ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡೂರು: ಸಡಗರದ ಮಾಲತೇಶ ರಥೋತ್ಸವ

Published 31 ಮೇ 2024, 13:27 IST
Last Updated 31 ಮೇ 2024, 13:27 IST
ಅಕ್ಷರ ಗಾತ್ರ

ಅಕ್ಕಿಆಲೂರು: ಹಾನಗಲ್ ತಾಲ್ಲೂಕಿನ ಆಡೂರು ಗ್ರಾಮದಲ್ಲಿ ಆರಾಧ್ಯ ದೇವ ಮಾಲತೇಶ ದೇವರ ಮಹಾ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇತ್ತೀಚೆಗೆ ಭಕ್ತರ ಹರ್ಷದ ಹೊನಲು, ಏಳುಕೋಟಿ ಚಾಂಗಮಲೋ... ಎಂಬ ಉದ್ಘೋಷದೊಂದಿಗೆ ಸಡಗರದಿಂದ ನೆರವೇರಿದವು.

ಜಾತ್ರಾ ಮಹೋತ್ಸವದ ಸಂಭ್ರಮಕ್ಕೆ ನಾಡಿನ ಮೂಲೆಮೂಲೆಯಿಂದ ಆಗಮಿಸಿದ್ದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತ ಸಮೂಹ ಸಾಕ್ಷಿಯಾಯಿತು. ಮಾಲತೇಶ ದೇವರ ಉತ್ಸವ ಮೂರ್ತಿಯುಳ್ಳ ಮಹಾರಥೋತ್ಸವ ಗುಡ್ಡದ ಮೇಲ್ಭಾಗದಲ್ಲಿರುವ ದೇವಸ್ಥಾನದ ಸನ್ನಿಧಿಯಿಂದ ಕೆಳಭಾಗದತ್ತ ಆಗಮಿಸುತ್ತಿದ್ದಂತೆಯೇ ಭಕ್ತರ ಸಂಭ್ರಮ ಇಮ್ಮಡಿಗೊಂಡಿತು.

ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸದ್ಭಕ್ತ ಮಂಡಳಿ ಸದಸ್ಯರು ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಡೊಳ್ಳು, ಭಾಜಾ, ಭಜಂತ್ರಿ, ಝಾಂಜ್ ಸೇರಿದಂತೆ ಇನ್ನಿತರ ವಾದ್ಯ ಮೇಳಗಳು ಸಡಗರ ಹೆಚ್ಚಿಸಿದ್ದವು. ಇನ್ನೊಂದೆಡೆ ಯುವ ಸಮೂಹ ವಾದ್ಯ ಮೇಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನಲಿದಾಡಿದರು.

ಮಹಾರಥಕ್ಕೆ ಕಟ್ಟಲಾಗಿದ್ದ ಹಗ್ಗವನ್ನು ಎಳೆಯಲಾರಂಭಿಸುತ್ತಿದ್ದಂತೆಯೇ ನೆರೆದ ಭಕ್ತರ ಹರ್ಷದ ಕಟ್ಟೆ ಒಡೆಯಿತು. ಏಳುಕೋಟಿ ಏಳುಕೋಟಿಗೋ.. ಚಾಂಗಮಲೋ... ಹಷೋದ್ಘಾರ ಮುಗಿಲು ಮುಟ್ಟಿತು. ರಥದ ಕಳಸಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿಭಾವ ಪ್ರದರ್ಶಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಆಡೂರು ಮಾಲತೇಶ ರಥೋತ್ಸವದ ಕಳಸ ವೀಕ್ಷಿಸಿದರೆ ಶುಭ ಫಲ ಎನ್ನುವ ನಂಬಿಕೆಯ ಹಿನ್ನೆಲೆಯಲ್ಲಿ ನಾಡಿನ ವಿವಿಧೆಡೆಯಿಂದ ನೂರಾರು ನವ ದಂಪತಿಗಳು ಇಲ್ಲಿಗೆ ಆಗಮಿಸಿದ್ದರು. ಹಾಲುಮತಸ್ಥರು ತಮ್ಮ ಕುರಿ ಹಿಂಡಿನೊಂದಿಗೆ ಇಲ್ಲಿಗೆ ಆಗಮಿಸಿ ರಥದ ಸುತ್ತ ಪ್ರದಕ್ಷಿಣೆ ಹಾಕಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೀಗೆ ಮಾಡುವುದರಿಂದ ಕುರಿಗಳಿಗೆ ಯಾವುದೇ ರೋಗ ಬಾಸದು ಎಂಬ ನಂಬಿಕೆ ಈ ಸಮುದಾಯದಲ್ಲಿ ಬಲವಾಗಿದೆ.

ರಥೋತ್ಸವಕ್ಕೂ ಮುನ್ನ ದೇವಸ್ಥಾನದಲ್ಲಿ ಬೆಳಿಗ್ಗೆ ನಿತ್ಯವಿಧಿಗಳೊಂದಿಗೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯೊಂದಿಗೆ ನಡೆದವು. ಮಾಲತೇಶ ದೇವರ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಪೂಜಾ ವಿಧಿಗಳು ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT