ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮರ್ಥ ನಾಯಕತ್ವದಿಂದ ಅಭಿವೃದ್ಧಿ ಸಾಧ್ಯ: ಬಸವರಾಜ ಬೊಮ್ಮಾಯಿ

ಬಿಜೆಪಿ ಕಾರ್ಯಕರ್ತರ ಸಭೆ: ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿಕೆ
Published 26 ಮಾರ್ಚ್ 2024, 13:51 IST
Last Updated 26 ಮಾರ್ಚ್ 2024, 13:51 IST
ಅಕ್ಷರ ಗಾತ್ರ

ಹಾನಗಲ್: ‘ದೇಶ ಕಟ್ಟುವ ಸೇವೆಯಲ್ಲಿ ನಮ್ಮದು ಅಳಿಲು ಸೇವೆ ಎಂದುಕೊಂಡು ಮೋದಿ ಅವರ ಕೈ ಬಲಪಡಿಸಿ. ವಿಕಸಿತ ಭಾರತ ಚರಿತ್ರೆಯಲ್ಲಿ ಭಾಗವಹಿಸಿದ ಸಾರ್ಥಕತೆಯನ್ನು ಪಡೆದುಕೊಳ್ಳೋಣ’ ಎಂದು ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ಬೆಳಗಾಲಪೇಟೆ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ರಾಷ್ಟ್ರದ ಸುಭದ್ರತೆ, ಜನರ ಕಲ್ಯಾಣಕ್ಕಾಗಿ ಈ ಚುನಾವಣೆ ಮಹತ್ವದ ಪಡೆದುಕೊಂಡಿದೆ. ದೇಶದ ಸುರಕ್ಷತೆ,  ಅಭಿವೃದ್ಧಿಗೆ ಸಮರ್ಥ ನಾಯಕತ್ವ ಅತ್ಯಗತ್ಯ. ಇದು ಮೋದಿ ಅವರಿಂದ ಮಾತ್ರ ಸಾಧ್ಯ’ ಎಂದರು.

‘ದುರ್ಬಲ ನಾಯಕತ್ವದಿಂದ ಅರಾಜಕತೆ ಸೃಷ್ಠಿಯಾಗುತ್ತದೆ. ಈ ಹಿಂದೆ ಭಾರತವು ವಿದೇಶಗಳ ಮುಂದೆ ಕೈಚಾಚಿ ನಿಲ್ಲುವ ಸ್ಥಿತಿ ಇತ್ತು. ದೇಶದಲ್ಲಿ ಭಯೋತ್ಪಾದಕ ಕೃತ್ಯಗಳ ಸುದ್ಧಿ ಇರುತ್ತಿತ್ತು. ಈ 10 ವರ್ಷಗಳಲ್ಲಿ ಎಲ್ಲೆಲ್ಲೂ ಅಭಿವೃದ್ಧಿಯ ಚರ್ಚೆಗಳು ನಡೆಯುತ್ತಿವೆ. ಭಾರತಕ್ಕೆ ಜನಸಂಖ್ಯೆ ಶಾಪ ಎನ್ನಲಾಗುತ್ತಿತ್ತು. ಪ್ರಧಾನಿ ಮೋದಿ ಆಡಳಿತದಲ್ಲಿ ಜನಸಂಖ್ಯೆಯನ್ನೇ ವರವನ್ನಾಗಿಸಿಕೊಂಡು ಭಾರತವು ಆರ್ಥಿಕ ಬಲಾಢ್ಯತೆ ಹೊಂದಿದೆ. ಇದು ಸದೃಢ ನಾಯಕತ್ವದ ಸಂಕೇತ’ ಎಂದರು.

‘ಹಲವು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ರಾಜ್ಯದಲ್ಲಿ ಸಮರ್ಪಕವಾಗಿ ಆಡಳಿತ ಮಾಡುತ್ತಿಲ್ಲ. ಎಲ್ಲೆಡೆ ವಿದ್ಯುತ್ ಸಮಸ್ಯೆ ಇದೆ. ನನ್ನ ಅವಧಿಯಲ್ಲಿ ಜಾರಿಗೆ ತಂದ ರೈತರ ಮಕ್ಕಳಿಗೆ ‘ವಿದ್ಯಾನಿಧಿ’ ಯೋಜನೆಯನ್ನು ಕಾಂಗ್ರೆಸ್‌ ಸರ್ಕಾರ ನಿಲ್ಲಿಸಿದೆ. ಈಗ ಕಾಂಗ್ರೆಸ್ಸಿವರು ರೈತರಲ್ಲಿಯೂ ಜಾತಿ ಹುಡುಕುತ್ತಿದ್ದಾರೆ’ ಎಂದು ಟೀಕಿಸಿದರು.

‘ನಾವು ಅನುಷ್ಠಾನಕ್ಕೆ ತಂದ ಬಾಳಂಬೀಡ, ಹಿರೇಕಾಂಶಿ ಏತ ನೀರಾವರಿ ಯೋಜನೆಗಳ ಕಾಮಗಾರಿ ಅಂತಿಮ ಹಂತದಲ್ಲಿದ್ದವು. ಈಗಿನ ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿದ್ದರೆ, ಈ ಸಮಯದಲ್ಲಿ
ಹಾನಗಲ್ ತಾಲ್ಲೂಕಿನ ಕೆರೆ-ಕಟ್ಟೆಗಳಲ್ಲಿ ವರದಾ ನದಿ ನೀರು ಸಂಗ್ರಹವಾಗಿರುತ್ತಿತ್ತು. ಹಾನಗಲ್ ಕ್ಷೇತ್ರದಲ್ಲಿ ರಾಜಕೀಯ ಲಾಭಕ್ಕಾಗಿ ಸಮಾಜ ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ರಾಜಕೀಯ ಜಾಗೃತ ತಾಲ್ಲೂಕು ಎನ್ನಿಸಿಕೊಂಡ ಹಾನಗಲ್‌ನಲ್ಲಿ ಸ್ವಾಭಿಮಾನ ಪುನರ್ ಪ್ರತಿಷ್ಠಾಪನೆಗೊಳ್ಳಬೇಕು. ರಾಜಶಕ್ತಿ-ಜನಶಕ್ತಿ ನಡುವಿನ ಸಂಘರ್ಷದಲ್ಲಿ ಜನಶಕ್ತಿಯೇ ಗೆಲ್ಲುತ್ತದೆ’ ಎಂದರು.

ಮಾಜಿ ಸಚಿವ ಮನೋಹರ ತಹಸೀಲ್ದಾರ್, ಮಾಜಿ ಶಾಸಕ ಶಿವರಾಜ ಸಜ್ಜನರ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಮಹೇಶ ಕಮಡೊಳ್ಳಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮಾಲತೇಶ ಸೊಪ್ಪಿನ, ಬಿಜೆಪಿ ಮುಖಂಡ ಶಬ್ಬೀರ್‌ ಅಹ್ಮದ್ ಗುಂಡಿ ಮಾತನಾಡಿದರು.

ಮುಖಂಡರಾದ ರಾಜಶೇಖರ ಕಟ್ಟೆಗೌಡ್ರ, ಸಂದೀಪ ಪಾಟೀಲ, ಎಂ.ಆರ್.ಪಾಟೀಲ, ಶಿವಲಿಂಗಪ್ಪ ತಲ್ಲೂರ, ನಿಂಗಪ್ಪ ಗೊಬ್ಬೇರ, ಮಲ್ಲಿಕಾರ್ಜುನ ಹಾವೇರಿ, ಬಸವರಾಜ ಹಾದಿಮನಿ, ಎ.ಎಸ್.ಬಳ್ಳಾರಿ, ಬಿ.ಎಸ್.ಅಕ್ಕಿವಳ್ಳಿ, ಜಯಲಕ್ಷಿ ಹರಿಜನ, ಎಸ್.ಎಂ.ಕೊತಂಬರಿ, ಗಂಗಾಧರ ನೆಲೋಗಲ್, ರಾಜು ಗೌಳೀ, ರಾಘವೇಂದ್ರ ತಹಸೀಲ್ದಾರ್, ಸಿದ್ಧಪ್ಪ ಹಿರಗಪ್ಪನವರ ಇದ್ದರು.

ಸಭೆಗೆ ಆಗಮಿಸುವುದಕ್ಕೂ ಮುನ್ನ ಬಸವರಾಜ ಬೊಮ್ಮಾಯಿ ಅವರು ಆಲದಕಟ್ಟಿ ನಿಸ್ಸೀಮೇಶ್ವರ ದೇವಸ್ಥಾನ ಮತ್ತು ಬೆಳಗಾಲಪೇಟೆ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT