ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕದಾಸರ ಕೀರ್ತನೆ ಪಠ್ಯದಲ್ಲಿ ಸೇರಿಸಿ: ಶಾಸಕ ಕೆ.ಎಂ. ಶಿವಲಿಂಗೇಗೌಡ

ಸರ್ಕಾರಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮನವಿ
Published 30 ನವೆಂಬರ್ 2023, 13:16 IST
Last Updated 30 ನವೆಂಬರ್ 2023, 13:16 IST
ಅಕ್ಷರ ಗಾತ್ರ

ಅರಸೀಕೆರೆ: ಮನುಷ್ಯನ ಜ್ಞಾನೋದಯ, ಸಮಾಜ ಸುಧಾರಣೆಗಾಗಿ ಕನಕದಾಸರ ಕೀರ್ತನೆಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಿ, ಅವುಗಳ ಅರ್ಥ ಹಾಗೂ ಸಾರಾಂಶವನ್ನು ವಿದ್ಯಾರ್ಥಿಗಳಿಗೆ ಹಾಗೂ ಸಮಾಜಕ್ಕೆ ತಿಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಮನವಿ ಮಾಡಿದರು.

ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಕುರುಬ ಸಮಾಜದ ವತಿಯಿಂದ ಗುರುವಾರ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ಅಂದಿನ ದಿನಗಳಲ್ಲಿ ಜಾತಿಗಳ ನಡುವೆ ಹಾಗೂ ಸ್ವಾರ್ಥಕ್ಕಾಗಿ ಮನುಷ್ಯ ನೆಮ್ಮದಿ ಕಳೆದುಕೊಂಡಿದ್ದ. ಆ ಸಮಯದಲ್ಲಿ ಕನಕದಾಸರ ಕೀರ್ತನೆಗಳು ಸಮಾಜ ಸುಧಾರಣೆ ಮಾಡಿದವು. ಸಾಮಾಜಿಕ ನ್ಯಾಯದ ಕಡೆಗೆ ಮನುಷ್ಯ ಚಿಂತನೆ ಮಾಡಲು ದಾರಿ ತೋರಿದವು. ಕನಕದಾಸರಿಗೆ ದೇವರು ಕಾಣಿಸಿರುವುದು ನಿಜ. ಆದ್ದರಿಂದ ಅವರು ದೈವಾಂಶಸಂಭೂತರಾಗಿದ್ದು, ಸಮ ಸಮಾಜ ರೂಪಿಸುವಲ್ಲಿ ಪ್ರಮುಖರಾಗಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿಳಿ ಚೌಡಯ್ಯ ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ಅವತರಿಸಿದ ದಾಸರಲ್ಲೇ ಶ್ರೇಷ್ಠರೆಂದರೆ ಕನಕದಾಸರು. ಅವರು ಸಮಾಜದಲ್ಲಿ ಯಾವ ಜಾತಿಯೂ ಇಲ್ಲ. ಇರುವುದು ಹೆಣ್ಣು– ಗಂಡು ಜಾತಿ ಮಾತ್ರ ಎಂದು ಸಾಮರಸ್ಯದಿಂದ ಬಾಳುವಂತೆ ಮಾಡಿದ ಮಹಾಪುರುಷರು ಎಂದು ಹೇಳಿದರು.

ಇದಕ್ಕೂ ಮುನ್ನ ನಗರದ ಬಸವೇಶ್ವರ ಯುವಕ ಸಂಘದ ವತಿಯಿಂದ ಕನಕದಾಸರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ಜಾನಪದ ಕಲಾತಂಡಗಳ ಕಲಾವಿದರು ನೀಡಿದ ಕಲಾ ಪ್ರದರ್ಶನ ಉತ್ಸವಕ್ಕೆ ಮೆರುಗು ನೀಡಿತು.

ತಹಶೀಲ್ದಾರ್ ಸಂತೋಷಕುಮಾರ್, ಕುರುಬರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ನಗರಸಭಾ ಮಾಜಿ ಉಪಾಧ್ಯಕ್ಷ ಕಾಂತೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹುಚ್ಚೇಗೌಡರು, ಸಂಗೊಳ್ಳಿ ರಾಯಣ್ಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಗದೀಶ್, ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ಕಸಾಪ ಅಧ್ಯಕ್ಷ ಚಂದ್ರಶೇಖರ್, ಬಸವೇಶ್ವರ ಯುವಕ ಸಂಘದ ರವಿಕಿರಣ್, ಮಧು, ದರ್ಶನ್, ನವೀನ್, ಪವನ್, ಮಂಜುನಾಥ್, ಸೇರಿದಂತೆ ಮುಖಂಡರು, ಸಮಾಜದವರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT