ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು | ಬರದ ಹೊಡೆತಕ್ಕೆ ಬಾಗಿದ ‘ಬೆನ್ನೆಲುಬು’

ಶೇ 26 ರಷ್ಟು ಮಳೆ ಕೊರತೆ: ಹಿಂಗಾರಿನಲ್ಲೂ ಕೈಕೊಟ್ಟ ಮಳೆ
Published 4 ನವೆಂಬರ್ 2023, 6:44 IST
Last Updated 4 ನವೆಂಬರ್ 2023, 6:44 IST
ಅಕ್ಷರ ಗಾತ್ರ

ಬೇಲೂರು: ಈ ಬಾರಿ ತಾಲ್ಲೂಕಿನಲ್ಲಿ ವಾಡಿಕೆಯಂತೆ ಮಳೆಯಾಗದೇ ತೀವ್ರ ಬರಗಾಲ ಎದುರಾಗಿದ್ದು, ರೈತರು ಕಂಗಾಲಾಗಿದ್ದಾರೆ. ಸರ್ಕಾರ ಬರಪೀಡಿತ ತಾಲ್ಲೂಕನ್ನಾಗಿ ಘೋಷಣೆ ಮಾಡಿದ್ದರೂ, ಪರಿಹಾರ ಕಾರ್ಯಗಳು ಮಾತ್ರ ಇನ್ನೂ ಮರೀಚಿಕೆಯಾಗಿವೆ.

ಮಳೆ ಬಾರದ ಕಾರಣ ಕಾಫಿ, ಮೆಣಸು, ಜೋಳ, ರಾಗಿ, ಭತ್ತ, ಹತ್ತಿ, ಆಲೂಗಡ್ಡೆ ಸೇರಿದಂತೆ ಬಹುತೇಕ ಬೆಳೆಗಳು ಒಣಗಿದ್ದು, ಬೆಳೆ ನಷ್ಟವಾಗಿದೆ. ಕಳೆದ ಬಾರಿ ಅತಿವೃಷ್ಟಿಯಿಂದ ನಷ್ಟವಾಗಿತ್ತು. ಈ ಭಾರಿ ಅನಾವೃಷ್ಟಿಯಿಂದ ಬೆಳೆ ಕಳೆದುಕೊಳ್ಳಬೇಕಾಗಿದೆ.

ತಾಲ್ಲೂಕಿನ ಮಲೆನಾಡು ಭಾಗಗಳಾದ ಬಿಕ್ಕೋಡು, ಅರೇಹಳ್ಳಿ, ಗೆಂಡೇಹಳ್ಳಿ ಭಾಗಗಳಲ್ಲೂ ಮಳೆ ಶೇ 30 ರಿಂದ 40ರಷ್ಟು ಕಡಿಮೆಯಾಗಿದೆ. ಬಯಲು ಸೀಮೆ ಪ್ರದೇಶಗಳಾದ ಹಳೇಬೀಡು, ಮಾದಿಹಳ್ಳಿ ಹೋಬಳಿಗಳಲ್ಲಿ ಶೇ 70 ರಿಂದ 80 ರಷ್ಟು ಮಳೆ ಕಡಿಮೆಯಾಗಿದೆ.

ಬರಗಾಲದಿಂದ ಅಂತರ್ಜಲ ಕಡಿಮೆಯಾಗಿ ಕೊಳವೆಬಾವಿಗಳು ಬತ್ತುತ್ತಿವೆ. ಕಳೆದ ಬಾರಿ ತುಂಬಿ ಹರಿದಿದ್ದ ಕೆರೆ-ಕಟ್ಟೆಗಳು ಈ ಬಾರಿ ನೀರಿಲ್ಲದೆ ಭಣಗುಡುತ್ತಿವೆ. ಕಳೆದ ಬಾರಿ ಯಗಚಿ ಜಲಾಶಯ ತುಂಬಿ ಸಾಕಷ್ಟು ದಿನಗಳ ಕಾಲ ನೀರನ್ನು ಹೊರಬಿಡಲಾಗಿತ್ತು. ಈ ವರ್ಷ ಜಲಾಶಯದಿಂದ ಅಲ್ಪಪ್ರಮಾಣದ ನೀರನ್ನು ಹೊರ ಬೀಡಲಾಗಿತ್ತಾದ್ದರೂ, ಜಲಾಶಯದಲ್ಲಿ ಈಗ ನೀರಿನ ಕೊರತೆ ಕಾಣುತ್ತಿದೆ.

ತಾಲ್ಲೂಕಿನಲ್ಲಿ ಜೂನ್ ನಿಂದ ಅಕ್ಟೋಬರ್‌ವರೆಗೆ ವಾಡಿಕೆಯಂತೆ 69.1 ಸೆಂ.ಮೀ. ಮಳೆ ಆಗಬೇಕಿತ್ತು. ಆದರೆ 51.4 ಸೆಂ.ಮೀ. ಮಳೆಯಾಗಿದ್ದು, ಶೇ 26 ರಷ್ಟು ಮಳೆ ಕಡಿಮೆಯಾಗಿದೆ.

ಮುಂಗಾರಿನಲ್ಲಿ 25,500 ಹೆಕ್ಟೇರ್ ಬಿತ್ತನೆಯಾಗಬೇಕಿತ್ತು. ಆದರೆ 21,235 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಶೇ 17 ರಷ್ಟು ಬಿತ್ತನೆ ಕಡಿಮೆಯಾಗಿದೆ. 12,970 ಹೆಕ್ಟೇರ್ ಮೆಕ್ಕೆಜೋಳ, 818 ಹೆಕ್ಟೇರ್ ರಾಗಿ, 1,205 ಹೆಕ್ಟೇರ್ ಭತ್ತ ಸೇರಿದಂತೆ ಒಟ್ಟು 14,990 ಹೆಕ್ಟೇರ್‌ನಲ್ಲಿ ಬೆಳೆ ನಾಶವಾಗಿದ್ದು, ಅಂದಾಜು ₹96.29ಕೋಟಿ ಬೆಳೆ ನಷ್ಟ ಅಂದಾಜಿಸಲಾಗಿದೆ.

ಕೈಹಿಡಿಯದ ಹಿಂಗಾರು: ಮುಂಗಾರು ಮಳೆ ಕೈಕೊಟ್ಟರೂ, ಹಿಂಗಾರು ಹಂಗಾಮಿನಲ್ಲಾದರೂ ಉತ್ತಮ ಮಳೆಯಾದೀತು ಎನ್ನುವ ರೈತರ ನಿರೀಕ್ಷೆ ಹುಸಿಯಾಗಿದೆ. ಹಿಂಗಾರಿನ ಮಳೆಯೂ ಕಡಿಮೆಯಾಗಿದ್ದು, ಇಡೀ ವರ್ಷ ರೈತಾಪಿ ಜನರು ಬೆಳೆ ಇಲ್ಲದೇ ಕಣ್ಣೀರು ಇಡುವಂತಾಗಿದೆ.

ಹಿಂಗಾರಿನಲ್ಲಿ 2,060 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ ಕೇವಲ 695 ಹೆಕ್ಟೇರ್ ಬಿತ್ತನೆಯಾಗಿದೆ. ಇದರಿಂದಾಗಿ ಈ ವರ್ಷ ರೈತರ ಆರ್ಥಿಕ ಸ್ಥಿತಿ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ.

ಪ್ರತಿ ವರ್ಷ ಒಂದಿಲ್ಲೊಂದು ನೈಸರ್ಗಿಕ ವಿಕೋಪದಿಂದ ಬೆಳೆ ನಷ್ಟ ಅನುಭವಿಸುವುದು ಸಾಮಾನ್ಯವಾಗಿದೆ. ಸರ್ಕಾರಗಳ ನೀತಿಗಳೂ ರೈತರ ಮೇಲೆ ಬರೆ ಎಳೆಯುತ್ತಿವೆ. ಒಂದೆಡೆ ನಮಗೇ ಬೆಳೆ, ಕುಡಿಯಲು ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಇದು ಯಾವ ನ್ಯಾಯ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ಈ ವರ್ಷ ರೈತರ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ರೈತ ದೇಶದ ಬೆನ್ನೆಲುಬು ಎಂಬುದು ಹೇಳಿಕೆಗಷ್ಟೇ ಸೀಮಿತವಾಗಿದೆ. ಬೆನ್ನೆಲುಬಾದ ರೈತನ ಬೆನ್ನೆಲುಬೇ ಈಗ ಬಾಗಿ ನಿಂತಿದೆ. ರಕ್ಷಣೆಗೆ ಧಾವಿಸುವವರು ಯಾರು ಎಂಬ ಪ್ರಶ್ನೆ ರೈತರದ್ದಾಗಿದೆ.

ಬೇಲೂರು ಸಮೀಪದ ದೊಡ್ಡಮೆದ್ದೂರು ಗ್ರಾಮದಲ್ಲಿ ಬರದ ಪರಿಣಾಮ ಮೆಕ್ಕೆಜೋಳದ ಬೆಳೆ ಒಣಗಿ ನಿಂತಿದೆ.
ಬೇಲೂರು ಸಮೀಪದ ದೊಡ್ಡಮೆದ್ದೂರು ಗ್ರಾಮದಲ್ಲಿ ಬರದ ಪರಿಣಾಮ ಮೆಕ್ಕೆಜೋಳದ ಬೆಳೆ ಒಣಗಿ ನಿಂತಿದೆ.
ಬಳ್ಳೂರು ಸ್ವಾಮಿಗೌಡ
ಬಳ್ಳೂರು ಸ್ವಾಮಿಗೌಡ
ಎಚ್.ಕೆ.ಸುರೇಶ್
ಎಚ್.ಕೆ.ಸುರೇಶ್
ರಂಗಸ್ವಾಮಿ
ರಂಗಸ್ವಾಮಿ

ಹಿಂಗಾರು ಹಂಗಾಮಿನಲ್ಲಿ ಕೇವಲ 695 ಹೆಕ್ಟೇರ್‌ನಲ್ಲಿ ಬಿತ್ತನೆ ಯಗಚಿ ಜಲಾಶಯದಿಂದ ಜಮೀನಿಗೆ ಹರಿಯದ ನೀರು 21,235 ಹೆಕ್ಟೇರ್‌ನಲ್ಲಿ ಬಿತ್ತನೆ: 14,990 ಹೆಕ್ಟೇರ್‌ ಬೆಳೆ ನಷ್ಟ

ಬೆಳೆ ಹಾನಿಯ ಸಮೀಕ್ಷೆ ನಡೆಸಿರುವುದು ಕಣ್ಣೊರೆಸುವ ತಂತ್ರ. ಹೋಬಳಿವಾರು ನಷ್ಟದ ಪ್ರಮಾಣದಂತೆ ಸರ್ಕಾರಕ್ಕೆ ಮಾಹಿತಿ ನೀಡುತ್ತಾರೆಯೇ ಹೊರತು ಗ್ರಾಮವಾರು ನಷ್ಟ ತಿಳಿಸುವುದಿಲ್ಲ.
ಬಳ್ಳೂರು ಸ್ವಾಮಿಗೌಡ ರೈತಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ
ಕ್ಷೇತ್ರದ ಬರ ಪರಿಸ್ಥಿತಿಯನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟು ತಾಲ್ಲೂಕನ್ನು ಬರಪಟ್ಟಿಗೆ ಸೇರಿಸಲಾಗಿದೆ. ರೈತರಿಗೆ ಬೆಳೆ ಪರಿಹಾರವನ್ನು ವೈಜ್ಞಾನಿಕವಾಗಿ ನಿಗದಿಪಡಿಸಬೇಕು.
ಎಚ್.ಕೆ.ಸುರೇಶ್ ಶಾಸಕ
ಕಂದಾಯ ಕೃಷಿ ಮತ್ತು ತೋಟಗಾರಿಕಾ ಇಲಾಖೆಯಿಂದ ಬೆಳೆ ಹಾನಿಯ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಪರಿಹಾರದ ಮೊತ್ತ ನಿಗದಿಪಡಿಸಿ ಸರ್ಕಾರ ಬಿಡುಗಡೆಗೊಳಿಸಬೇಕಿದೆ.
ರಂಗಸ್ವಾಮಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT