ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ದಾಟಿದ ಕೊರೊನಾ ಪ್ರಕರಣ

ಚಿಕಿತ್ಸೆ ಸ್ಪಂದಿಸದೆ ಹತ್ತು ಮಂದಿ ಸಾವು
Last Updated 28 ಏಪ್ರಿಲ್ 2021, 13:06 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ಪ್ರಕರಣಗಳ ಸಂಖ್ಯೆ ಸಾವಿರ ದಾಟಿದೆ. ಬುಧವಾರ ಹೊಸದಾಗಿ 1031 ಮಂದಿಗೆ ಕೋವಿಡ್ 19 ದೃಢಪಟ್ಟಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಹತ್ತು ಮಂದಿ ಅಸುನೀಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 37,890ಕ್ಕೆ ಏರಿದೆ. 31502 ಜನರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. 5832 ಸಕ್ರಿಯ ಪ್ರಕರಣಗಳ ಪೈಕಿ 72 ಮಂದಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ಕೋವಿಡ್‌ ಕಾಯಿಲೆಗೆ ಈವರೆಗೆ ಮೃತಪಟ್ಟ ಸಂಖ್ಯೆ 556 ತಲುಪಿದೆ.

ಎಂಟು ದಿನಗಳಲ್ಲಿ 53 ಜನರು ಮೃತಪಟ್ಟಿದ್ದಾರೆ. ಕಳೆದ ಮೂರು ದಿನಗಳಿಂದ ನಿತ್ಯ ಹತ್ತು ಮಂದಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗುತ್ತಿದ್ದಾರೆ. ಹಾಸನ ತಾಲ್ಲೂಕಿನ ಅತಿ ಹೆಚ್ಚು ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ.

ಹೊಸದಾಗಿ ಆಲೂರು 45, ಅರಕಲಗೂಡು 106, ಅರಸೀಕೆರೆ 134, ಬೇಲೂರು 76, ಚನ್ನರಾಯಪಟ್ಟಣ 97, ಹಾಸನ 367, ಹೊಳೆನರಸೀಪುರ 90, ಸಕಲೇಶಪುರ 103, ಇತರೆ ಜಿಲ್ಲೆಯ 13 ಮಂದಿಗೆ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ತಿಳಿಸಿದ್ದಾರೆ.

ಶವಸಂಸ್ಕಾರಕ್ಕೆ ಪರದಾಟ:

ಕೋವಿಡ್‌ ಕಾಯಿಲೆಯಿಂದ ಮೃತಪಡುವವರ ಸಂಖ್ಯೆ ಹೆಚ್ಚುತ್ತಿದ್ದಂತೆ ಅಂತ್ಯಸಂಸ್ಕಾರಕ್ಕೂ ಪರದಾಡುವಂತೆ ಮಾಡಿದೆ.
ಹಾಸನದ ಗೊರೂರು ರಸ್ತೆಯ ಬಿಟ್ಟಗೊಡನಹಳ್ಳಿ ಸಮೀಪದ ಹಿಂದೂ ರುದ್ರಭೂಮಿಯಲ್ಲಿ ಏಕಕಾಲದಲ್ಲಿ ಐದು ಶವ ಸುಡಲು ವ್ಯವಸ್ಥೆ ಇದೆ. ಆದರೆ ಅಷ್ಟು ಶವ ಸುಡಲು ಇರುವುದು ಒಬ್ಬರೇ ಸಿಬ್ಬಂದಿ.

ಕಳೆದ ಮೂರು ದಿನಗಳಿಂದ ನಿತ್ಯವೂ ಹತ್ತು ಶವಗಳನ್ನು ಸ್ಮಶಾನಕ್ಕೆ ತರಲಾಗುತ್ತಿದೆ. ಬೆಳಿಗ್ಗೆ 8ಕ್ಕೆ ಹೆಣ ಸುಡಲು ಆರಂಭಿಸಿದರೂ ಹತ್ತನೇ ಶವ ದಹಿಸುವ ವೇಳೆಗೆ ರಾತ್ರಿ ಎಂಟು ಗಂಟೆಯಾಗುತ್ತಿದೆ.ಏಕಕಾಲಕ್ಕೆ ಎರಡು, ಮೂರು ಶವಗಳು ಬಂದರೆ ಒಬ್ಬರೇ ಸೌದೆ ಜೋಡಿಸಬೇಕು. ಅಂತ್ಯ ಸಂಸ್ಕಾರ ನೆರವೇರಿಸಬೇಕು. ಬಳಿಕ ಮತ್ತೊಂದು ಶವಸಂಸ್ಕಾರಕ್ಕೆ ಸಿದ್ಧತೆ ಮಾಡಬೇಕು. ಇದಕ್ಕೆಲ್ಲಾ ಸಾಕಷ್ಟು ಸಮಯವಕಾಶಬೇಕು.

ಕೋವಿಡ್‌ನಿಂದ ಮೃತಪಟ್ಟವರ ಶವಗಳನ್ನು ಸಂಬಂಧಿಕರು ಬಯಸಿದಲ್ಲಿ ಅವರ ಜಮೀನಿನಲ್ಲಿಯೇ ನಿಯಮಾನುಸಾರ ಹತ್ತು ಅಡಿ ಆಳ ತೆಗೆದು, ವೈದ್ಯರ ಸಲಹೆ ಅನ್ವಯ ಸಂಸ್ಕಾರ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ.ಆದರೆ ಜಮೀನು ಇಲ್ಲದವರು ಸ್ಮಶಾನದಲ್ಲಿಯೇ ಮಾಡಬೇಕಾದ ಪರಿಸ್ಥಿತಿ ಇದೆ.

ಹಿಂದೂ ರುದ್ರಭೂಮಿಗೆ ವಿದ್ಯುತ್ ಚಿತಾಗಾರಬೇಕೆಂಬ ಹಲವು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ. ಹಾಗಾಗಿ ಸೌದೆಯಲ್ಲೇ ಸುಡಬೇಕಾಗಿದೆ. ನಗರಸಭೆ ರುದ್ರಭೂಮಿ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದು, ರಸ್ತೆ, ನೀರು, ಕೊಠಡಿ ವ್ಯವಸ್ಥೆ ತಕ್ಕ ಮಟ್ಟಿಗೆ ಕಲ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT