ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ ಎಪಿಎಂಸಿ ₹19.12 ಕೋಟಿ ಸೆಸ್‌ ಸಂಗ್ರಹ

ಗುರಿ ಮೀರಿದ ಸಾಧನೆ
Published 6 ಏಪ್ರಿಲ್ 2024, 16:20 IST
Last Updated 6 ಏಪ್ರಿಲ್ 2024, 16:20 IST
ಅಕ್ಷರ ಗಾತ್ರ

ಬ್ಯಾಡಗಿ (ಹಾವೇರಿ ಜಿಲ್ಲೆ): ಇಲ್ಲಿಯ ಕೃಷಿ ಉತ್ಪನ್ನ ಮಾರುಟ್ಟೆ ಸಮಿತಿ (ಎಪಿಎಂಸಿ) ಕಳೆದ ಹಣಕಾಸು (2023-24) ವರ್ಷದಲ್ಲಿ ಒಟ್ಟಾರೆ ₹3,187 ಕೋಟಿ ವಹಿವಾಟು ನಡೆಸಿ ₹19.12 ಕೋಟಿ (₹ 0.60ರಂತೆ) ಮಾರುಕಟ್ಟೆ ಶುಲ್ಕ (ಸೆಸ್‌) ಸಂಗ್ರಹಿಸಿ ಗುರಿ ಮೀರಿದ ಸಾಧನೆ ಮಾಡಿದೆ.

ಕೃಷಿ ಉತ್ಪನ್ನ ಮಾರಾಟ ಇಲಾಖೆ ಕಳೆದ ಹಣಕಾಸು ವರ್ಷದಲ್ಲಿ ₹18.5 ಕೋಟಿ ಸೆಸ್‌ ಸಂಗ್ರಹಿಸುವ ಗುರಿ ನಿಗದಿ ಪಡಿಸಿತ್ತು. ಇದಕ್ಕೆ ಪ್ರತಿಯಾಗಿ ₹ 0.62 ಕೋಟಿ ಹೆಚ್ಚು ಸೆಸ್‌ ಸಂಗ್ರಹಿಸಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದರೆ, ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೇಲಂಗಾಣ ಹಾಗೂ ನೀರಾವರಿ ಆಶ್ರಿತ ರಾಜ್ಯದ ಬಳ್ಳಾರಿ, ರಾಯಚೂರು, ಸುರಪುರ, ಶಹಾಪುರ, ಬಾಗಲಕೋಟಿ ಹಾಗೂ ಮತ್ತಿತರ ಭಾಗಗಳಲ್ಲಿ ಬೆಳೆದ ಮೆಣಸಿಕಾಯಿ ಮಾರಾಟಕ್ಕೆ ಮಾರುಟ್ಟೆಗೆ ಹರಿದು ಬಂದಿತ್ತು. ಒಂದೇ ದಿನದಲ್ಲಿ ಮೂರು ಬಾರಿ ಮೂರು ಲಕ್ಷಕ್ಕಿಂತ ಹೆಚ್ಚು ಚೀಲ ಮೆಣಸಿನಕಾಯಿ ಆವಕವಾಗಿದ್ದರೆ, ಐದು ಬಾರಿ ಎರಡು ಲಕ್ಷಕಿಂತ ಹೆಚ್ಚು ಚೀಲ ಆವಕವಾಗಿದ್ದವು. ಅಲ್ಲದೆ ಸುಮಾರು 7 ಬಾರಿ ಒಂದು ಲಕ್ಷ ಚೀಲಗಳಷ್ಟು ಮೆಣಸಿನಕಾಯಿ ಆವಕವಾಗಿರುವುದು ದಾಖಲಾಗಿದೆ.

ಕಳೆದ ಮಾರ್ಚ್‌ 4ರಂದು ಒಂದೇ ದಿನದಲ್ಲಿ 4,09,121 ಚೀಲ (1,02,280 ಕ್ವಿಂಟಲ್‌ ) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಮಾರುಕಟ್ಟೆ ಇತಿಹಾಸದಲ್ಲಿಯೇ ಹೊಸ ದಾಖಲೆಯನ್ನು ಸೃಷ್ಟಿಸಿತ್ತು. 

ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯಿಂದ ಇಲ್ಲಿಯ ರೈತರು ತತ್ತರಿಸಿದ್ದರೂ ನೆರೆಯ ಆಂಧ್ರಪ್ರದೇಶ, ತೇಲಂಗಾಣ ರಾಜ್ಯಗಳಲ್ಲಿ ರೈತರು ಬೆಳೆದ ಮೆಣಸಿನಕಾಯಿ ಕಳೆದ ಮೂರು ದಿನಗಳಿಂದ ಪ್ರವಾಹದ ರೂಪದಲ್ಲಿ ಹರಿದು ಬಂದಿರುವುದು ಒಂದು ಇತಿಹಾಸ ಎನ್ನಬಹುದು. ಇದರಿಂದ ಪ್ರಾಂಗಣದಲ್ಲಿ ಕಾಲಿಡಲು ಜಾಗವಿಲ್ಲದಂತಾಗಿ ಬ್ಯಾಡಗಿ ಮಾರುಕಟ್ಟೆ ಪ್ರಾಂಗಣ ಕೆಂಪು ಸಮುದ್ರದಂತೆ ಗೋಚರಿಸುತ್ತಿತ್ತು. ಟೆಂಡರ್‌ಗಿಡಲು ಸ್ಥಳಾವಕಾಶವಿಲ್ಲದೆ, ಮೆಣಸಿನಕಾಯಿ ಚೀಲಗಳನ್ನು ಹೊತ್ತ ನೂರಾರು ವಾಹನಗಳು ಪ್ರಾಂಗಣದ ಹೊರಗೆ ಜಮಾಯಿಸಿದ್ದವು.

ಕಳೆದ ಮಾರ್ಚ್‌ 4 ರಂದು ದಾಖಲೆಯ ಆವಕದ ಮೂಲಕ ಹೊಸ ಇತಿಹಾಸ ಬೆರೆದಿದ್ದ ಬ್ಯಾಡಗಿ ಮಾರುಕಟ್ಟೆ ಮಾರ್ಚ್‌ 11ರಂದು ದರ ಕುಸಿತದ ಆರೋಪದ ಹಿನ್ನೆಲೆಯಲ್ಲಿ ರೈತರ ಆಕ್ರೋಶಕ್ಕೆ ತುತ್ತಾಗಬೇಕಾಯಿತು. ಸಹನೆ ಕಳೆದುಕೊಂಡಿದ್ದ ರೈತರು ಎಪಿಎಂಸಿ ಆಡಳಿತ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ದ್ವಂಸಗೊಳಿಸಿ ಬೆಂಕಿ ಹಚ್ಚಿದ್ದೂ ಅಲ್ಲದೆ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆಯಿಂದ ಅಂದಾಜು ₹5 ಕೋಟಿ ಆಸ್ತಿಗೆ ಹಾನಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT