ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಬೀಜ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ: ಡಿಸಿ

ಜಿಲ್ಲೆಯಲ್ಲಿ ಬೀಜ- ರಸಗೊಬ್ಬರ ಕೊರತೆ ಇಲ್ಲ: ದರಪಟ್ಟಿ ಪ್ರದರ್ಶನ ಕಡ್ಡಾಯ
Published 22 ಮೇ 2024, 4:42 IST
Last Updated 22 ಮೇ 2024, 4:42 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಹಾವೇರಿ: ‘ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ. ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿವಿಧ ಸಂಸ್ಥೆಗಳಿಂದ ಅಗತ್ಯಕ್ಕೆ ಅನುಗುಣವಾಗಿ ಹಂತ- ಹಂತವಾಗಿ ಸರಬರಾಗುತ್ತಿದ್ದು, ಯಾವುದೇ ಕೊರತೆ ಇರುವುದಿಲ್ಲ. ಜಿಲ್ಲೆಯ ಸರಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟಗಾರರು ಮಾರಾಟ ಮಳಿಗೆಯಲ್ಲಿ ದರಪಟ್ಟಿಯನ್ನು ರೈತರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚಿಸಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು, ದಾಸ್ತಾನು ಮತ್ತು ವಿತರಣೆ ಕುರಿತು ಕೃಷಿ ಇಲಾಖೆ ಅಧಿಕಾರಿಗಳು, ಬಿತ್ತನೆ ಬೀಜ ಮತ್ತು ರಸಗೊಬ್ಬರ ಸರಬರಾಜು ಸಂಸ್ಥೆಯ ಪ್ರತಿನಿಧಿಗಳು ಹಾಗೂ ಜಿಲ್ಲೆಯ ಪರಿಕರ ಮಾರಾಟಗಾರರ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಸರಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟಗಾರರು ಮಾರಾಟ ಮಳಿಗೆಯಲ್ಲಿ ದರಪಟ್ಟಿಯನ್ನು ರೈತರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ನಿರ್ದೇಶನ ನೀಡಿದರು.

ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ಬಿಲ್ ನೀಡದೇ ಇರುವುದು, ಅವಧಿ ಮೀರಿದ ಕೃಷಿ ಪರಿಕರಗಳನ್ನು ವಿತರಣೆ ಮಾಡುವುದು ಅಥವಾ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕೃತ ಅಭಾವ ಸೃಷ್ಟಿ ಮಾಡುವುದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು ಮಾರಾಟಗಾರರ ಪರವಾನಿಗೆಯನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು.

ಮಾರಾಟಗಾರರು ರಸಗೊಬ್ಬರ ವಿತರಣೆ ಮಾಡುವಾಗ ಕಡ್ಡಾಯವಾಗಿ ‘ಪಾಯಿಂಟ್ ಆಫ್ ಸೇಲ್’ ಯಂತ್ರದ ಮೂಲಕ ಮಾರಾಟ ಮಾಡಬೇಕು. ಈ ಕುರಿತು ರೈತರಿಗೆ ಸೂಕ್ತ ತಿಳಿವಳಿಕೆ ನೀಡಿ ಕಡ್ಡಾಯವಾಗಿ ಆಧಾರ್‌ ಸಂಖ್ಯೆಯನ್ನು ಪಡೆದು ರಸಗೊಬ್ಬರ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದರು.

ಬೀಜ ವಿತರಣೆಗೆ ಕ್ರಮ:

ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.27 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಪ್ರಮುಖವಾಗಿ ಗೋವಿನಜೋಳ, ಸೋಯಾ ಅವರೆ, ಶೇಂಗಾ ಮತ್ತು ಇತರೆ ಬೆಳೆಗಳ ಬೀಜ ವಿತರಣೆಗಾಗಿ 19 ರೈತ ಸಂಪರ್ಕ ಕೇಂದ್ರಗಳ ಜೊತೆಗೆ 23 ಹೆಚ್ಚುವರಿ ಬೀಜ ಮಾರಾಟ ಕೇಂದ್ರಗಳ ಮೂಲಕ ಬೀಜ ವಿತರಣೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ರೈತರು ಡಿಎಪಿ ಮತ್ತು ಯೂರಿಯಾ ರಸಗೊಬ್ಬರಗಳಿಗೆ ಪರ್ಯಾಯವಾಗಿ ಮಾರುಕಟ್ಟೆಯಲ್ಲಿ ದೊರೆಯುವ 500 ಮಿಲಿ ಬಾಟಲ್ ನ್ಯಾನೋ ಡಿಎಪಿ ಮತ್ತು ನ್ಯಾನೊ ಯೂರಿಯಾಗಳನ್ನು ಪ್ರತಿ ಎಕರೆಗೆ ಬಳಸಬಹುದಾಗಿದೆ. ಬಿತ್ತನೆ ವೇಳೆ ಪ್ರತಿ ಕೆಜಿಗೆ 4 ಎಂ.ಎಲ್ ನ್ಯಾನೊ ಡಿಎಪಿಯಿಂದ ಉಪಚರಿಸಬೇಕು. 15ರಿಂದ 20 ದಿನ ಇರುವಾಗ ಪ್ರತಿ ಎಕರೆಗೆ 500 ಎಂ.ಎಲ್ ನ್ಯಾನೊ ಡಿಎಪಿ ಸಿಂಪರಣೆ ಮಾಡಬೇಕು ಎಂದರು.

ರೈತರು ರಸಗೊಬ್ಬರವನ್ನು ಬಳಸುವಾಗ ಕೇವಲ ಒಂದೇ ಸಂಸ್ಥೆಯ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೇ ಡಿಎಪಿ ಜೊತೆಗೆ ಗಂಧಕ ಒದಗಿಸುವ 20:20:13 ಹಾಗೂ ಇತರೆ ಕಾಂಪ್ಲೆಕ್ಸ್ ಗೊಬ್ಬರಗಳಾದ 15:15:15, 10:26:26ಗಳನ್ನು ಬಳಸಬೇಕು. ಇವುಗಳ ಬಳಕೆಯಿಂದ ಮಣ್ಣಿಗೆ ಪೋಟ್ಯಾಷ ಗೊಬ್ಬರ ಒದಗಿಸಿದಂತಾಗುತ್ತದೆ. ರೈತರು ಬಿತ್ತನೆ ಕೈಗೊಳ್ಳುವಾಗ ಭೂಮಿಯಲ್ಲಿ ಅವಶ್ಯಕ ತೇವಾಂಶ ಇರುವುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಂಡು ಬಿತ್ತನೆ ಮಾಡಬೇಕು. ಇಲ್ಲವಾದಲ್ಲಿ ಬೀಜಗಳು ಸರಿಯಾಗಿ ಮೊಳಕೆಯೊಡೆಯದೇ ಉತ್ತಮ ಬೆಳೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್, ಕೃಷಿ ಇಲಾಖೆ ಅಧಿಕಾರಿಗಳು, ರಸಗೊಬ್ಬರ ಹಾಗೂ ಬೀಜ ಮಾರಾಟಗಾರರು ಉಪಸ್ಥಿತರಿದ್ದರು.

Highlights - 19 ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆ 23 ಹೆಚ್ಚುವರಿ ಬೀಜ ಮಾರಾಟ ಕೇಂದ್ರಗಳಲ್ಲಿ ಮಾರಾಟ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರುವಂತಿಲ್ಲ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT