ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣಬೆಳಗೊಳ: ಬಳಕೆಗೆ ಬಾರದ ತ್ಯಾಜ್ಯ ಸಂಸ್ಕರಣಾ ಘಟಕ

ಒಂದೂವರೆ ಎಕರೆ ಪ್ರದೇಶದಲ್ಲಿ ₹3 ಕೋಟಿ ವೆಚ್ಚದಲ್ಲಿ ನಿರ್ಮಾಣ
Last Updated 26 ಜುಲೈ 2021, 2:55 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ತಂತ್ರಜ್ಞಾನದತ್ಯಾಜ್ಯ ಸಂಸ್ಕರಣಾ ಘಟಕ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಿದೆ.

ಬಾಹುಬಲಿ ಎಂಜಿನಿಯರಿಂಗ್‌ ಕಾಲೇಜು ಹಾಸ್ಟೆಲ್‌ ಬಳಿಯ ಒಂದೂವರೆ ಎಕರೆ ಪ್ರದೇಶದಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಹೋಬಳಿ ಮಟ್ಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ₹ 3 ಕೋಟಿ ವೆಚ್ಚದ ಒಳ ಚರಂಡಿ ಸಂಸ್ಕರಣಾ ಘಟಕಕ್ಕೆ 2018ರಲ್ಲಿ ಚಾಲನೆ ನೀಡಲಾಗಿತ್ತು. ಇದಕ್ಕಾಗಿ10 ಅಡಿ ಆಳದ 7.5 ಮೀಟರ್‌ ಸುತ್ತಳತೆಯ ನೆಲ ಮಟ್ಟದಲ್ಲಿ ತ್ಯಾಜ್ಯ ಸಂಗ್ರಹದ ಸಂಸ್ಕರಣಾಟ್ಯಾಂಕ್‌ ನಿರ್ಮಿಸಲಾಗಿದೆ.

ಪಂಚಾಯಿತಿ ದಾಖಲೆ ಪ್ರಕಾರ 1,450 ಮನೆಗಳು ನಲ್ಲಿ ಸಂಪರ್ಕ ಹೊಂದಿದ್ದು, ಈ ಪೈಕಿ 1,250 ಮಾತ್ರ ಯುಜಿಡಿ ಸಂಪರ್ಕ ಇದೆ. ಅನಧಿಕೃತವಾಗಿ ಮನೆ, ಕಾಲೇಜು, ಹಾಸ್ಟೆಲ್‌ಗಳು ಯುಜಿಡಿ ಸಂಪರ್ಕ ಪಡೆಯದೇ ತೆರೆದ ಒಳ ಚರಂಡಿಗೆ ತ್ಯಾಜ್ಯ ಬಿಡುತ್ತಿರುವುದರಿಂದ ಸಮಸ್ಯೆ ಉಲ್ಬಣವಾಗಿದೆ. ಅಲ್ಲದೇ ಪಟ್ಟಣದ ತ್ಯಾಜ್ಯ ಸಹ ಘಟಕ ಸಮೀಪದ ರಾಚೇನಹಳ್ಳಿ ಕೆರೆಗೆ ಹರಿಸುವುದರಿಂದ ಗಬ್ಬು ವಾಸನೆಬೀರುತ್ತಿದೆ.

ಒಳಚರಂಡಿ ಸಂಪರ್ಕ ಪಡೆದ ಮನೆಗಳ ತ್ಯಾಜ್ಯ ಪೈಪ್‌ಗಳ ಮೂಲಕ ಹರಿದು ಬಂದು ಈ ಟ್ಯಾಂಕ್‌ನಲ್ಲಿ ಶೇಖರಣೆಯಾಗುತ್ತದೆ. ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶಗಳ ತ್ಯಾಜ್ಯವನ್ನು ಎಂಬಿಬಿಆರ್‌ ತಾಂತ್ರಿಕತೆಯ 1.5 ದಶಲಕ್ಷ ಲೀಟರ್‌ ಸಾಮರ್ಥ್ಯದ 7.5 ಅಶ್ವಶಕ್ತಿಯ 4 ಯಂತ್ರಗಳ ಮೂಲಕ ಸಂಸ್ಕರಿಸಲಾಗುತ್ತದೆ. ನಿತ್ಯ 5 ಲಕ್ಷ ಲೀಟರ್‌ ಕಚ್ಚಾ ನೀರು ಸಂಸ್ಕರಿಸುವ ಸಾಮರ್ಥ್ಯವನ್ನು ಯಂತ್ರಗಳು ಹೊಂದಿದ್ದು, 5 ಅಶ್ವಶಕ್ತಿಯ 3 ಮೋಟಾರ್‌ ಅಳವಡಿಸಲಾಗಿದೆ.

ಸಾರ್ವಜನಿಕರ ಆರೋಗ್ಯದ ದೃಷ್ಟಿ ಯಿಂದಾಗಿ ಜೈನ ಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಒತ್ತಾಸೆಗೆ ಸರ್ಕಾರ ಸಮ್ಮತಿಸಿ, ಒಳ ಚರಂಡಿ ನೀರು ಸಂಸ್ಕರಣೆಯಾಗಿ ಮರು ಬಳಕೆಯಾಗಲಿ ಎಂಬ ಸದುದ್ದೇಶ ದಿಂದ ಸುಸಜ್ಜಿತ ಘಟಕವನ್ನು ಕ್ಷೇತ್ರಕ್ಕೆ ಒದಗಿಸಿತ್ತು.

ಈ ಘಟಕದಿಂದ ಸಂಸ್ಕರಣಗೊಂಡ ತ್ಯಾಜ್ಯವು ಘನೀಕೃತ ಮತ್ತು ಶುದ್ಧೀಕರಿ ಸಿದ ನೀರಾಗಿ ಬೇರ್ಪಟ್ಟು ಪ್ರತ್ಯೇಕ ವಾಗಿ ಎಂಬಿಬಿಆರ್‌ ಟ್ಯಾಂಕ್‌ಗೆ ಸಂಗ್ರಹಗೊ ಳ್ಳುತ್ತದೆ. ಅದಕ್ಕೆ ಪಾಲಿ, ಕ್ಲೋರಿನ್‌ ಬೆರಸಿ ಸ್ಯಾಂಡ್‌ ಫಿಲ್ಟರ್‌ ನಂತರ ಶುದ್ಧೀಕರಿಸಿದ ಈ ನೀರು ವಾಸನೆ ರಹಿತವಾಗಿದ್ದು, ಕೃಷಿ, ಕಟ್ಟಡ ನಿರ್ಮಾಣ, ಶೌಚಾಲಯ ಸ್ವಚ್ಛತೆಗೆ ಬಳಸಬಹುದು. ಈ ಘಟಕ ದಿಂದ ಬರುವ ಗೊಬ್ಬರವನ್ನು ಆದಾಯದ ಮೂಲವಾಗಿಯೂ ಬಳಸಿಕೊಳ್ಳಬಹುದು.

ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗೂ ಗ್ರಾಮ ಪಂಚಾಯಿತಿ ಸಮನ್ವಯದ ಕೊರತೆ ಒಂದೆಡೆಯಾದರೆ, ಅಧಿಕಾರಿಗಳ ನಿರ್ಲಕ್ಷ್ಯತೆ ಯಿಂದ ಯೋಜನೆ ಹಳ್ಳ ಹಿಡಿದಿದೆ. ತ್ಯಾಜ್ಯದ ಶುದ್ಧೀಕರಿಸಿದ ನೀರು ತೆರೆದ ಹೊಂಡಕ್ಕೆ ಬಿಡಲಾಗುತ್ತಿದೆ. ಆದರೆ, ಅನಧಿಕೃತ ಒಳಚರಂಡಿ ತ್ಯಾಜ್ಯವೂ ತೆರೆದ ಒಳ ಚರಂಡಿ ಮುಖಾಂತರ ಶುದ್ಧೀಕರಿಸಿ ಬಿಡುತ್ತಿರುವ ಹೊಂಡ ಸೇರುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.

‘ಜಿಲ್ಲಾಡಳಿತ ಈಗಲಾದರೂ ತಪ್ಪನ್ನು ಸರಿಪಡಿಸಿದರೆ ಯೋಜನೆ ಪರಿಪೂರ್ಣತೆ ಹೊಂದಿದಂತಾಗುತ್ತದೆ. ಇಲ್ಲದಿದ್ದರೆ ಹೆಸರಿಗೆ ಮಾತ್ರ ತ್ಯಾಜ್ಯ ಘಟಕವಾಗುತ್ತದೆ’ ಎಂದು ಪ್ರಗತಿಪರ ಚಿಂತಕ ಎಚ್‌ ನಾಗರಾಜು ಆರೋಪಿಸುತ್ತಾರೆ.

‘ಸರ್ಕಾರದಿಂದ ವಾರ್ಷಿಕ ₹ 15 ಲಕ್ಷ ಅನುದಾನ ಬರುತ್ತದೆ. ಸಂಸ್ಕರಣಾ ಘಟಕದ ವಿದ್ಯುತ್‌ ಬಿಲ್ ತಿಂಗಳಿಗೆ ₹45 ಸಾವಿರದಿಂದ ₹60 ಸಾವಿರ ಇದೆ. ಕಂತುಗಳಲ್ಲಿ ಪಾವತಿಸಿದರೂ ಇನ್ನೂ ₹ 7 ಲಕ್ಷ ಬಾಕಿ ಇದೆ’ ಎಂದು ಕಾರ್ಯದರ್ಶಿ ಎಂ.ಆರ್‌.ಮಧುರಾ ಹೇಳಿದರು.

ಗಂಗಮಾಳಮ್ಮನ ಕೊಪ್ಪಲಿನಲ್ಲಿ 16 ಕುಟುಂಬಗಳು ಈ ಹೊಂಡಕ್ಕೆ ಹೊಂದಿಕೊಂಡಂತೆ ವಾಸಿಸುತ್ತವೆ. ತಾಂತ್ರಿಕ ಕಾಲೇಜಿನ ವಸತಿ ನಿಲಯ ಮತ್ತು ಚಹಾದ ಅಂಗಡಿಗಳೂ ಇವೆ.

‘ನಿತ್ಯ ದುರ್ವಾಸನೆ ಹಾಗೂ ಸೊಳ್ಳೆಗಳಿಂದ ಯಾತನೆ ಅನುಭವಿಸುವಂತಾ ಗಿದೆ’ ಎಂದು ಗಂಗಮಾಳಮ್ಮನ ಕೊಪ್ಪಲಿನ ನಿಂಗನಾಯ್ಕ, ಭದ್ರನಾಯ್ಕ, ಲಕ್ಷ್ಮಮ್ಮ, ಅಳಲು ತೋಡಿಕೊಂಡರೆ, ಚಹಾದ ಅಂಗಡಿಯ ವಿಜಯಕುಮಾರ ಮತ್ತು ಕೆ.ಕೆ. ರವಿ, ‘ ಈ ಸಮಸ್ಯೆಗೆ ಶಾಶ್ವತ ಪರಿಹಾರ ಯಾವಾಗ’ ಎಂದು ಪ್ರಶ್ನಿಸುತ್ತಾರೆ.

‘ಅನೇಕ ಕಡೆ ಕಾಮಗಾರಿ ಅಪೂರ್ಣವಾಗಿದ್ದು, ಜಿಲ್ಲಾಡಳಿತ ಕೂಡಲೇ ಘಟಕ ಸರಿಪಡಿಸಲುನಿಗಾ ವಹಿಸಬೇಕು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಗ್ರಾಮಪಂಚಾಯಿತಿಗೆ ಅಧಿಕೃತವಾಗಿ ಸಂಸ್ಕರಣಾ ಘಟಕ ಹಸ್ತಾಂತರಿಸಿಲ್ಲ’ ಎಂದು ಗ್ರಾಮಪಂಚಾಯಿತಿ ಅಧ್ಯಕ್ಷೆ ಲತಾ ರಮೇಶ್‌ ಆರೋಪಿಸಿದರು.

‘ಸರ್ಕಾರದಿಂದ ವಾರ್ಷಿಕ ₹ 15 ಲಕ್ಷ ಅನುದಾನ ಬರುತ್ತದೆ. ಸಂಸ್ಕರಣಾ ಘಟಕದ ವಿದ್ಯುತ್‌ ಬಿಲ್ ತಿಂಗಳಿಗೆ ₹ 45 ಸಾವಿರದಿಂದ ₹ 60 ಸಾವಿರ ಇದೆ. ಕಂತುಗಳಲ್ಲಿ ಪಾವತಿಸಿದರೂ ಇನ್ನೂ₹ 7 ಲಕ್ಷ ಬಾಕಿ ಇದೆ’ ಎಂದು ಕಾರ್ಯದರ್ಶಿ ಎಂ.ಆರ್‌.ಮಧುರಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT