ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ: ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಇಂದಿನಿಂದ

Published 22 ಫೆಬ್ರುವರಿ 2024, 15:53 IST
Last Updated 22 ಫೆಬ್ರುವರಿ 2024, 19:30 IST
ಅಕ್ಷರ ಗಾತ್ರ

ಹಾವೇರಿ: ಪೌರಾಣಿಕ ಹಾಗೂ ಇತಿಹಾಸ ಪ್ರಸಿದ್ಧ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಫೆ.23ರಿಂದ ಆರಂಭಗೊಳ್ಳಲಿದ್ದು, ನಗರದಲ್ಲಿ ಸಂಭ್ರಮ ಕಳೆಗಟ್ಟಿದೆ.

ನಗರದೆಲ್ಲೆಡೆ ಕಟೌಟ್, ಬ್ಯಾನರ್‌ಗಳು ರಾರಾಜಿಸುತ್ತಿವೆ. ಹುಕ್ಕೇರಿಮಠದ ಬಳಿ ದ್ವಾರ ಬಾಗಿಲು, ಗಾಂಧಿ ರಸ್ತೆಯ ಚೌತಮನಿ ಕಟ್ಟೆಯಲ್ಲಿ ಭವ್ಯಮಂಟಪ ನಿರ್ಮಾಣಗೊಳ್ಳುತ್ತಿದೆ.

ಮಹಾತ್ಮ ಗಾಂಧಿ ರಸ್ತೆಯಲ್ಲಿ ದ್ಯಾಮವ್ವನ ಪಾದಗಟ್ಟೆ ಇದೆ. ಇದೇ ರಸ್ತೆಯಲ್ಲಿ ದ್ಯಾಮವ್ವ ದೇವಿ ಚೌತಮನಿಕಟ್ಟಿ ಇದ್ದು, ಜಾತ್ರೆ ವೇಳೆ ದ್ಯಾಮವ್ವದೇವಿ ಮೆರವಣಿಗೆಯಲ್ಲಿ ದೇವಸ್ಥಾನದಿಂದ ಹೊರಟು ಚೌತಮನಿಕಟ್ಟೆಗೆ ಬಂದು ಆಸೀನಳಾಗುತ್ತಾಳೆ. ಎಲ್ಲ ರೀತಿಯ ವಿಶೇಷ ಪೂಜಾ ಕಾರ್ಯಗಳು ಇದೇ ಕಟ್ಟೆಯಲ್ಲಿ ನಡೆಯಲಿವೆ.

ಭವ್ಯ ಮೆರವಣಿಗೆ: ಫೆ.27ರಂದು ನಗರದ ದೇವಸ್ಥಾನಗಳಿಗೆ ನೈವೇದ್ಯ ಮಾಡಿಸುವುದು, ಸಂಜೆ 4.30ಕ್ಕೆ ವಿವಿಧ ವಾದ್ಯವೈಭವ, ಕಲಾ ತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ದೇವಿಯ ಉತ್ಸವ ನಡೆಯಲಿದೆ.

ದ್ಯಾಮವ್ವನ ಗುಡಿಯಿಂದ ನಾಯ್ಕರಚಾಳ, ಹಳೆಅಂಚೆ ಕಚೇರಿ ರಸ್ತೆ, ಕಮಲ ಕಲ್ಯಾಣ ಮಂಟಪ ರಸ್ತೆ, ಜೈನರ ರಸ್ತೆ, ಹಳೆ ಊರಿನ ಓಣಿ, ಶ್ರೀರಾಮದೇವರ ಗುಡಿ, ಗಾಂಧಿವೃತ್ತ, ಕಲ್ಲುಮಂಟಪ ರಸ್ತೆ, ಬಸ್ತಿಓಣಿ, ತರಕಾರಿ ಮಾರುಕಟ್ಟೆ, ಗೌಳಿಗಲ್ಲಿ, ಯಾಲಕ್ಕಿ ಓಣಿ, ಗುಜ್ಜರ ಗುಡಿ, ಪುರದ ಓಣಿ, ಚೌಡೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಸುಭಾಸ ವೃತ್ತ, ಮೇಲಿನಪೇಟೆ, ಗಾಂಧಿರಸ್ತೆ, ಹಳೆಚಾವಡಿ ಮೂಲಕ ಮೆರವಣಿಗೆ ಸಾಗಿ, ಫೆ.28ರ ನಸುಕಿನ 4ಗಂಟೆಗೆ ಚೌತಮನಿ ಕಟ್ಟೆಯಲ್ಲಿ ಗ್ರಾಮದೇವತೆ ಪ್ರತಿಷ್ಠಾಪನೆಗೊಳ್ಳಲಿದ್ದಾಳೆ.

ಬಾಣಂತಿ ಕಲ್ಲಿಗೆ ಪೂಜೆ: ನೂರು ವರ್ಷಗಳ ಹಿಂದೆ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರೆ ನಡೆದಾಗ ಚರಗ (ಹುಲುಸು) ಚೆಲ್ಲುವ ಪದ್ಧತಿ ಇತ್ತು. ಚರಗ ಚೆಲ್ಲುವ ಹಾಗೂ ಚರಗ ಬೇರೆ ಕಡೆ ಹೋಗದಂತೆ ನೋಡಿಕೊಳ್ಳಲು ಗ್ರಾಮದ ನಾಲ್ಕು ಗಡಿಗಳಲ್ಲಿ ಕಾಯುತ್ತಿರುವಾಗ ಹೊಂಬರಡಿ ಗ್ರಾಮದ ವ್ಯಕ್ತಿಯೊಬ್ಬ ದೇವಿ ಚರಗವನ್ನು ತೆಗೆದುಕೊಂಡು ಕನಕಾಪುರ ಮಾರ್ಗವಾಗಿ ತನ್ನ ಗ್ರಾಮಕ್ಕೆ ಹೋಗುತ್ತಿದ್ದನು. ಆಗ ಗಡಿ ಕಾಯುತ್ತಿದ್ದ ಭಕ್ತರು ಆತನನ್ನು ಬೆನ್ನಟ್ಟಿದಾಗ ತಪ್ಪಿಸಿಕೊಂಡು ಓಡಿದ್ದಾನೆ.

ಅದೇ ಮಾರ್ಗದಲ್ಲಿ ಬರುತ್ತಿದ್ದ ಮೊಸರು ಬಾರುವ ಬಾಣಂತಿ ಆತನ ರಕ್ಷಣೆಗೆ ನಿಂತಳು. ಇಬ್ಬರೂ ಮರದ ಪೊಟರೆಯಲ್ಲಿ ಅಡಗಿ ಕುಳಿತಿದ್ದರು. ಗಡಿಕಾಯುತ್ತಿದ್ದ ವ್ಯಕ್ತಿಯು ಇಬ್ಬರನ್ನೂ ಕೊಲೆ ಮಾಡಿದ  ಎಂಬುದು ಪೂರ್ವಜರ ನುಡಿ. ಇದನ್ನು ಸಾಕ್ಷೀಕರಿಸಲು ಹಾವೇರಿಯಿಂದ ಕನಕಾಪುರ ಮಾರ್ಗವಾಗಿ ಹೊಂಬರಡಿಗೆ ತೆರಳುವಾಗ ಬಾಣಂತಿ ಕಲ್ಲು ಇದ್ದು, ಅದನ್ನು ಇಂದಿಗೂ ಭಕ್ತರು ಪೂಜಿಸುತ್ತಾರೆ.

ದ್ಯಾಮವ್ವ ದೇವಿ 
ದ್ಯಾಮವ್ವ ದೇವಿ 

ದ್ಯಾಮವ್ವನ ಓಣಿಗೆ ಅಂಕಿ

‘ದ್ಯಾಮವ್ವನ ಓಣಿಯಲ್ಲಿ ಫೆ.23ರಂದು ಸಂಜೆ 5ಕ್ಕೆ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಅಂಕಿಹಾಕಿ ಇದರ ವ್ಯಾಪ್ತಿಯಲ್ಲಿ ಮಾತ್ರ ಕಟ್ಟುನಿಟ್ಟಿನ ಆಚರಣೆ ನಡೆಯಲಿದೆ’ ಎಂದು ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಅಶೋಕ ಮುದಗಲ್ ಹೇಳಿದಿರು.

‘ಅಂಕಿ ಹಾಕಿದ ಬಳಿಕ ಊರಿಂದ ಬೇರೆ ಊರಿಗೆ ಹೋಗಬಾರದು ಪಾದರಕ್ಷೆ ಹಾಕಿಕೊಂಡು ಓಡಾಡಬಾರದು ರೊಟ್ಟಿ ಮಾಡಬಾರದೆಂಬ ಅನೇಕ ಧಾರ್ಮಿಕ ನಿಯಮಗಳಿವೆ. ಊರು ದೊಡ್ಡದಿರುವುದರಿಂದ ಎಲ್ಲ ನಿಯಮಗಳನ್ನು ಇಡೀ ನಗರಕ್ಕೆ ಅನ್ವಯಿಸಲು ಕಷ್ಟ. ಎಲ್ಲ ಜನರಿಗೆ ತೊಂದರೆ ಬೇಡ ಎಂಬ ಕಾರಣಕ್ಕೆ ದ್ಯಾಮವ್ವನ ಓಣಿಗೆ ಸೀಮಿತಗೊಳಿಸಿದ್ದೇವೆ. ಯುಗಾದಿ ಹಬ್ಬದ ಬಳಿಕ ಹೊಸಮನೆ ನಿರ್ಮಾಣ ಕಾರ್ಯ ಮದುವೆ ಕಾರ್ಯಗಳನ್ನು ನಡೆಸಬಹುದು’ ಎಂದರು.

ಮಾರ್ಚ್‌ 2ಕ್ಕೆ ಓಕುಳಿ ಫೆ.28ರಂದು 5 ಗಂಟೆಗೆ ರಂಗ ಹೊಯ್ಯುವುದು ಉಡಿ ತುಂಬಿಸುವುದು ಹಣ್ಣು-ಕಾಯಿ ನೈವೇದ್ಯ ಸಾರ್ವಜನಿಕರಿಂದ ವಿವಿಧ ಸೇವೆ ಹರಕೆ ಕಾಣಿಕೆ ಸಮರ್ಪಣೆ ನಡೆಯಲಿದೆ. ಮಾರ್ಚ್‌ 2ರವರೆಗೆ ದೇವಿಗೆ ಸೇವೆ ಮುಂದುವರಿಯಲಿದ್ದು ಅಂದು ಸಂಜೆ 4ಗಂಟೆಗೆ ದೇವಿಯನ್ನು ಗಡಿಗೆ ಕಳುಹಿಸಲಾಗುತ್ತದೆ. ಜಾತ್ರೆ ನಡೆಯುವ ವರ್ಷದಲ್ಲಿ ನಗರದಲ್ಲಿ ಹೋಳಿ ಹಬ್ಬ ಆಚರಿಸದಿರಲು ತೀರ್ಮಾನಿಸಲಾಗಿದೆ. ಆದರೆ ಮಾರ್ಚ್‌ 2ರಂದು ಮಧ್ಯಾಹ್ನ 2.30 ಗಂಟೆಗೆ ಚೌತಮನಿಕಟ್ಟಿಯಿಂದ ಹುಕ್ಕೇರಿಮಠದವರೆಗೆ ಕುಂಕುಮ ಭಂಡಾರದಿಂದ ಓಕುಳಿ ಆಡುವ ಸಂಭ್ರಮ ನಡೆಯಲಿದೆ. ಮಾ.5ರಂದು ಬೆಳಿಗ್ಗೆ 10ಗಂಟೆಗೆ ದ್ಯಾಮವ್ವ ದೇವಿಯನ್ನು ಗುಡಿ ತುಂಬಿಸುವುದು ಕ್ಷೀರಾಭಿಷೇಕ ಚಂಡಿಪಾರಾಯಣ ನಡೆಯಲಿವೆ ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬೆಟ್ಟಪ್ಪ ಕುಳೇನೂರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT