ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಮಾರ್ಚ್‌ಗೆ ಹೊರ ವರ್ತುಲ ರಸ್ತೆ ಪೂರ್ಣ

ದ್ವಿಪಥ ನಿರ್ಮಾಣ ಕಾಮಗಾರಿ ಚುರುಕು
Last Updated 17 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಹಾಸನ: ವಾಹನ ಸವಾರರ ದಶಕದ ಕನಸಾಗಿದ್ದ ನಗರದ ಹೊರ ವರ್ತುಲ ರಸ್ತೆ ಕಾಮಗಾರಿ ಮಾರ್ಚ್‌ ವೇಳೆಗೆ
ಪೂರ್ಣಗೊಳ್ಳಲಿದೆ.

ನಗರದೊಳಗೆ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಎರಡು ದಶಕದ ಹಿಂದೆಯೇ ಚಾಲನೆ ನೀಡಲಾಗಿದ್ದ ಡೈರಿ ವೃತ್ತದಿಂದ ಬೇಲೂರು ರಸ್ತೆವರೆಗಿನ ಸುಮಾರು 8 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗೆ ಹಲವು ರೀತಿಯ ವಿಘ್ನಗಳು ಎದುರಾಗಿದ್ದವು. ಒಟ್ಟಾರೆ ₹7.5 ಕೋಟಿ ವೆಚ್ಚದ ಕಾಮಗಾರಿ ಈಗ ಭರದಿಂದ ಸಾಗಿದೆ.

ಡೈರಿ ವೃತ್ತದಿಂದ ಸಾಲಗಾಮೆ ರಸ್ತೆವರೆಗೆ ನಾಲ್ಕುಪಥದ ರಸ್ತೆ ಕೆಲಸ ತ್ವರಿತವಾಗಿ ಪೂರ್ಣಗೊಂಡಿದೆ. ಆದರೆ, ಸಾಲಗಾಮೆ ರಸ್ತೆಯಿಂದ ಬೇಲೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮುಂದುವರಿದ ರಿಂಗ್‌ ರಸ್ತೆ ಕಾಮಗಾರಿ ಹಲವು ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ರಾಜಕೀಯದ ಜತೆಗೆ ರಸ್ತೆಗೆ ಭೂಮಿ ನೀಡಿದ್ದ ರೈತರು ಪರಿಹಾರ ನೀಡಿಲ್ಲವೆಂದು ಕಾಮಗಾರಿಗೆ ಅಡ್ಡಿಪಡಿಸಿದ್ದರು.

ನನೆಗುದಿಗೆ ಬಿದ್ದಿದ್ದ ಕಾಮಗಾರಿ 2018 ರಿಂದ ಮತ್ತೆ ವೇಗ ಪಡೆದುಕೊಂಡಿತು. ಒಂದು ಕಡೆಯಿಂದ ಮತ್ತೊಂದು ಕಡೆಗೆ
ನೀರು ಹರಿಯಲು 160 ಮೀಟರ್‌ ಉದ್ದದ ದೊಡ್ಡ ಬಾಕ್ಸ್‌ ಚರಂಡಿ ಮಾಡಿ ಹಾಗೆಯೇ ಬಿಡಲಾಗಿತ್ತು. ನಂತರ
ಉದ್ದೂರುವರೆಗೆ ಒಂದು ಬದಿಯ ರಸ್ತೆ ಮಾಡಲಾಯಿತು. ಪರಿಹಾರ ನೀಡಲಿಲ್ಲವೆಂದು ರೈತರು ಮತ್ತೆ ಅಡ್ಡಿಪಡಿಸಿದರು.

ಶಾಸಕ ಪ್ರೀತಂ ಗೌಡ ಅನುದಾನ ಬಿಡುಗಡೆ ಮಾಡಿಸಿದ ಬಳಿಕ ಸಾಲಗಾಮೆ ರಸ್ತೆಯಿಂದ ಬೇಲೂರು ರಸ್ತೆವರೆಗೆ ಒಂದು
ಭಾಗದ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಯಿತು. ಈಗ ವಾಹನಗಳು ಸಂಚರಿಸುತ್ತಿವೆ. ಮತ್ತೊಂದು ಪ್ಯಾಕೇಜ್‌ನಲ್ಲಿ ಎರಡೂ ಕಡೆ ಚರಂಡಿ ಹಾಗೂ ಮತ್ತೊಂದು ಭಾಗದ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಎರಡೂ ಕಡೆ ಬಾಕ್ಸ್‌ ಚರಂಡಿ ನಿರ್ಮಾಣ ಕೆಲಸ ಪೂರ್ಣಗೊಂಡಿದೆ.

‘ಸಾಲಗಾಮೆ ರಸ್ತೆಯಿಂದ ಬೇಲೂರು ರಸ್ತೆವರೆಗೆ ದ್ವಿಪಥ ರಸ್ತೆಯನ್ನೇ ನಿರ್ಮಿಸಲಾಗುತ್ತಿದೆ. ಡೈರಿ ವೃತ್ತದಿಂದ
ಸಾಲಗಾಮೆ ರಸ್ತೆವರೆಗೆ ಈಗಾಗಲೇ ನಾಲ್ಕು ಪಥದ ರಸ್ತೆ ಕಾಮಗಾರಿ ಮುಗಿದಿದೆ. ಅಲ್ಲಿಂದ ಮುಂದಕ್ಕೆ ವಾಹನ ದಟ್ಟಣೆ
ತಪ್ಪಿಸುವ ಉದ್ದೇಶದಿಂದ ದ್ವಿಪಥ ಮಾತ್ರ ನಿರ್ಮಾಣ ಮಾಡಲಾಗುತ್ತಿದೆ. ಮಾರ್ಚ್‌ ವೇಳೆಗೆ ಎರಡೂ ಕಡೆ ಡಾಂಬರುರಸ್ತೆ ಕಾಮಗಾರಿ ಮುಗಿಸಲು ನಿರ್ಧರಿಸಲಾಗಿದೆ. ಅನುದಾನ ಬಿಡುಗಡೆಯಾದರೆ ಭವಿಷ್ಯದಲ್ಲಿ ನಾಲ್ಕು ಪಥದ ರಸ್ತೆಯಾಗಲಿದೆ’ ಎಂದು ಲೋಕೋಪಯೋಗಿ ಎಂಜಿನಿಯರ್‌ ಚನ್ನೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT