ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನರಾಯಪಟ್ಟಣ | ಶೈಕ್ಷಣಿಕ ಪ್ರಗತಿಗೆ ವಿಶೇಷ ಅನುದಾನ

ಪಿಎಂಶ್ರೀ ಯೋಜನೆಗೆ ಆಯ್ಕೆ: 120 ವರ್ಷ ಇತಿಹಾಸ ಇರುವ ಸರ್ಕಾರಿ ಶಾಲೆಗೆ ಹಿರಿಮೆ
ಸಿದ್ದರಾಜು
Published 30 ಜೂನ್ 2024, 7:14 IST
Last Updated 30 ಜೂನ್ 2024, 7:14 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಿಂಭಾಗದ 120 ವರ್ಷದ ಇತಿಹಾಸ ಹೊಂದಿರುವ ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆ 2023-24ನೇ ಶೈಕ್ಷಣಿಕ ಸಾಲಿನಿಂದ ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿದೆ.

ಪಟ್ಟಣದ ಹೃದಯ ಭಾಗದಲ್ಲಿರುವ ಈ ಶಾಲೆ 1904ರಲ್ಲಿ ಆರಂಭವಾಗಿದ್ದು,  ಹಲವು ಗಣ್ಯರು ಈ ಶಾಲೆಯಲ್ಲಿ ಓದಿರುವ ಹೆಗ್ಗಳಿಕೆ ಇದೆ. 2024 -25ನೇ ಶೈಕ್ಷಣಿಕ ಸಾಲಿನಲ್ಲಿ 319 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಕನ್ನಡದ ಮಾಧ್ಯಮದೊಂದಿಗೆ ಕಳೆದ 7 ವರ್ಷದಿಂದ ಆಂಗ್ಲ ಮಾಧ್ಯಮದ ಬೋಧನೆ ಆರಂಭಿಸಲಾಗಿದೆ. ಸ್ಮಾರ್ಟ್ ಕ್ಲಾಸ್ ಸೌಲಭ್ಯ, ವಿಶಾಲವಾದ ಆಟದ ಮೈದಾನ ಇದೆ.

ಶಾಲೆಯ ಒಳಗೆ ಪ್ರವೇಶಿಸುತ್ತಿದ್ದಂತೆ ಗೋಡೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮತ್ತು ಹಲವು ಸಾಧಕರ ಭಾವಚಿತ್ರ, ಮತ್ತವರ ಕೊಡುಗೆ ಇರುವ ಅಂಶಗಳು ಕಾಣಸಿಗುತ್ತವೆ.

ಕೇಂದ್ರ ಸರ್ಕಾರದ ಪಿಎಂಶ್ರೀ ಯೋಜನೆಗೆ (ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ) ಈ ಶಾಲೆ ಆಯ್ಕೆಯಾಗಿದೆ. ಈ ಯೋಜನೆಯಡಿ ಅನುದಾನ ಬಿಡುಗಡೆ ಆಗುತ್ತಿರುವುದರಿಂದ ಹಲವು ಸೌಕರ್ಯ ನೀಡಲಾಗುತ್ತಿದೆ. ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ, ಗ್ರಂಥಾಲಯ, ವಾರದಲ್ಲಿ ಎರಡು ದಿನ 6 ಮತ್ತು 7ನೇ ತರಗತಿಯ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಗುತ್ತಿದೆ. 

ಪ್ರಯೋಗಾಲಯದಲ್ಲಿ ವಿಜ್ಞಾನಿಗಳ ಭಾವಚಿತ್ರ ಮತ್ತು ಅವರು ಸಂಶೋಧನೆ ಮಾಡಿದ ಮಾಹಿತಿ ನೀಡಿರುವುದು, ಸುಲಭದ ಕಲಿಕೆಗೆ ಅವಕಾಶ ನೀಡುತ್ತದೆ. ಋತುಮತಿಯಾದ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ನೀಡಲಾಗುತ್ತಿದೆ.  ಶಿಕ್ಷಕರಿಗೆ ಕಲಿಕಾ ಉಪಕರಣದ ಕಿಟ್‍ಗಳನ್ನು ವಿತರಿಸಲಾಗಿದೆ.

ಹಸಿಕಸ ಮತ್ತು ಒಣಕಸವನ್ನು ವಿಲೇವಾರಿ ಮಾಡಲು 20 ತೊಟ್ಟಿಗಳನ್ನು ಶಾಲೆಯ ಆವರಣದಲ್ಲಿ ಅಲ್ಲಲ್ಲಿ ಇಡಲಾಗಿದೆ. ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇದೆ. ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ  ಮಾಡಿಸಲು ₹50 ಸಾವಿರ ಅನುದಾನ ಬಿಡುಗಡೆಯಾಗಿದೆ. ಜುಲೈ ಮೊದಲ ವಾರದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುತ್ತದೆ.

ಮಧ್ಯಾಹ್ನದ ಬಿಸಿಯೂಟ ಯೋಜನೆಯ ಜೊತೆಗೆ ವಾರದಲ್ಲಿ ಎರಡು ದಿನ ಸಿರಿಧಾನ್ಯದಿಂದ ತಯಾರಿಸಿದ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಇದು ಪೂರಕವಾಗಲಿದೆ. ಹೈಟೆಕ್ ಶೌಚಾಲಯ ನಿರ್ಮಾಣ ಹಂತದಲ್ಲಿದೆ.

ಯೋಗಾಸನದ ತರಬೇತಿಗೆ ಅನುಕೂಲ ಕಲ್ಪಿಸಲು ವಿದ್ಯಾರ್ಥಿಗಳಿಗೆ ಮ್ಯಾಟ್‍ಗಳನ್ನು ನೀಡಲಾಗಿದೆ. ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು ಸೇರಿ ಶಾಲಾ ದುರಸ್ತಿಗೆ ಅನುದಾನ ಬಿಡುಗಡೆಯಾಗಿದೆ.

ಶಾಲೆಯ ಅಭಿವೃದ್ಧಿಯ ದೃಷ್ಟಿಯಿಂದ ಪಿಎಂಶ್ರೀ ಯೋಜನೆಯಿಂದ ಹಂತಹಂತವಾಗಿ ಸಾಕಷ್ಟು ಅನುದಾನ ಹರಿದು ಬರಲಿದೆ. ಶೈಕ್ಷಣಿಕ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ.

ಕಲಿಕೆಯ ವಾತಾವರಣ ಚೆನ್ನಾಗಿರುವುದರಿಂದ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಹೆಚ್ಚಳ ಆಗುತ್ತಿರುವುದು ಆಶಾದಾಯಕ ಬೆಳವಣಿಗೆ. ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಿ ಸಭೆ ಕರೆದು ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಅಸ್ತಿತ್ವಕ್ಕೆ ತಂದು ಶಾಲೆಯ ಪ್ರಗತಿಗೆ  ಅವರ ಸಹಕಾರ ಕೋರಲಾಗುವುದು.

ಈ ಶಾಲೆಯಲ್ಲಿ ಪಿಎಂಶ್ರೀ ಬಾಲವಾಟಿಕ (ಮಕ್ಕಳಮನೆ) ಇದೆ. 28 ಮಕ್ಕಳು ಕಲಿಯುತ್ತಿದ್ದಾರೆ. ಕಲಿಕೆಯ ದೃಷ್ಟಿಯಿಂದ ಗೋಡೆಗಳ ಮೇಲೆ ಅಂದವಾಗಿ ಚಿತ್ರಗಳನ್ನು ರಚಿಸಲಾಗಿದೆ. 

ರಾಜ್ಯ, ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುವ ಕ್ರೀಡಾಪಟುಗಳು ಮತ್ತು ವಿಜ್ಞಾನಿಗಳ ಭಾವಚಿತ್ರವನ್ನು ಶಾಲೆಯ ಗೋಡೆಗಳಲ್ಲಿ  ಅಳವಡಿಸಲಾಗುವುದು. ಇದರಿಂದ ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಡಿ.ಜಿ. ಪ್ರಕಾಶ್.

ಶಾಲೆಯಲ್ಲಿ ವಾರದಲ್ಲಿ ಎರಡು ದಿನ ಕರಾಟೆ ತರಬೇತಿ ನೀಡಲಾಗುತ್ತದೆ
ಶಾಲೆಯಲ್ಲಿ ವಾರದಲ್ಲಿ ಎರಡು ದಿನ ಕರಾಟೆ ತರಬೇತಿ ನೀಡಲಾಗುತ್ತದೆ
ಡಿ.ಜಿ. ಪ್ರಕಾಶ್
ಡಿ.ಜಿ. ಪ್ರಕಾಶ್
ಸಿಮ್ರಾನ್
ಸಿಮ್ರಾನ್
ಎಚ್.ಎನ್. ದೀಪಾ
ಎಚ್.ಎನ್. ದೀಪಾ

 ವಾರದಲ್ಲಿ ಎರಡು ದಿನ ಸಿರಿಧ್ಯಾನದ ಆಹಾರ  ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ

ಶಾಲೆಗೆ ಶಾಸಕ ಸಿ.ಎನ್. ಬಾಲಕೃಷ್ಣ ವೈಯಕ್ತಿಕವಾಗಿ 50 ಡೆಸ್ಕ್‌ಗಳನ್ನು ನೀಡಿದ್ದಾರೆ. ಹೆಚ್ಚುವರಿಯಾಗಿ 25 ಡೆಸ್ಕ್ ನೀಡಲು ಒಪ್ಪಿದ್ದಾರೆ. ಬಿಸಿಯೂಟ ಬಡಿಸಲು 2 ಟ್ರಾಲಿಗಳನ್ನು ನೀಡಿದ್ದಾರೆ

-ಡಿ.ಜಿ. ಪ್ರಕಾಶ್ ಮುಖ್ಯ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚನ್ನರಾಯಪಟ್ಟಣ

ಶಿಕ್ಷಣದ ಜೊತೆಗೆ ಯೋಗಾಸನ ಕರಾಟೆ ತರಬೇತಿ ಮತ್ತು ಪೌಷ್ಟಿಕಾಂಶ ಹೆಚ್ಚಿಸಲು ಸಿರಿಧ್ಯಾನ ನೀಡಲಾಗುತ್ತದೆ. ಉತ್ತಮ ಪ್ರಯೋಗಾಲಯ ಇದೆ. ಪಠ್ಯ ಪಠ್ಯೇತರ ಚಟುವಟಿಕೆಗೆ ಶಿಕ್ಷಕರು ಪೋತ್ಸಾಹ ನೀಡುತ್ತಾರೆ

- ಸಿಮ್ರಾನ್ 7ನೇ ತರಗತಿ ವಿದ್ಯಾರ್ಥಿ

ಕೇಂದ್ರ ಸರ್ಕಾರದ ಪಿಎಂಶ್ರೀ ಯೋಜನೆಯಡಿ ಹಿರೀಸಾವೆ ಶಾಸಕರ ಮಾದರಿ ಶಾಲೆ ಆಯ್ಕೆಯಾಗಿದೆ. ಚನ್ನರಾಯಪಟ್ಟಣದ ಪೇಟೆ ಆನೆಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅನುಮೋದನೆ ಪಡೆದಿದೆ

- ಎಚ್.ಎನ್. ದೀಪಾ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನರಾಯಪಟ್ಟಣ

ಶತಮಾನೋತ್ಸವ ಆಚರಣೆ   ಖಾಸಗಿ ಶಾಲೆಗೆ ಪೈಪೋಟಿ ನೀಡುವಂತೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ತನ್ನತನವನ್ನು ಉಳಿಸಿಕೊಂಡಿರುವ ಶಾಲೆಗೆ ಈಗ 120ವರ್ಷ ಸಂದಿದೆ. ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಬೇಕು ಎಂಬುದು ವಿದ್ಯಾರ್ಥಿಗಳ ಆಶಯ. ಈ  ಹಿಂದೆ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ಮಾತುಕತೆ ನಡೆಯಿತಾದರೂ ಅನುಷ್ಠಾನಕ್ಕೆ ಬರಲಿಲ್ಲ. ಜನಪ್ರತಿನಿಧಿಗಳು ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಶತಮಾನೋತ್ಸವ ಆಚರಿಸಿದರೆ ಶಾಲೆಯ ಪರಿಚಯ ಮತ್ತಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಹಿರಿಯ ವಿದ್ಯಾರ್ಥಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT