ಶನಿವಾರ, ನವೆಂಬರ್ 23, 2019
18 °C
ಪರ್ಯೂಷಣ ಪರ್ವದ ಕ್ಷಮಾವಾಣಿ, ಸಹಸ್ರಕೂಟ ಜಿನಬಿಂಬಕ್ಕೆ ಮಹಾಭಿಷೇಕ

ತಪ್ಪಿಗೆ ಪ್ರತಿಯೊಬ್ಬರೂ ಕ್ಷಮೆಯಾಚಿಸಿ: ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ

Published:
Updated:
Prajavani

ಶ್ರವಣಬೆಳಗೊಳ: ‘ಜೀವನದಲ್ಲಿ ತಿಳಿದೋ ತಿಳಿಯದೆಯೋ ಮಾಡಿರುವ ತಪ್ಪುಗಳನ್ನು ದೇವಗುರು ಶಾಸ್ತ್ರಗಳ ಸಾಕ್ಷಿಯಾಗಿ ಪ್ರತಿಯೊಬ್ಬರೂ ಕ್ಷಮೆಯಾಚಿಸಬೇಕು’ ಎಂದು ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದ ಪೀಠಾಧಿಪತಿ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಪಟ್ಟಣದ ಭಂಡಾರ ಬಸದಿಯಲ್ಲಿ ಶನಿವಾರ ಏರ್ಪಡಿಸಿದ್ದ ಪರ್ಯೂಷಣ ಪರ್ವದ ಕ್ಷಮಾವಾಣಿ ಮತ್ತು ಸಹಸ್ರಕೂಟ ಜಿನಬಿಂಬ ಮಹಾಭಿಷೇಕ ಪೂಜಾ ಮಹೋತ್ಸವದಲ್ಲಿ ಅವರು ಮಾತನಾಡಿದರು.

ಕ್ಷೇಮಂ ಸರ್ವ ಜೀವಾನಾಂ ಎಂಬಂತೆ ಎಲ್ಲಾ ಜೀವಿಗಳೂ ಕ್ಷೇಮವಾಗಿರಬೇಕು. ಎಲ್ಲಾ ಜೀವಿಗಳಲ್ಲಿಯೂ ಕರುಣೆ ದಯಾ ಭಾವದಿಂದ ಇದ್ದು, ಕ್ಷಮಾವಾಣಿಯ ದಿನವಾದ ಇಂದು ಎಲ್ಲಾ ಜೀವಿಗಳಿಗೂ ಕ್ಷಮೆ ನೀಡಿ, ಕ್ಷಮೆಯನ್ನು ಕೋರಬೇಕು. ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶದ ಸಂಕಷ್ಟದಲ್ಲಿರುವವರಿಗೆ ಎಲ್ಲರೂ ತಮ್ಮ ಶಕ್ತ್ಯಾನುಸಾರ ಸಹಾಯ ನೀಡಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಪುಣ್ಯಸಾಗರ ಮಹಾರಾಜರು ಮಾತನಾಡಿ, ‘ಅನಾದಿ ಕಾಲದಿಂದಲೂ ಮನುಷ್ಯ ಕ್ಷಮಾ ಭಾವನೆಯನ್ನು ಹೊಂದಿದ್ದಾನೆ. ಹಾಗಾಗಿ ಅವನ ಅಂತರಂಗದಿಂದಲೇ ಕ್ರೋಧ, ಮಾನ, ಮಾಯಾ, ಲೋಭ, ಕಷಾಯಗಳನ್ನು ತ್ಯಜಿಸುವುದರಿಂದ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚುತ್ತಾ ಎಲ್ಲರೂ ಶಾಂತಿಯಿಂದ ಜೀವನ ಸಾಗಿಸಲು ಸಹಾಯವಾಗುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ಚಾರುಕೀರ್ತಿ ಶ್ರೀಗಳು ಆಶೀರ್ವಚನ ನೀಡಿದರು. ಅತಿಥಿಗಳಾಗಿದ್ದ ಕರ್ನಾಟಕ ಜೈನ ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ಜಿತೇಂದ್ರಕುಮಾರ್‌ ಎಲ್ಲರ ಪರವಾಗಿ ಎಲ್ಲರಲ್ಲೂ ಕ್ಷಮೆಯಾಚಿಸಿದರು.

ನಂತರ ಅನಂತ ಚತುರ್ದಶಿ ನೋಂಪಿಯಲ್ಲಿ ಉಪವಾಸ ಮಾಡಿರುವ ಶ್ರಾವಕ ಶ್ರಾವಕಿಯರನ್ನು ಹಾಗೂ ಸಹಸ್ರಕೂಟ ಪೂಜಾ ಸೇವಾಕರ್ತರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.

ನಂತರ ಪ್ರತಿಷ್ಠಾಪಿಸಲ್ಪಟ್ಟ ಸಹಸ್ರಕೂಟ ಜಿನಬಿಂಬಕ್ಕೆ ಕ್ಷೇತ್ರದ ಪೀಠಾಧಿಪತಿಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಮಹಾಭಿಷೇಕ ಪೂಜೆ ನೆರವೇರಿಸಲಾಯಿತು.

ಪ್ರಥಮ ಕಲಶ ಪಡೆದ ಕೆ.ಕೆ ಜೈನ ಕುಟುಂಬಸ್ಥರು ಸಹಸ್ರಕೂಟ ಜಿನಬಿಂಬಕ್ಕೆ ಜಲಾಭಿಷೇಕ ಮಾಡುವುದರೊಂದಿಗೆ ಚಾಲನೆ ನೀಡಿದರು. ನಂತರ ಎಳನೀರು, ಈಕ್ಷುರಸ, ಕ್ಷೀರ, ಶ್ವೇತ ಕಲ್ಕಚೂರ್ಣ, ಅರಿಸಿನ, ಕಷಾಯ, ಚತುಷ್ಕೋನ ಕಲಶ, ಶ್ರೀಗಂಧ, ಚಂದನ, ಅಷ್ಟಗಂಧ, ಪುಷ್ಪವೃಷ್ಟಿ, ಪೂರ್ಣಕುಂಭ, ಶಾಂತಿಧಾರೆ ಮಹಾಮಂಗಳಾರತಿ, ನೆರವೇರಿಸಲಾಯಿತು.

ಹಿರಿಯ ಪತ್ರಕರ್ತ ಪದ್ಮರಾಜ್ ದಂಡಾವತಿ ದಂಪತಿ ಚತುಷ್ಕೋನ ಕಲಶ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಪುಣ್ಯಸಾಗರ ಮಹಾರಾಜರು, ಕ್ಷುಲ್ಲಿಕಾ ವಿಶುದ್ಧಮತಿ ಮಾತಾಜಿಯವರು, ಪಾವನ ಸಾನ್ನಿಧ್ಯ ವಹಿಸಿದ್ದರು.

ಸಾಂಗ್ಲಿಯ ಕುಬೇರ್‌ ಚೌಗಲೆಯವರ ಸಂಗೀತದೊಂದಿಗೆ ಪೂಜಾ ನೇತೃತ್ವವನ್ನು ಪ್ರತಿಷ್ಠಾಚಾರ್ಯರಾದ ಎಸ್‌.ಪಿ.ಉದಯಕುಮಾರ್ ಶಾಸ್ತ್ರಿ‌, ಎಸ್‌.ಡಿ.ನಂದಕುಮಾರ್‌, ವಹಿಸಿದ್ದರು.

ಪ್ರತಿಕ್ರಿಯಿಸಿ (+)