ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ವರ್ಚಸ್ಸು ಕುಗ್ಗಿದೆ: ಪ್ರಜ್ವಲ್‌

ಪುತ್ರ ಪ್ರಜ್ವಲ್ ಪರ ಪ್ರಚಾರಕ್ಕಿಳಿದ ಭವಾನಿ ರೇವಣ್ಣ
Published 17 ಏಪ್ರಿಲ್ 2024, 13:32 IST
Last Updated 17 ಏಪ್ರಿಲ್ 2024, 13:32 IST
ಅಕ್ಷರ ಗಾತ್ರ

ಹಾಸನ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭವಾನಿ ರೇವಣ್ಣ ಅವರು, ಪುತ್ರ ಪ್ರಜ್ವಲ್ ಪರ ಚುನಾವಣಾ ಪ್ರಚಾರ ಆರಂಭಿಸಿದರು.

ಬುಧವಾರ ನಗರದ ಸೀತಾ ರಾಮಾಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭವಾನಿ ಅವರು, ಎಚ್.ಡಿ. ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಡಾ.ಸಿ.ಎನ್. ಮಂಜುನಾಥ್ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.

ಈ ವೇಳೆ ಮಾತನಾಡಿದ ಭವಾನಿ ರೇವಣ್ಣ, ‘ಹಾಸನ ನಗರಸಭೆಯ 35 ನೇ ವಾರ್ಡ್ ವ್ಯಾಪ್ತಿಯಲ್ಲಿ ನಿರಂತರ ಪ್ರಚಾರ ಮಾಡಲಿದ್ದು, ಏ.25 ರವರೆಗೂ ಜೆಡಿಎಸ್– ಬಿಜೆಪಿ ಸದಸ್ಯರು, ಕಾರ್ಯಕರ್ತರ ಜೊತೆ ಸೇರಿ ಮತಯಾಚನೆ ಮಾಡುವುದಾಗಿ’ ಹೇಳಿದರು‌.

‘ಕಡೂರು ಸೇರಿ ಹಾಸನ ಕ್ಷೇತ್ರದಾದ್ಯಂತ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ಗೆ ಬಹುಮತ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಗುರುವಾರದಿಂದ ವಾರ್ಡ್‌ನಿಂದ ವಾರ್ಡ್ ವ್ಯಾಪ್ತಿಯಲ್ಲಿ ಮನೆ–ಮನೆ ಜಂಟಿ ಪ್ರಚಾರ ಮಾಡುತ್ತೇವೆ. ಕೆಲ ದಿನದಿಂದಲೂ ಹೊಳೆನರಸೀಪುರದಲ್ಲೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿದ್ದೇನೆ. ಎಲ್ಲೆಡೆ ವಾತಾವರಣ ಚೆನ್ನಾಗಿದೆ. ಬಹಮತ ಪಡೆದು ಪ್ರಜ್ವಲ್ ಗೆಲ್ಲಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ದೇಶದಲ್ಲಿ ಪ್ರಧಾನಿ ಮೋದಿ ಅವರಿಗೆ ಅವರದ್ದೇ ಆದ ಸ್ಥಾನಮಾನ ಇದೆ. ಅವರ ಬಗ್ಗೆ ಅಪಾರ ಗೌರವ ಇದೆ. ಅವರಿಂದ ನಮಗೆ ಅನುಕೂಲ ಆಗಲಿದೆ. ಕಾಂಗ್ರೆಸ್ ಬಗ್ಗೆ ಮಾತಾಡಲ್ಲ ನಮ್ಮ ಅಭ್ಯರ್ಥಿ ಬಗ್ಗೆ ಮಾತ್ರ ಮಾತನಾಡುವುದಾಗಿ’ ಭವಾನಿ ಹೇಳಿದರು.

ಇದಕ್ಕೂ ಮುನ್ನ ಸೀತಾ ರಾಮಾಂಜನೇಯ ದೇವಾಲಯಕ್ಕೆ ಬಂದ ಸಂಸದ ಪ್ರಜ್ವಲ್ ರೇವಣ್ಣ ಸಹ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ರಾಹುಲ್ ಗಾಂಧಿ ಬರುತ್ತಿರುವ ಕುರಿತು ಪ್ರತಿಕ್ರಿಯಿಸಿ, ‘ಇದು ದೇಶದ ಚುನಾವಣೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ದೆಹಲಿಯಲ್ಲಿ ಕುಳಿತು ಮತ್ತೊಮ್ಮೆ ಆಡಳಿತ ನಡೆಸುವ ವಿಶ್ವಾಸವಿದೆ. ಅವರ ಸಲಹೆ, ಸಹಕಾರ, ಆಶೀರ್ವಾದದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ’ ಎಂದರು.

‘ಯಾವುದೇ ಕಾಂಗ್ರೆಸ್ ನಾಯಕರು ಬಂದರೂ ವ್ಯತ್ಯಾಸವಾಗುವುದಿಲ್ಲ. ರಾಹುಲ್ ಗಾಂಧಿಯವರ ವರ್ಚಸ್ಸು ಕುಗ್ಗಿ ಹೋಗಿದ್ದು, ಅವರ ಯೋಜನೆ, ಯೋಚನೆ, ಕೆಲಸದ ಬಗ್ಗೆ ಜನರಿಗೆ ಗೊತ್ತಿದೆ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ತಿಳಿಯುವುದಿಲ್ಲ ಎಂಬ ಕಾಲ ಹೋಯಿತು. ಜನರಿಗೆ ಎಲ್ಲವೂ ತಿಳಿಯುತ್ತದೆ. ಸರಿಯಾದ ಅಭ್ಯರ್ಥಿಯನ್ನು ನೋಡಿ ಜನರು ಮತ ಚಲಾಯಿಸಲಿದ್ದಾರೆ ಎಂದರು.

ರಾಜ್ಯ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಜನರು ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

ಗಿರೀಶ್ ಚೆನ್ನವೀರಪ್ಪ, ರಘು ಹೊಂಗೆರೆ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT