೆ ಶೇಕಡಾ 50ರಷ್ಟು ಲಾಭಾಂಶ ಸೇರಿ, ಬೆಂಬಲ ಬೆಲೆಯನ್ನು ಕಾಯ್ದೆಯನ್ನಾಗಿಸಬೇಕು. ರೈತರು ಹಾಗೂ ಕೂಲಿ ಕಾರ್ಮಿಕರ ಸಾಲ ಮನ್ನಾ ಹಾಗೂ ಕೇರಳ ಮಾದರಿಯಲ್ಲಿ ಋಣ ಮುಕ್ತ ಕಾಯ್ದೆಯನ್ನು ಜಾರಿಗೆ ತರಬೇಕು. ಎಲ್ಲಾ ಬಡವರಿಗೂ ಮನೆ ನಿರ್ಮಿಸಿಕೊಡುವುದರ ಜತೆಗೆ ವ್ಯವಸಾಯ ಮಾಡುವ ಇಚ್ಛಿಸುವ ಬಡವರಿಗೆ ತಲಾ 5 ಎಕರೆ ಭೂಮಿ ನೀಡಬೇಕು’ ಎಂದು ಆಗ್ರಹಿಸಿದರು.

‘ಉದ್ಯೋಗ ಖಾತ್ರಿ ಕೆಲಸವನ್ನು100 ದಿನ ಕಡ್ಡಾಯ ಮಾಡಿ, 200 ದಿನಗಳಿಗೆ ನಗರ ಪ್ರದೇಶಕ್ಕೆ ವಿಸ್ತರಿಸಬೇಕು. ಕೂಲಿಯನ್ನು ₹ 600ಕ್ಕೆ ಏರಿಸಬೇಕು. ಬೆಳೆ ವಿಮೆ ಯೋಜನೆಯನ್ನು ರೈತ ಸ್ನೇಹಿಯಾಗಿ ಬದಲಿಸಿ, ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಮಾಸಿಕ ₹ 5 ಸಾವಿರ ಪಿಂಚಣಿ ನೀಡಬೇಕು. ಎಲ್ಲಾ ಬಗರ್ ಹುಕುಂ ಸಾಗುವಳಿದಾರರಿಗೂ ಹಕ್ಕುಪತ್ರ ನೀಡಬೇಕು. ಕಾರ್ಮಿಕರಿಗೆ ಕನಿಷ್ಟ ವೇತನ ₹ 18 ಸಾವಿರ ಜಾರಿಯಾಗಬೇಕು’ ಎಂದು ಒತ್ತಾಯಿಸಿದರು.

ಕೆಪಿಆರ್ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ಕಾರ್ಯದರ್ಶಿ ವಸಂತ್ ಕುಮಾರ್, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಡಿ.ಎಲ್. ರಾಘವೇಂದ್ರ, ಎಂ.ಜಿ. ಪೃಥ್ವಿ, ರಮೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !